DFC: ಡಿಮ್ಯಾಂಡ್ ನೋಟೀಸ್; ಮೈಸೂರಿನಲ್ಲಿ ಡಿಎಫ್​ಸಿ ತೆರೆದ ಐಟಿ ಇಲಾಖೆ; ಏನಿದು ಟ್ಯಾಕ್ಸ್ ಡಿಮ್ಯಾಂಡ್?

|

Updated on: Dec 15, 2023 | 2:47 PM

Demand facilitation centre: ಟ್ಯಾಕ್ಸ್ ಡಿಮ್ಯಾಂಡ್ ಪರಿಹಾರ ಒದಗಿಸಲು ಆದಾಯ ತೆರಿಗೆ ಇಲಾಖೆ ವಿವಿಧೆಡೆ ಡಿಮ್ಯಾಂಡ್ ಫೆಸಿಲಿಟೇಶನ್ ಸೆಂಟರ್​ಗಳನ್ನು ತೆರೆಯುತ್ತದೆ. ಮೈಸೂರಿನಲ್ಲೂ ಒಂದು ಡಿಫ್​ಸಿ ಆರಂಭಿಸಲಾಗಿದೆ. ತೆರಿಗೆ ಪಾವತಿದಾರರಿಗೆ ಇಲಾಖೆಯಿಂದ ಕಳುಹಿಸಲಾದ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್​ಗಳನ್ನು ಡಿಎಫ್​ಸಿಯಲ್ಲಿ ನಿರ್ವಹಿಸಲಾಗುತ್ತದೆ. ತೆರಿಗೆ ಪಾವತಿದಾರ ಪಾವತಿಸಿದ ತೆರಿಗೆ ಹಣ, ನಿಜವಾಗಿಯೂ ಅವರು ಕಟ್ಟಬೇಕಾದ ತೆರಿಗೆ ಹಣದಲ್ಲಿ ವ್ಯತ್ಯಾಸ ಇದ್ದರೆ ಇಲಾಖೆಯಿಂದ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಜಾರಿಯಾಗುತ್ತದೆ.

DFC: ಡಿಮ್ಯಾಂಡ್ ನೋಟೀಸ್; ಮೈಸೂರಿನಲ್ಲಿ ಡಿಎಫ್​ಸಿ ತೆರೆದ ಐಟಿ ಇಲಾಖೆ; ಏನಿದು ಟ್ಯಾಕ್ಸ್ ಡಿಮ್ಯಾಂಡ್?
ಆದಾಯ ತೆರಿಗೆ ಇಲಾಖೆ
Follow us on

ಮೈಸೂರು, ಡಿಸೆಂಬರ್ 15: ಐಟಿ ರಿಟರ್ನ್ ಫೈಲ್ ಮಾಡಲು ಈ ತಿಂಗಳ 31ಕ್ಕೆ ಡೆಡ್​ಲೈನ್ ಇದೆ. ಇನ್ನೂ ಹಲವು ಮಂದಿ ರಿಟರ್ನ್ ಸಲ್ಲಿಸಿಲ್ಲ. ಜುಲೈ 31ಕ್ಕೆ ಇದ್ದ ಡೆಡ್​ಲೈನ್ ಅನ್ನು ವರ್ಷಾಂತ್ಯದವರೆಗೂ ವಿಸ್ತರಿಸಲಾಗಿತ್ತು. ಆದರೆ, ಡಿಸೆಂಬರ್ 31ರ ಬಳಿಕ ರಿಟರ್ನ್ ಫೈಲ್ ಮಾಡಿದರೆ ದಂಡ, ಹೆಚ್ಚುವರಿ ಶುಲ್ಕ ಇತ್ಯಾದಿ ಪಾವತಿಸಬೇಕಾಗುತ್ತದೆ. ಇನ್ನು, ಐಟಿ ರಿಟರ್ನ್ ಫೈಲ್ ಮಾಡಿರುವ ಕೆಲವರಿಗೆ ಇಲಾಖೆ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ (Tax demand notice) ನೀಡಿದೆ. ಈ ಸಂಬಂಧ ಗೊಂದಲ ಬಗೆಹರಿಸಲು ಮತ್ತು ತೆರಿಗೆ ಬಾಕಿ ಪಾವತಿಸಲು ಸಹಾಯವಾಗಿ ವಿವಿಧೆಡೆ ಡಿಮ್ಯಾಂಡ್ ಫೆಸಿಲಿಟೇಶನ್ ಸೆಂಟರ್​ಗಳನ್ನು (DFC- Demand Facilitation Centre) ಆದಾಯ ತೆರಿಗೆ ಇಲಾಖೆ ತೆರೆದಿದೆ. ಮೈಸೂರಿನಲ್ಲೂ ಇಂಥದ್ದೊಂದು ಸೆಂಟರ್ ಅನ್ನು ಇಲಾಖೆ ಆರಂಭಿಸಿದೆ.

ಟ್ಯಾಕ್ಸ್ ಡಿಮ್ಯಾಂಡ್ ಪ್ರಕರಣಗಳನ್ನು ವಿಲೇವಾರಿ ಮಾಡುವುದು ಈ ಕೇಂದ್ರದ ಉದ್ದೇಶ. ಅದಕ್ಕಾಗಿ ನಿಗದಿತ ಸಹಾಯವಾಣಿ ನಂಬರ್ (1800 309 0130) ಒದಗಿಸಲಾಗಿದೆ.

ಏನಿದು ಟ್ಯಾಕ್ಸ್ ಡಿಮ್ಯಾಂಡ್?

ಐಟಿ ರಿಟರ್ನ್ ಫೈಲ್ ಮಾಡುವಾಗ ಬಾಕಿ ಇರುವ ತೆರಿಗೆಯನ್ನು ತೆರಿಗೆದಾರರು ಪಾವತಿಸಬೇಕಾಗುತ್ತದೆ. ಹೀಗೆ ಪಾವತಿಸಲಾದ ಹಣಕ್ಕೂ ತೆರಿಗೆದಾರ ನಿಜವಾಗಿ ಕಟ್ಟಬೇಕಾಗಿರುವ ಹಣಕ್ಕೂ ಏನಾದರೂ ವ್ಯತ್ಯಾಸ ಕಂಡು ಬಂದರೆ ಆದಾಯ ತೆರಿಗೆ ಇಲಾಖೆಯು ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಅನ್ನು ಕಳುಹಿಸುತ್ತದೆ.

ಇದನ್ನೂ ಓದಿ: IT Returns: ವಿಳಂಬವಾಗಿ ಐಟಿ ರಿಟರ್ನ್ಸ್ ಸಲ್ಲಿಸುವ ಕಾಲಾವಕಾಶವೂ ಮುಗಿಯುತ್ತಿದೆ; ಡಿಸೆಂಬರ್ 31ರ ಡೆಡ್​ಲೈನ್ ಮರೆಯದಿರಿ

ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ವೆಬ್​ಸೈಟ್​ನಲ್ಲಿ ಈ ಡಿಮ್ಯಾಂಡ್ ನೋಟೀಸ್​ಗೆ ಸ್ಪಂದಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಅಥವಾ ಡಿಎಫ್​ಸಿ ಕೇಂದ್ರಗಳ ಮೂಲಕವೂ ಈ ಕೆಲಸ ಮಾಡಬಹುದು.

ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್​ಗೆ ಆನ್​ಲೈನ್​ನಲ್ಲಿ ಹೇಗೆ ಪ್ರತಿಕ್ರಿಯಿಸುವುದು?

  • ಆದಾಯ ತೆರಿಗೆ ಇಲಾಖೆಯ ಇಫೈಲಿಂಗ್ ವೆಬ್​ಸೈಟ್​ಗೆ ಲಾಗಿನ್ ಆಗಬೇಕು: www.incometax.gov.in/iec/foportal/
  • ಪೆಂಡಿಂಗ್ ಆ್ಯಕ್ಷನ್ಸ್ ಅಡಿಯಲ್ಲಿ ರೆಸ್ಪಾನ್ಸ್ ಟು ಔಟ್​ಸ್ಟ್ಯಾಂಡಿಂಗ್ ಡಿಮ್ಯಾಂಡ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ನೀವು ಬಾಕಿ ಉಳಿಸಿಕೊಂಡಿದ್ದಿರಬಹುದಾದ ಡಿಮ್ಯಾಂಡ್ ನೋಟೀಸ್​ಗಳ ಲಿಸ್ಟ್ ಇರುತ್ತದೆ.
  • ಡಿಮ್ಯಾಂಡ್ ನೋಟೀಸ್​ನಲ್ಲಿರುವ ಸಂಗತಿ ನಿಜವಾಗಿದ್ದು, ನೀವು ತೆರಿಗೆ ಪಾವತಿಸದೇ ಇದ್ದಿದ್ದರೆ, ಅದೇ ಪೋರ್ಟಲ್​ನಲ್ಲಿ ಇ-ಪೇ ಟ್ಯಾಕ್ಸ್ ಪೇಜ್​ಗೆ ಹೋಗಿ ಹಣ ಪಾವತಿಸಬಹುದು.
  • ಒಂದು ವೇಳೆ, ನೀವು ಡಿಮ್ಯಾಂಡ್ ನೋಟೀಸ್​ನಲ್ಲಿ ತೆರಿಗೆ ಬಾಧ್ಯತೆ ಇದೆ ಎನ್ನಲಾದ ಹಣವನ್ನು ಅ ಮುಂಚೆಯೇ ಪಾವತಿಸಿದ್ದರೆ, ಚಲನ್ ಇತ್ಯಾದಿ ವಿವರವನ್ನು ನೀಡಬೇಕಾಗುತ್ತದೆ.
  • ಹಾಗೆಯೇ, ಡಿಮ್ಯಾಂಡ್ ನೋಟೀಸ್​ನಲ್ಲಿರುವ ಅಂಶದ ಬಗ್ಗೆ ನಿಮಗೆ ಏನಾದರೂ ತಗಾದೆ ಇದ್ದರೆ, ಸೂಕ್ತ ಕಾರಣಗಳನ್ನು ಒದಗಿಸಿ ಸಬ್ಮಿಟ್ ಕೊಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ