ಸಿಮ್ ಬದಲಾಯಿಸಲು, ನಂಬರ್ ಪೋರ್ಟ್ ಮಾಡಲು ಜುಲೈ 1ರಿಂದ ಹೊಸ ನಿಯಮ

|

Updated on: Jun 30, 2024 | 7:00 PM

New guidelines for sim swapping and MNP: ಸಿಮ್ ಕಾರ್ಡ್​ಗೆ ನಂಬರ್ ಪೋರ್ಟ್ ಮಾಡಲು ಇರುವ ನಿಯಮವನ್ನು ಬದಲಾಯಿಸಲಾಗಿದೆ. ದೂರವಾಣಿ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಇತ್ತೀಚೆಗೆ ಕೆಲ ನಿಯಮಗಳನ್ನು ಪರಿಷ್ಕರಿಸಿದೆ. ಅದರಂತೆ ಹೊಸ ಸಿಮ್​ಗೆ ಮೊಬೈಲ್ ನಂಬರ್ ಅನ್ನು ಪೋರ್ಟ್ ಮಾಡಲು ಏಳು ದಿನವಾದರೂ ಕಾಯಬೇಕಾಗುತ್ತದೆ. ಜುಲೈ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

ಸಿಮ್ ಬದಲಾಯಿಸಲು, ನಂಬರ್ ಪೋರ್ಟ್ ಮಾಡಲು ಜುಲೈ 1ರಿಂದ ಹೊಸ ನಿಯಮ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ, ಜೂನ್ 30: ಸಿಮ್ ಕಾರ್ಡ್ ಬದಲಾವಣೆ ಮತ್ತು ಮೊಬೈಲ್ ನಂಬರ್ ಪೋರ್ಟ್ ಮಾಡುವ ವಿಚಾರದಲ್ಲಿ ನಿಯಮಗಳ ಬದಲಾವಣೆ ಆಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್, ಹೆಚ್ಚುತ್ತಿರುವ ಸಿಮ್ ಕಾರ್ಡ್ ಹಗರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಇತ್ತೀಚೆಗೆ ಕೆಲ ನಿಯಮಗಳನ್ನು ಪರಿಷ್ಕರಿಸಿದೆ. ಈ ಪ್ರಕಾರ ಜುಲೈ 1ರ ಬಳಿಕ ವಂಚಕರು ಸಿಮ್ ಕಾರ್ಡ್ ಬದಲಾಯಿಸುವ ಕೆಲಸವಾಗಲೀ, ಮೊಬೈಲ್ ನಂಬರ್ ಪೋರ್ಟ್ ಮಾಡುವ ಕೆಲಸವಾಗಲೀ ಕಷ್ಟವಾಗಲಿದೆ.

ಸಿಮ್ ಕಾರ್ಡ್ ಕಳೆದುಹೋದರೆ…?

ಈಗಿರುವ ನಿಯಮದ ಪ್ರಕಾರ ಸಿಮ್ ಕಾರ್ಡ್ ಕಳೆದುಹೋದರೆ ಕೂಡಲೇ ಸಿಮ್ ಬ್ಲಾಕ್ ಮಾಡಿಸಿ, ಹೊಸ ಸಿಮ್ ಅನ್ನು ಪಡೆದು ಆ್ಯಕ್ಟಿವೇಟ್ ಮಾಡಿಸಬಹುದು. ಅಥವಾ ಹೊಸ ಸಿಮ್ ಖರೀದಿಸಿದ ಬಳಿಕ ಹಳೆಯ ಸಿಮ್ ಮರಳಿಸಿ ಹೊಸದಕ್ಕೆ ನಂಬರ್ ಆ್ಯಕ್ಟಿವೇಟ್ ಮಾಡಿಸಬಹುದು. ಈಗ ಈ ನಿಯಮದಲ್ಲಿ ಟ್ರಾಯ್ ಬದಲಾವಣೆ ಮಾಡಿದೆ. ಹೊಸ ಸಿಮ್ ಪಡೆದು ಅದಕ್ಕೆ ಹಿಂದಿನ ಸಿಮ್ ನಂಬರ್ ಅನ್ನು ಪೋರ್ಟ್ ಮಾಡಲು ಕನಿಷ್ಠ ಏಳು ದಿನವಾದರೂ ಕಾಯಬೇಕಾಗುತ್ತದೆ.

ಹಾಗೆಯೇ, ಸಿಮ್ ಬದಲಾಯಿಸುವಾಗ ಟೆಲಿಕಾಂ ಆಪರೇಟಿಂಗ್ ಕಂಪನಿಗಳು ಯೂನಿಕ್ ಪೋರ್ಟಿಂಗ್ ಕೋಡ್ ಅಥವಾ ಯುಪಿಸಿ ಕೋಡ್ ಅನ್ನು ನೀಡುತ್ತವೆ. ಇದು ಮೊಬೈಲ್ ನಂಬರ್ ಅನ್ನು ಬೇರೆ ಸಿಮ್​ಗೆ ವರ್ಗಾಯಿಸುವ ಕಾರ್ಯದ ಮೊದಲ ಹಂತವಾಗಿರುತ್ತದೆ. ಈ ಎಂಟು ಅಂಕಿಗಳ ಕೋಡ್ ಅನ್ನು ಹಾಕಿದ ಬಳಿಕ ಮೊಬೈಲ್ ನಂಬರ್ ಅನ್ನು ಬೇರೆ ಸಿಮ್​ಗೆ ಪೋರ್ಟ್ ಮಾಡಬಹುದು. ಇಲ್ಲಿ ಹೊಸ ನಿಯಮದ ಪ್ರಕಾರ ಸಿಮ್ ನಿಷ್ಕ್ರಿಯಗೊಂಡು ಏಳು ದಿನಗಳವರೆಗೆ ಟೆಲಿಕಾಂ ಆಪರೇಟರ್​ಗಳು ಯುಪಿಸಿ ಕೋಡ್ ಅನ್ನು ಒದಗಿಸುವಂತಿಲ್ಲ ಎನ್ನುವ ನಿಯಮವನ್ನು ಟ್ರಾಯ್ ಸೇರಿಸಿದೆ.

ಇದನ್ನೂ ಓದಿ: ಹಣಕಾಸು ಅಕ್ರಮ ತಡೆಯಲು ಭಾರತ ಕೈಗೊಂಡ ಕ್ರಮಕ್ಕೆ ಎಫ್​ಎಟಿಎಫ್ ಮೆಚ್ಚುಗೆ; ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಭಾರತ

ಟ್ರಾಯ್​ನಿಂದ ಯಾಕೆ ಈ ಕ್ರಮ?

ದೇಶಾದ್ಯಂತ ಸಿಮ್ ಸ್ವ್ಯಾಪಿಂಗ್ ಹಗರಣಗಳು, ಮೊಬೈಲ್ ನಂಬರ್ ದುರುಪಯೋಗಡಿಸಿಕೊಳ್ಳುವುದು ಇತ್ಯಾದಿ ವಂಚನೆಗಳು ನಡೆಯುತ್ತಿರುವುದು ಹೆಚ್ಚಿದೆ. ಇದನ್ನು ತಡೆಯಲು ಟ್ರಾಯ್ ಈ ನಿಯಮ ರೂಪಿಸಿರಬಹುದು ಎನ್ನಲಾಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಅಧಿಕೃತವಾಗಿ ಕಾರಣ ನೀಡಿಲ್ಲ. ದೂರಸಂಪರ್ಕ ಇಲಾಖೆ ಹಾಗೂ ಹಲವು ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಹೊಸ ನಿಯಮಗಳನ್ನು ತರಲಾಗಿದೆ ಎಂದು ಅದು ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ