ಬೆಂಗಳೂರು: ಜನಪ್ರಿಯ ಮತ್ತು ಅತಿಹೆಚ್ಚು ಬಳಕೆಯಲ್ಲಿರುವ ಕಾಲರ್ ಐಡಿ ಪ್ಲಾಟ್ಫಾರ್ಮ್ ಟ್ರ್ಯೂಕಾಲರ್ (Caller ID App Truecaller) ಸಂಸ್ಥೆ ಬೆಂಗಳೂರಿನಲ್ಲಿ ಕಚೇರಿ ತೆರೆದಿದೆ. ಸ್ವೀಡನ್ನ ಕಚೇರಿ ಬಿಟ್ಟರೆ ಬೆಂಗಳೂರಿನದ್ದು ಟ್ರ್ಯೂಕಾಲರ್ನ ಅತಿದೊಡ್ಡ ಆಫೀಸ್ ಸ್ಪೇಸ್ ಆಗಿದೆ. ಭಾರತದಲ್ಲಿ ಟ್ರ್ಯೂಕಾಲರ್ ಕಚೇರಿ ತೆರೆದಿರುವುದು ಇದೇ ಮೊದಲು. ಮಾರ್ಚ್ 16, ಗುರುವಾರ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Union Minister Rajeev Chandrashekhar) ಅವರು ವರ್ಚುವಲ್ ಆಗಿ ಟ್ರ್ಯೂಕಾಲರ್ ಕಚೇರಿಯ ಉದ್ಘಾಟನೆ ಮಾಡಿದ್ದಾರೆ. ಬೆಂಗಳೂರಿನ ಟ್ರ್ಯೂಕಾಲರ್ ಕಚೇರಿ ಸುಮಾರು 30,000 ಚದರ ಅಡಿಯಷ್ಟು ವಿಶಾಲವಾಗಿದೆ. ಲೀಸ್ಗೆ ಪಡೆಯಲಾಗಿರುವ ಈ ಕಚೇರಿಯಲ್ಲಿ ಸುಮಾರು 250 ಮಂದಿ ಉದ್ಯೋಗಿಗಳು ಕೆಲಸ ಮಾಡಲು ಸ್ಥಳಾವಕಾಶ ಇದೆ.
ಇತ್ತೀಚೆಗೆ, ಆದಾಯ ಮತ್ತು ಸಬ್ಸ್ಕ್ರಿಪ್ಚನ್ ಹೆಚ್ಚಿಸಿಕೊಳ್ಳುತ್ತಿರುವ ಟ್ರ್ಯೂಕಾಲರ್ಗೆ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಅದರ ಯೂಸರ್ ಬೇಸ್ ಎರಡು ಪಟ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. 24.8 ಕೋಟಿಯಷ್ಟಿರುವ ಅದರ ಬಳಕೆದಾರರ ಸಂಖ್ಯೆ 2026ರಷ್ಟರಲ್ಲಿ 50 ಕೋಟಿಗೆ ಹೆಚ್ಚಾಗಬಹುದು. ಈ ಹಿನ್ನೆಲೆಯಲ್ಲಿ ಟ್ರ್ಯೂಕಾಲರ್ ವಿಶಾಲ ಕಚೆರಿಯನ್ನು ಆರಂಭಿಸಿದೆ ಎನ್ನಲಾಗಿದೆ.
India under PM @narendramodi Ji is emerging as a trusted #tech partner for the world – creating opportunities for jobs & entrepreneurship for #YoungIndians
Happy to be a part of the opening of @Truecaller’s office in #India, its first outside Sweden pic.twitter.com/tsY9cfDhyK
— Rajeev Chandrasekhar ?? (@Rajeev_GoI) March 16, 2023
ಭಾರತದಲ್ಲಿರುವ ಸ್ಮಾರ್ಟ್ಫೋನ್ಗಳಲ್ಲಿ ಶೇ. 55ರಷ್ಟು ಫೋನ್ಗಳಲ್ಲಿ ಟ್ರ್ಯೂಕಾಲರ್ ಸೇವೆ ಬಳಕೆಯಾಗುತ್ತಿದೆ. ಇದೇ ವೇಗದಲ್ಲಿ ಸಾಗಿದರೆ 2026ರಷ್ಟರಲ್ಲಿ 70ರಿಂದ 80 ಕೋಟಿ ಸ್ಮಾರ್ಟ್ಫೋನ್ಗಳಲ್ಲಿ ಟ್ರ್ಯೂಕಾಲರ್ ಬಳಕೆಯನ್ನು ಕಾಣಬಹುದು ಎಂದು ಟ್ರ್ಯೂಕಾಲರ್ನ ಸಹ–ಸಂಸ್ಥಾಪಕ ಮತ್ತು ಸಿಇಒ ಅಲನ್ ಮಮೇಡಿ ಹೇಳಿದ್ದಾರೆ.
ಇದನ್ನೂ ಓದಿ: Innovation: ಇನ್ನೋವೇಶನ್ ಇಂಡೆಕ್ಸ್ನಲ್ಲಿ ಭಾರತ ಹೈಜಂಪ್; ಕ್ರಿಯಾಶೀಲತೆಯ ವಾತಾವರಣ ಇರುವ ಟಾಪ್ 10 ಕಂಪನಿಗಳಿವು
ಟ್ರ್ಯೂಕಾಲರ್ಗೆ ಭಾರತ ಬಹಳ ದೊಡ್ಡ ಮಾರುಕಟ್ಟೆ. ಮುಂದಿನ ದಿನಗಳಲ್ಲಿ ಲಾಭದಾಯಕ ಮಾರುಕಟ್ಟೆಯೂ ಆಗಬಹುದು. ಜಾಗತಿಕವಾಗಿ ಟ್ರ್ಯೂಕಾಲರ್ಗೆ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 33.8 ಕೋಟಿ ಇದೆ. ಭಾರತವೊಂದರಲ್ಲೇ 24.8 ಕೋಟಿ ಮಂದಿ ಆ್ಯಕ್ಟಿವ್ ಯೂಸರ್ಸ್ ಇದ್ದಾರೆ.
ನಮ್ಮ ಮೊಬೈಲ್ಗೆ ಬರುವ ಕರೆಗಳು ಯಾರಿಂದ ಬರುತ್ತಿವೆ ಎಂಬುದನ್ನು ತೋರಿಸುವ ಟ್ರ್ಯೂಕಾಲರ್ ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ಕಾಲರ್ ಐಡಿ ಆ್ಯಪ್ ಆಗಿದೆ. ಇದು ಹೇಗೆ ಆದಾಯ ಮಾಡುತ್ತದೆ ಎಂಬುದು ಮೊದಲಿಂದಲೂ ಎಲ್ಲರಿಗೂ ಇರುವ ಕುತೂಹಲ. ವಾಸ್ತವವಾಗಿ ಟ್ರ್ಯೂಕಾಲರ್ಗೆ ಈಗ ಬರುತ್ತಿರುವ ಆದಾಯದಲ್ಲಿ ಹೆಚ್ಚಿನವು ಜಾಹೀರಾತುಗಳ ಮೂಲಕ ಬರುವಂಥವು. ಕರೆ ಬಂದಾಗ ಕಾಣುವ ಟ್ರ್ಯೂಕಾಲರ್ ಪಾಪ್ ಅಪ್ನಲ್ಲಿ ಜಾಹೀರಾತುಗಳಿರುತ್ತವೆ. ಇವುಗಳು ಟ್ರ್ಯೂಕಾಲರ್ಗೆ ಪ್ರಮುಖ ಆದಾಯ ಮೂಲವಾಗಿದೆ. ಆದರೆ, ಸಬ್ಸ್ಕ್ರಿಪ್ಷನ್ ಸೇವೆಯಿಂದ ಟ್ರ್ಯೂಕಾಲರ್ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದೆ. ಆದರೆ, ಸದ್ಯ ಇಂಥ ಸಬ್ಸ್ಕ್ರಿಪ್ಚನ್ಗಳಿಂದ ಕಂಪನಿಗೆ ಬರುತ್ತಿರುವುದು ಶೇ. 10ರಷ್ಟು ಆದಾಯ ಮಾತ್ರ. ಶೇ. 80ರಷ್ಟು ಆದಾಯ ಜಾಹೀರಾತುಗಳಿಂದಲೇ ಬರುತ್ತಿದೆ.
ಟ್ರ್ಯೂಕಾಲರ್ ಅನ್ನು ಸಬ್ಸ್ಕ್ರೈಬ್ ಆದರೆ ಹಲವು ವಿಶೇಷ ಸೌಲಭ್ಯಗಳು ಸಿಗುತ್ತವೆ. ಸ್ಪ್ಯಾಮ್ ಕಾಲ್ಗಳನ್ನು ತಡೆಗಟ್ಟುವುದು ಇತ್ಯಾದಿ ಹಲವು ಸೇವೆಗಳು ಸಬ್ಸ್ಕ್ರಿಪ್ಷನ್ನಲ್ಲಿ ಲಭ್ಯ ಇವೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಸಬ್ಸ್ಕ್ರಿಪ್ಚನ್ ಸೇವೆ ಹೆಚ್ಚಬಹುದು ಎಂಬ ನಿರೀಕ್ಷೆಯಲ್ಲಿ ಟ್ರ್ಯೂಕಾಲರ್ ಇದೆ.
Published On - 7:04 pm, Thu, 16 March 23