Foxconn: ತೆಲಂಗಾಣಕ್ಕೆ ಹೋಯ್ತು ಫಾಕ್ಸ್ಕಾನ್; 200 ಎಕರೆ ಜಾಗದಲ್ಲಿ ಆ್ಯಪಲ್ ಏರ್ಪಾಡ್ ತಯಾರಿಕೆ; ಕರ್ನಾಟಕಕ್ಕೆ ಕೈಕೊಟ್ಟಿತಾ ತೈವಾನೀ ಕಂಪನಿ?
Apple AirPod Contract To Foxconn: ಆ್ಯಪಲ್ನ ವಯರ್ಲೆಸ್ ಇಯರ್ಫೋನ್ ಆದ ಏರ್ಪಾಡ್ ಸರಬರಾಜು ಮಾಡುವ ಗುತ್ತಿಗೆ ಫಾಕ್ಸ್ಕಾನ್ಗೆ ಸಿಕ್ಕಿದೆ. ಈ ಆ್ಯಪಲ್ ಉತ್ಪನ್ನ ತಯಾರಿಸಲು ತೆಲಂಗಾಣ ರಾಜ್ಯವನ್ನು ಫಾಕ್ಸ್ಕಾನ್ ಆರಿಸಿಕೊಂಡಿದೆ.
ನವದೆಹಲಿ: ಆ್ಯಪಲ್ ಉತ್ಪನ್ನಗಳ ಪ್ರಮುಖ ತಯಾರಕಾ ಕಂಪನಿ ಫಾಕ್ಸ್ಕಾನ್ (Foxconn- Hon Hai Precision) ತೆಲಂಗಾಣದಲ್ಲಿ ಫ್ಯಾಕ್ಟರಿ ಸ್ಥಾಪಿಸುವುದು ಖಚಿತ ಎನ್ನಲಾಗಿದೆ. ಆ್ಯಪಲ್ನ ವಯರ್ಲೆಸ್ ಇಯರ್ ಫೋನ್ ಆದ ಏರ್ಪಾಡ್ಗಳನ್ನು (AirPod) ತಯಾರಿಸುವ ಗುತ್ತಿಗೆಯನ್ನು ಫಾಕ್ಸ್ಕಾನ್ ಪಡೆದಿದೆ. ಹೈದರಾಬಾದ್ ಸಮೀಪದ ಸ್ಥಳದಲ್ಲಿ 200 ಎಕರೆ ಜಾಗದಲ್ಲಿ ಇದರ ತಯಾರಿಕಾ ಘಟಕ ಸ್ಥಾಪಿಸಲು ನಿರ್ಧರಿಸಿರುವುದು ತಿಳಿದುಬಂದಿದೆ. ಫಾಕ್ಸ್ಕಾನ್ ಕಂಪನಿ ತೈವಾನ್ ಮೂಲದ್ದು. ಆ್ಯಪಲ್ನ ಬಹುತೇಕ ಐಫೋನ್ಗಳನ್ನು ಅಸೆಂಬಲ್ ಮಾಡುವುದು ಫಾಕ್ಸ್ಕಾನ್ ಕಂಪನಿಯೇ. ತೈವಾನ್ ಮೂಲದ್ದೇ ಆದ ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಕಂಪನಿಗಳೂ ಐಫೋನ್ ತಯಾರಿಕೆಯ ಗುತ್ತಿಗೆ ಪಡೆದಿರುವ ಇತರ ಕಂಪನಿಗಳು. ಆದರೆ, ಶೇ. 70ರಷ್ಟು ಐಫೋನ್ಗಳನ್ನು ಫಾಕ್ಸ್ಕಾನ್ ಒಂದೇ ತಯಾರಿಸುತ್ತದೆ. ಆದರೆ, ಆ್ಯಪಲ್ನ ಮತ್ತೊಂದು ಪ್ರಮುಖ ಉತ್ಪನ್ನವಾದ ಏರ್ಪಾಡ್ ಸರಬರಾಜು ಮಾಡುವ ಗುತ್ತಿಗೆ ಫಾಕ್ಸ್ಕಾನ್ಗೆ ಸಿಕ್ಕಿರುವುದು ಇದೇ ಮೊದಲು. ಈ ಏರ್ಪಾಡ್ ಅನ್ನು ಚೀನಾದ ವಿವಿಧ ಕಂಪನಿಗಳು ಆ್ಯಪಲ್ಗೆ ಸರಬರಾಜು ಮಾಡುತ್ತಿದ್ದವು. ಈಗ ಚೀನಾದ ಆಚೆ ಇವುಗಳನ್ನು ತಯಾರಿಸಲು ಆ್ಯಪಲ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಫಾಕ್ಸ್ಕಾನ್ಗೆ ಅವಕಾಶ ಸಿಕ್ಕಿದೆ.
ರಾಯ್ಟರ್ಸ್ ವರದಿ ಪ್ರಕಾರ ಫಾಕ್ಸ್ಕಾನ್ ಸಂಸ್ಥೆ ಏರ್ಪಾಡ್ ತಯಾರಿಕೆಗಾಗಿ ತೆಲಂಗಾಣದಲ್ಲಿ 200 ಎಕರೆ ಜಾಗದಲ್ಲಿ ಘಟಕ ಆರಂಭಿಸಲಿದೆ. ಇದರಲ್ಲಿ ಫಾಕ್ಸ್ಕಾನ್ ಸುಮಾರು 200 ಮಿಲಿಯನ್ ಡಾಲರ್ಗಿಂತ (1,600 ಕೋಟಿ ರುಪಾಯಿ) ಹೆಚ್ಚು ಹಣ ಹೂಡಿಕೆ ಮಾಡಲಿದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಈ ಘಟಕ ಆರಂಭವಾಗಿ, 2023ರ ಅಂತ್ಯದೊಳಗೆ ಉತ್ಪಾದನೆ ಕೂಡ ಶುರುವಾಗಬಹುದು ಎನ್ನಲಾಗಿದೆ.
ಏರ್ಪಾಡ್ನಲ್ಲಿ ಲಾಭ ಕಡಿಮೆ: ಫಾಕ್ಸ್ಕಾನ್ ಮುಂದಾಲೋಚನೆ ನಿರ್ಧಾರ
ಆ್ಯಪಲ್ನ ಏರ್ಪಾಡ್ಗಳನ್ನು ಗುತ್ತಿಗೆ ಪಡೆಯುವ ಆಫರ್ ಫಾಕ್ಸ್ಕಾನ್ಗೆ ಬಹಳ ದಿನಗಳ ಹಿಂದೆಯೇ ಇತ್ತು. ಈ ಏರ್ಪಾಡ್ಗಳಿಂದ ಹೆಚ್ಚಿನ ಲಾಭ ಸಿಗುವುದಿಲ್ಲ ಎಂಬ ಕಾರಣಕ್ಕೆ ಫಾಕ್ಸ್ಕಾನ್ ಗೊಂದಲದಲ್ಲಿತ್ತು. ತಿಂಗಳುಗಟ್ಟಲೆ ಈ ಬಗ್ಗೆ ಆಂತರಿಕವಾಗಿ ಚರ್ಚೆಗಳನ್ನು ನಡೆಸಿದ ಬಳಿಕ ಫಾಕ್ಸ್ಕಾನ್ ಅಂತಿಮವಾಗಿ ಈ ಗುತ್ತಿಗೆಗೆ ಒಪ್ಪಿಕೊಂಡಿದೆ.
ಏರ್ಪಾಡ್ಗಳ ತಯಾರಿಕೆಯಿಂದ ಹೆಚ್ಚು ಲಾಭ ಬರದೇ ಹೋದರೂ ಭವಿಷ್ಯದಲ್ಲಿ ಆ್ಯಪಲ್ನ ಹೊಸ ಉತ್ಪನ್ನಗಳ ಸರಬರಾಜಿಗೆ ತನಗೇ ಗುತ್ತಿಗೆ ಸಿಗಬಹುದು ಎಂಬ ಆಶಯದಲ್ಲಿ ಫಾಕ್ಸ್ಕಾನ್ ಧೈರ್ಯದಿಂದ ಹೆಜ್ಜೆ ಇಟ್ಟಿದೆ.
ಬೆಂಗಳೂರಿನಲ್ಲಿ ಫಾಕ್ಸ್ಕಾನ್ನ ಘಟಕ ಸ್ಥಾಪನೆ ಆಗುವುದಿಲ್ಲವಾ?
ಎರಡು ವಾರಗಳ ಹಿಂದೆ ಫಾಕ್ಸ್ಕಾನ್ನ ಐಫೋನ್ ಫ್ಯಾಕ್ಟರಿ ಸ್ಥಾಪನೆ ವಿಚಾರದಲ್ಲಿ ತೆಲಂಗಾಣ ಮತ್ತು ಕರ್ನಾಟಕ ಹೆಸರು ಕೇಳಿಬಂದಿತ್ತು. ಎರಡೂ ರಾಜ್ಯಗಳ ಜೊತೆ ಫಾಕ್ಸ್ಕಾನ್ ಒಡಂಬಡಿಕೆ (ಎಂಒಯು) ಮಾಡಿಕೊಂಡಿತ್ತು. ಈಗ ತೆಲಂಗಾಣದಲ್ಲಿ ಆ್ಯಪಲ್ನ ಏರ್ಪಾಡ್ ಉತ್ಪಾದನೆಗೆ ಫಾಕ್ಸ್ಕಾನ್ ಘಟಕ ಸ್ಥಾಪಿಸುವುದು ಬಹುತೇಕ ಖಚಿತ ಎಂಬಂತಾಗಿದೆ. ಹಾಗಾದರೆ, ಕರ್ನಾಟಕವನ್ನು ಫಾಕ್ಸ್ಕಾನ್ ಕೈಬಿಟ್ಟಿತಾ ಎಂಬ ಪ್ರಶ್ನೆ ಇದೆ. ಈ ಬಗ್ಗೆ ಫಾಕ್ಸ್ಕಾನ್ ಆಗಲೀ ಅಥವಾ ಕರ್ನಾಟಕ ಸರ್ಕಾರವಾಗಲೀ ಏನೂ ಸ್ಪಷ್ಟನೆ ಕೊಟ್ಟಿಲ್ಲ. ಕರ್ನಾಟಕದಲ್ಲಿ ಐಫೋನ್ ತಯಾರಿಕೆಗೆ ಫಾಕ್ಸ್ಕಾನ್ ಯೋಜನೆಯೇನಾದರೂ ರೂಪಿಸಿದೆಯಾ ಎಂಬುದು ಸ್ಪಷ್ಟಗೊಳ್ಳಬೇಕಿದೆ. ಐಫೋನ್ ಘಟಕದ ಯೋಜನೆ ಫಾಕ್ಸ್ಕಾನ್ ತಲೆಯಲ್ಲಿ ಇಲ್ಲವೆಂದಾದರೆ ಕರ್ನಾಟಕಕ್ಕೆ ಫಾಕ್ಸ್ಕಾನ್ನ ಫ್ಯಾಕ್ಟರಿ ಕೈತಪ್ಪಿತು ಎಂದೇ ಆಗುತ್ತದೆ.