Aadhaar Card Update: ಆನ್ಲೈನ್ನಲ್ಲಿ ಆಧಾರ್ ದಾಖಲೆ ಅಪ್ಡೇಶನ್; 3 ತಿಂಗಳು ಶುಲ್ಕ ಇಲ್ಲ
Free Aadhaar Document Updation: ಆಧಾರ್ ದಾಖಲೆ ಅಪ್ಡೇಟ್ ಮಾಡುವುದಿದ್ದರೆ ಆನ್ಲೈನ್ನಲ್ಲಿ ಮೈ ಆಧಾರ್ ಪೋರ್ಟಲ್ ಮೂಲಕ ಮಾಡಬಹುದು. ಜೂನ್ 14ರವರೆಗೆ 3 ತಿಂಗಳ ಕಾಲ ಯಾವುದೇ ಶುಲ್ಕವಿಲ್ಲದೇ ಪೋರ್ಟಲ್ನಲ್ಲಿ ಆಧಾರ್ ಅಪ್ಡೇಟ್ ಮಾಡಲು ಅವಕಾಶ ಕೊಡಲಾಗಿದೆ.
ನವದೆಹಲಿ: ಆಧಾರ್ ಕಾರ್ಡ್ನಲ್ಲಿರುವ ಮಾಹಿತಿಯನ್ನು ಅಪ್ಡೇಟ್ ಮಾಡಬೇಕೆಂದರೆ ಅಧಾರ್ ಕೇಂದ್ರಕ್ಕೆ ಹೋಗಿ ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಇದೀಗ ಅನ್ಲೈನ್ನಲ್ಲೇ ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಆದರೆ, ಮೈ ಆಧಾರ್ ಪೋರ್ಟಲ್ನಲ್ಲಿ ಮೂರು ತಿಂಗಳವರೆಗೂ ಮಾತ್ರ ಈ ಸೇವೆ ಲಭ್ಯ ಇರುತ್ತದೆ. ಇದಕ್ಕೆ ಯಾವ ಶುಲ್ಕವೂ ಇರುವುದಿಲ್ಲ. 2023 ಮಾರ್ಚ್ 15ರಿಂದ 2023 ಜೂನ್ 14ರವರೆಗೆ ಮೈ ಆಧಾರ್ ಪೋರ್ಟಲ್ನಲ್ಲಿ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಬಹುದು.
ಇದರ ಜೊತೆಗೆ ಮಾಮೂಲಿಯಾಗಿ ಆಧಾರ್ ಕೇಂದ್ರಗಳಿಗೆ ಹೋಗಿಯೂ ಆಧಾರ್ ಮಾಹಿತಿ ಅಪ್ಡೇಟ್ ಮಾಡುವ ಕ್ರಮ ಮುಂದುವರಿಯುತ್ತದೆ. ಆಧಾರ್ ಕೇಂದ್ರದಲ್ಲಿ ಹಿಂದಿನಂತೆ 50 ರುಪಾಯಿ ಶುಲ್ಕ ಕೊಡಬೇಕಾಗುತ್ತದೆ. ಈ ಬಗ್ಗೆ ಆಧಾರ್ ನಿರ್ವಹಣೆ ನೋಡಿಕೊಳ್ಳುತ್ತಿರುವ ನೋಡಲ್ ಏಜೆನ್ಸಿಯ ಸ್ಪಷ್ಟನೆಯೊಂದಿಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: Aadhaar Limitation: ಆಧಾರ್ ಕಾರ್ಡ್ನಲ್ಲಿರುವ ಹೆಸರು, ವಿಳಾಸ ಇತ್ಯಾದಿ ಮಾಹಿತಿ ಎಷ್ಟು ಬಾರಿ ಬದಲಿಸಬಹುದು?
ಆಧಾರ್ ದಾಖಲೆ ಅಪ್ಡೇಟ್ ಯಾಕೆ ಮಾಡಬೇಕು?
2022ರ ನವೆಂಬರ್ 9ರಂದು ಹೊರಡಿಸಲಾದ ಅಧಿಸೂಚನೆ ಪ್ರಕಾರ ಆಧಾರ್ಗೆ ನೊಂದಾಯಿತಗೊಂಡು ಪ್ರತೀ 10 ವರ್ಷಕ್ಕೊಮ್ಮೆ ದಾಖಲೆಗಳನ್ನು ಅಪ್ಡೇಟ್ ಮಾಡಬೇಕು ಎಂದಿದೆ. ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಮತ್ತೊಮ್ಮೆ ಒದಗಿಸಬೇಕು ಎಂದು ತಿಳಿಸಲಾಗಿದೆ. ಆಧಾರ್ನಲ್ಲಿ ವಂಚನೆ ಸಾಧ್ಯತೆಯನ್ನು ತಡೆಯಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಆನ್ಲೈನ್ನಲ್ಲಿ ಆಧಾರ್ ದಾಖಲೆ ಅಪ್ಡೇಟ್ ಮಾಡುವುದು ಹೇಗೆ?
ನೀವು ಆಧಾರ್ ಕೇಂದ್ರಕ್ಕೆ ಹೋಗದೇ ಆನ್ಲೈನ್ನಲ್ಲೇ ಆಧಾರ್ ದಾಖಲೆಗಳನ್ನು ಅಪ್ಡೇಟ್ ಮಾಡಬೇಕೆಂದರೆ ಮೈ ಆಧಾರ್ ಪೋರ್ಟಲ್ಗೆ ಹೋಗಬೇಕಾಗುತ್ತದೆ. ಅಲ್ಲಿ ನಿಮ್ಮ ಆಧಾರ್ ನಂಬರ್ ಯೂಸರ್ ನೇಮ್ ಆಗಿರುತ್ತದೆ. ಆಧಾರ್ ಜೊತೆಗೆ ನೊಂದಾಯಿತವಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿ ಅಂಕಿ ನಮೂದಿಸಿ ಮೈ ಆಧಾರ್ ಪೋರ್ಟಲ್ಗೆ ಲಾಗಿನ್ ಆಗಬಹುದು.
ಇದನ್ನೂ ಓದಿ: PM Kisan: 14ನೇ ಕಂತು ಯಾವಾಗ ಬಿಡುಗಡೆ? ರಾಜ್ಯ ಸರ್ಕಾರದ ಹಣ ಎಂದು? ಹಿಂದಿನ ಕಂತು ಸಿಗದವರು ಏನು ಮಾಡಬೇಕು?
ಆನ್ಲೈನ್ನಲ್ಲಿ ಶುಲ್ಕವಿಲ್ಲದೇ ಆಧಾರ್ ಮಾಹಿತಿ ಅಪ್ಡೇಟ್ ಮಾಡಲು ಅವಕಾಶ ಇರುವುದು ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರವೇ. 2023 ಮಾರ್ಚ್ 15ರಿಂದ 2023 ಜೂನ್ 14ರವರೆಗೆ ಮೂರು ತಿಂಗಳವರೆಗೆ ಈ ಅವಕಾಶ ಕಲ್ಪಿಸಲಾಗಿದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Thu, 16 March 23