Twitter: ಟ್ವಿಟ್ಟರ್ ಕಳೆದುಹೋಗಿದೆ, ಎಕ್ಸ್ ನುಂಗಿಹಾಕಿದೆ; ಕೋರ್ಟ್​ನಲ್ಲಿ ಮೊಕದ್ದಮೆ; ಎಲಾನ್ ಮಸ್ಕ್ ಕೂಡ ನಿಗೂಢ ಟ್ವೀಟ್

|

Updated on: Apr 12, 2023 | 1:37 PM

Conspiracy Theorist Files Lawsuit Against Twitter: ಟ್ವಿಟ್ಟರ್ ವಿರುದ್ಧ ಸಲ್ಲಿಕೆಯಾಗಿರುವ ಕಾನೂನು ಮೊಕದ್ದಮೆಯೊಂದರಲ್ಲಿ ಟ್ವಿಟ್ಟರ್ ಕಳೆದುಹೋಗಿದೆ ಎಂದು ದೂರು ಕೊಡಲಾಗಿದೆ. ಲೌರಾ ಲೂಮರ್ ಎಂಬ ಮಹಿಳೆ ಈ ಮೊಕದ್ದಮೆ ಹಾಕಿದ್ದು, ಎಕ್ಸ್ ಎಂಬ ಸಂಸ್ಥೆಯೊಂದಿಗೆ ಟ್ವಿಟ್ಟರ್ ವಿಲೀನವಾಗಿದೆ. ಟ್ವಿಟ್ಟರ್ ಕಾಣೆಯಾಗಿದೆ ಎಂದು ಆ ಮೊಕದ್ದಮೆಯಲ್ಲಿ ಆಕೆ ತಗಾದೆ ತೆಗೆದಿದ್ದಾರೆ.

Twitter: ಟ್ವಿಟ್ಟರ್ ಕಳೆದುಹೋಗಿದೆ, ಎಕ್ಸ್ ನುಂಗಿಹಾಕಿದೆ; ಕೋರ್ಟ್​ನಲ್ಲಿ ಮೊಕದ್ದಮೆ; ಎಲಾನ್ ಮಸ್ಕ್ ಕೂಡ ನಿಗೂಢ ಟ್ವೀಟ್
ಇಲಾನ್ ಮಸ್ಕ್
Follow us on

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎನಿಸಿದ್ದ ಎಲಾನ್ ಮಸ್ಕ್ (Elon Musk) ಟ್ವಿಟ್ಟರ್ ಮೇಲೆ ಕಣ್ಣಿಡಲು ಅರಂಭಿಸಿದ ಬಳಿಕ ಕುತೂಹಲ ಮೂಡಿಸುವ, ಚಿತ್ರ ವಿಚಿತ್ರ ಬೆಳವಣಿಗೆಗಳು ನಡೆಯುತ್ತಾ ಬಂದು, ಇದೀಗ ಮಸ್ಕ್ ಅವರು ಟ್ವೀಟ್ ಸಾಮ್ರಾಜ್ಯದ ಅಧಿಪತಿಯಾಗಿದ್ದಾರೆ. ಚೀನಾದ ಕ್ರಾಂತಿಕಾರಕ ವೀಚ್ಯಾಟ್ ಆ್ಯಪ್ (WeChat App) ಮಾದರಿಯಲ್ಲಿ ಟ್ವಿಟ್ಟರ್ ಅನ್ನು ಮಾರ್ಪಡಿಸಬಹುದು ಎನ್ನುವಂತಹ ಸುದ್ದಿ ಮಸ್ಕ್ ಅಡಿ ಇಟ್ಟಾಗಿನಿಂದಲೇ ಕೇಳಿಬರುತ್ತಿದೆ. ಇದೀಗ ಈ ಸುದ್ದಿ ನಿಜವಾಗುತ್ತಿದೆಯೇನೋ ಎನ್ನುವಂತಹ ಬೆಳವಣಿಗೆಗಳಾಗುತ್ತಿವೆ. ಟ್ವಿಟ್ಟರ್ ವಿರುದ್ಧ ಸಲ್ಲಿಕೆಯಾಗಿರುವ ಕಾನೂನು ಮೊಕದ್ದಮೆಯೊಂದರಲ್ಲಿ ಟ್ವಿಟ್ಟರ್ ಕಳೆದುಹೋಗಿದೆ ಎಂದು ದೂರು ಕೊಡಲಾಗಿದೆ. ಲೌರಾ ಲೂಮರ್ ಎಂಬ ಮಹಿಳೆ ಈ ಮೊಕದ್ದಮೆ ಹಾಕಿದ್ದು, ಎಕ್ಸ್ (X Corp) ಎಂಬ ಸಂಸ್ಥೆಯೊಂದಿಗೆ ಟ್ವಿಟ್ಟರ್ ವಿಲೀನವಾಗಿದೆ. ಟ್ವಿಟ್ಟರ್ ಕಾಣೆಯಾಗಿದೆ ಎಂದು ಆ ಮೊಕದ್ದಮೆಯಲ್ಲಿ ಆಕೆ ತಗಾದೆ ತೆಗೆದಿದ್ದಾರೆ.

ಲಾರಾ ಲೂಮರ್ (Laura Loomer) ಅವರು ಒಬ್ಬ ಕಾನ್ಸ್​ಪಿರಸಿ ಥಿಯರಿಸ್ಟ್. ಅಂದರೆ ಪ್ರಮುಖ ವಿದ್ಯಮಾನಗಳ ಹಿಂದೆ ಯಾವುದಾದರೂ ಸಂಚು ಅಥವಾ ಪಿತೂರಿ (Conspiracy) ಇರುತ್ತದೆ ಎಂಬುದು ಇಂತಹವರ ವಾದ. ಅವರು ತನಿಖಾ ವರದಿಗಾರ್ತಿಯೂ ಹೌದು. ಏಪ್ರಿಲ್ 4ರಂದು ಅವರು ಕೋರ್ಟ್​ನಲ್ಲಿ ಟ್ವಿಟ್ಟರ್ ವಿರುದ್ಧ ಕಾನೂನು ಮೊಕದ್ದಮೆ (Lawsuit) ಹಾಕಲಾಗಿರುವ ಸಂಗತಿಯನ್ನು ದಾಖಲೆ ಸಮೇತ ಟ್ವೀಟಿಸಿದ್ದಾರೆ. ಎಕ್ಸ್ ಕಾರ್ಪ್ ಎಂಬ ಸಂಸ್ಥೆಯೊಂದಿಗೆ ಟ್ವಿಟ್ಟರ್ ವಿಲೀನಗೊಂಡಿದೆ. ಈ ಟ್ವಿಟ್ಟರ್ ಇದೀಗ ಸ್ವತಂತ್ರ ಸಂಸ್ಥೆಯಾಗಿ ಉಳಿದಿಲ್ಲ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿIMF: ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಕಡಿಮೆಯಾದರೂ ವಿಶ್ವದಲ್ಲೇ ಬೆಸ್ಟ್; ಚೀನಾಗಿಂತಲೂ ಬೆಟರ್; ಐಎಂಎಫ್ ಅಂದಾಜು

ಇದರ ಪ್ರತಿಯನ್ನು ಲಾರಾ ಲೂಮರ್ ತಮ್ಮ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಕೆಲ ಸುದ್ದಿಗಳ ಪ್ರಕಾರ ಮಾರ್ಚ್ 15ರಂದು ಎಕ್ಸ್ ಕಾರ್ಪೊರೇಶನ್ ಜೊತೆ ಟ್ವಿಟ್ಟರ್ ವಿಲೀನಗೊಂಡಿದೆ ಎನ್ನಲಾಗಿದೆ.

ಎಲಾನ್ ಮಸ್ಕ್ ತಲೆಯಲ್ಲಿ ಏನಿದೆ ಎಂಬುದು ಆ ಬ್ರಹ್ಮನಿಗೇ ತಿಳಿಯಬೇಕು

ಎಲಾನ್ ಮಸ್ಕ್ ಟ್ವಿಟ್ಟರ್ ಬುಡಕ್ಕೆ ಕೈ ಇಟ್ಟಾಗಲೇ ಹಲವರು ಮಹದಾಶ್ಚರ್ಯ ವ್ಯಕ್ತಪಡಿಸಿದ್ದರು. ಸುಮ್ಮನಿರಲಾಗದೆ ಇರುವೆ ಬಿಟ್ಟುಕೊಳ್ಳುವಂಥದ್ದು ಏನೂ ಇಲ್ಲ. ಮಸ್ಕ್ ನಡೆ ಹಿಂದೇ ಬೇರೇನೋ ಇದೆ ಎಂದು ಹಲವು ಕಾನ್ಸ್​ಪಿರಸಿ ಥಿಯರಿಗಳು ಓಡಾಡಿದ್ದವು.

ಇದನ್ನೂ ಓದಿನಮ್ಮ ಕರ್ನಾಟಕದ ಸಹಕಾರಿ ಬ್ಯಾಂಕ್‌ಗಳಲ್ಲಿ ಇದೆಂತಹ ಧೋಕಾ? KYC ದಾಖಲೆಗಳೇ ಇಲ್ಲದೆ ಸಾವಿರಾರು ಕೋಟಿ ರೂಪಾಯಿ ಗುಳುಂ! ಇದು ಐಟಿ ಇಲಾಖೆ ವರದಿ

ಇದೇ ವೇಳೆ, ಸಂಚಲನ ಮೂಡಿಸುವಂತಹ ಕೆಲ ಸುದ್ದಿಗಳು ಕಳೆದ ಒಂದು ವರ್ಷದಿಂದಲೂ ಕೇಳಿಬರುತ್ತಿವೆ. ಅದುವೇ ಎಕ್ಸ್ ಹೋಲ್ಡಿಂಗ್. ಎಕ್ಸ್ ಡಾಟ್ ಕಾಂ ಎಂಬುದು ಎಲಾನ್ ಮಸ್ಕ್ ಬಹಳ ವರ್ಷಗಳ ಹಿಂದೆ ಸ್ಥಾಪಿಸಿದ್ದ ಕಂಪನಿ ಮತ್ತು ಇಂಟರ್ನೆಟ್​ನಲ್ಲಿ ನೊಂದಣಿಯಾಗಿದ್ದ ಡೊಮೈನ್ ಹೆಸರು. ಮುಂದೆ ಅದನ್ನು ಪೇ ಪಾಲ್ ಸಂಸ್ಥೆ ಜೊತೆ ವಿಲೀನಗೊಳಿಸಿದ್ದರು. ಇದೀಗ ಎಕ್ಸ್ ಹೋಲ್ಡಿಂಗ್ ಸಂಸ್ಥೆ ಎಂಬ ಹಾವನ್ನು ಬುಟ್ಟಿಯಿಂದ ಹೊರತಂದಿದ್ದಾರೆ. ಸ್ಪೇಸ್ ಎಕ್ಸ್, ಬೋರಿಂಗ್ ಕಂಪನಿ ಟೆಸ್ಲಾ, ಟ್ವಿಟ್ಟರ್ ಮೊದಲಾದ ತಮ್ಮ ಪ್ರಮುಖ ಸಂಸ್ಥೆಗಳನ್ನು ಎಕ್ಸ್ ಹೋಲ್ಡಿಂಗ್ ಅಡಿಯಲ್ಲಿ ತರುತ್ತಿದ್ದಾರೆ ಎನ್ನುವಂತಹ ಕಾನ್ಸ್​ಪಿರಸಿ ಸುದ್ದಿ ಇದು. ಅಂದಹಾಗೆ ಎಕ್ಸ್ ಹೋಲ್ಡಿಂಗ್ ಎಂಬುದು ಎಲಾನ್ ಮಸ್ಕ್ ಅವರ ಒಂದು ಶೆಲ್ ಕಂಪನಿ ಎನ್ನಲಾಗಿದೆ. ಹೀಗಾಗಿ, ಮಸ್ಕ್ ತಲೆಯಲ್ಲಿ ಏನೇನು ಓಡುತ್ತಿದೆಯೋ ಆ ದೇವರಿಗೇ ಗೊತ್ತಾಗಬೇಕು ಎಂದು ಹೇಳಿದ್ದು.

ಕುತೂಹಲ ಮೂಡಿಸಿದ ಎಲಾನ್ ಮಸ್ಕ್ ಟ್ವೀಟ್

ಎಕ್ಸ್ ಕಾರ್ಪ್ ಜೊತೆ ಟ್ವಿಟ್ಟರ್ ವಿಲೀನಗೊಂಡಿರುವ ಸುದ್ದಿ ದಟ್ಟವಾಗುತ್ತಿರುವ ಹೊತ್ತಿನಲ್ಲೇ ನಿನ್ನೆ ಏಪ್ರಿಲ್ 11ರಂದು ಎಲಾನ್ ಮಸ್ಕ್ ಅವರ ಒಂದು ಟ್ವೀಟ್ ಬಹಳ ಕುತೂಹಲ ಮೂಡಿಸಿದೆ. ಇದರಲ್ಲಿ ಅವರು X ಎಂದಷ್ಟೇ ಬರೆದು ಟ್ವೀಟ್ ಮಾಡಿದ್ದಾರೆ. ಅಂದರೆ ಎಲಾನ್ ಮಸ್ಕ್ ತಲೆಯಲ್ಲಿ ಈಗ ಎಕ್ಸ್ ಎಂಬುದಷ್ಟೇ ಪ್ರಾಮುಖ್ಯವಾಗಿದೆಯಾ ಎಂಬುದು ಕುತೂಹಲ ಮೂಡಿಸುತ್ತಿದೆ.


ಇದನ್ನೂ ಓದಿDabba Trading: ‘ಡಬ್ಬಾ’ ಟ್ರೇಡರ್ ಗಾಳಕ್ಕೆ ಸಿಕ್ಕಿಬಿದ್ದೀರಿ ಜೋಕೆ ಎಂದ ಎನ್​ಎಸ್​ಇ; ಹಣ ಗಳಿಸುವುದಿರಲಿ, ಇದ್ದ ಹಣವೂ ಹೋದೀತು; ಯಾರಿದು ಡಬ್ಬಾ ಟ್ರೇಡರ್?

ಹಿಂದೆಯೂ ಇಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಎಕ್ಸ್ ಹೆಸರಿನಲ್ಲಿ ಮುಂದುವರಿಸುವ ಬಗ್ಗೆ ಸುಳಿವು ನೀಡಿದ್ದರು. ಚೀನಾದ ವೀಚ್ಯಾಟ್ ಮಾದರಿಯಲ್ಲಿ ಟ್ವಿಟ್ಟರ್ ಅಭಿವೃದ್ಧಿಪಡಿಸುವುದಾಗಿ ಅವರು ಹೇಳಿಕೊಂಡಿದ್ದಿದೆ. ಕೇವಲ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಆಗಿ ಶುರುವಾದ ಚೀನಾದ ವೀಚ್ಯಾಟ್ ಈಗ ಹಲವು ಕಾರ್ಯಗಳಿಗೆ ಏಕ ವೇದಿಕೆಯಾಗಿ ರೂಪುಗೊಂಡಿದೆ. ಅಂದರೆ, ವೀಚ್ಯಾಟ್​ನಲ್ಲಿ ವಾಟ್ಸಾಪ್​ನಲ್ಲಿಯಂತೆ ಮೆಸೇಜ್ ಮಾಡಬಹುದು, ಟ್ವಿಟ್ಟರ್​ನಲ್ಲಿಯಂತೆ ಕಿರುಸಂದೇಶಗಳಿಗೆ ವೇದಿಕೆ ಆಗಬಹುದು. ಪೇಟಿಎಂ ನಲ್ಲಿರುವಂತೆ ವಿವಿಧ ಸೇವೆಗಳನ್ನೂ ಪಡೆಯಬಹುದು. ವೀಚ್ಯಾಟ್​ಗೆ ಹೋದರೆ ಒಂದು ಸಾಗರಕ್ಕೆ ಹೋದಂತೆ. ಮನುಷ್ಯರಿಗೆ ಬೇಕಾದ ಎಲ್ಲವೂ ಅಲ್ಲಿ ಸಿಗುತ್ತದೆ. ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಇಂಥದ್ದೇ ರೀತಿಯ ಒಂದು ಸರ್ವಸೇವೆಯ ಪ್ಲಾಟ್​ಫಾರ್ಮ್ ಆಗಿ ಅಭಿವೃದ್ಧಿಪಡಿಸಬೇಕೆಂಬ ಕನಸು ಹೊಂದಿದ್ದಾರೆ. ಅದೂ ಎಕ್ಸ್ ಎಂಬ ಹೆಸರಿನಲ್ಲಿ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Wed, 12 April 23