ಸ್ಯಾನ್ಫ್ರಾನ್ಸಿಸ್ಕೊ: ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ (Elon Musk) ಮತ್ತೊಮ್ಮೆ ಟ್ವಿಟರ್ (Twitter) ಖರೀದಿಗೆ ಪ್ರಸ್ತಾವ ಮುಂದಿಟ್ಟಿದ್ದಾರೆ. ಈ ಮೊದಲು ಒಪ್ಪಿಕೊಂಡಿದ್ದ ದರಕ್ಕೇ ಕಂಪನಿಯನ್ನು ಖರೀದಿಸುವುದಾಗಿ ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಟ್ವಿಟರ್ ಮತ್ತು ಮಸ್ಕ್ ನಡುವೆ ಇತ್ತೀಚೆಗಷ್ಟೇ ಹೇಳಿಕೆ-ಪ್ರತಿ ಹೇಳಿಕೆಗಳ ಸಮರ ನಡೆದಿತ್ತು. ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯಲೆಂದು ಮಸ್ಕ್ ನ್ಯಾಯಾಲಯದಲ್ಲಿ ಕಾನೂನು ಸಮರವನ್ನೂ ಆರಂಭಿಸಿದ್ದರು. ಇದೀಗ ನಡೆದಿರುವ ಮತ್ತೊಂದು ಬೆಳವಣಿಗೆಯಲ್ಲಿ ಟ್ವಿಟರ್ಗೆ ನೀಡಿದ್ದ ಖರೀದಿ ಪ್ರಸ್ತಾವಕ್ಕೆ ಮಾನ್ಯತೆ ನೀಡುವುದಾಗಿ ಮಸ್ಕ್ ಅಮೆರಿಕದ ಸೆಕ್ಯುರಿಟಿ ಅಂಡ್ ಎಕ್ಸ್ಚೇಂಜ್ ಕಮಿಷನ್ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಮಸ್ಕ್ ಏಪ್ರಿಲ್ ತಿಂಗಳಲ್ಲಿ ಮಾಡಿಕೊಂಡಿದ್ದ ಒಪ್ಪಂದಕ್ಕೆ ಬದ್ಧರಾಗುವಂತೆ ಮಸ್ಕ್ ಮೇಲೆ ಒತ್ತಡ ಹೇರಲು ಟ್ವಿಟರ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಮಸ್ಕ್ ನಡವಳಿಕೆ ಗಮನಿಸಿದ್ದ ಹಲವರು ಮುಂದಿನ ದಿನಗಳಲ್ಲಿ ಟ್ವಿಟರ್ನಲ್ಲಿ ಹೆಚ್ಚು ನಿಂದನಾತ್ಮಕ, ತಪ್ಪು ಮಾಹಿತಿಗಳು ಕಾಣಿಸಿಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.
ಆದರೆ ಟ್ವಿಟರ್ ಖರೀದಿಗೆ ಮಸ್ಕ್ ಮತ್ತೊಮ್ಮೆ ಮುಂದಾಗಿದ್ದಾರೆ ಎಂಬ ಸುದ್ದಿ ಅಮೆರಿಕದ ಷೇರುಪೇಟೆಯಲ್ಲಿ ಸಂಚಲನ ಮೂಡಿಸಿತ್ತು. ಟ್ವಿಟರ್ ಕಂಪನಿಯ ಷೇರು ಮೌಲ್ಯ ನಾಟಕೀಯವಾಗಿ ಏಕಾಏಕಿ ಮೇಲೇರಿತು. ಟ್ವಿಟರ್ ಷೇರುಗಳ ವಹಿವಾಟನ್ನೇ ನಿರ್ಬಂಧಿಸಲಾಯಿತು. ‘ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ ಮಾರಾಟ ಪ್ರಕ್ರಿಯೆಯನ್ನು ಮಸ್ಕ್ ಮತ್ತು ಇತರರೊಂದಿಗೆ ಅಂತಿಮಗೊಳಿಸಲಾಗುವುದು’ ಎಂದು ಷೇರು ವಿನಿಮಯ ಕೇಂದ್ರಕ್ಕೆ ಟ್ವಿಟರ್ ಬರೆದಿರುವ ಪತ್ರದಲ್ಲಿ ಮಾಹಿತಿಯಿದೆ.
ಟ್ವಿಟರ್ನ ಪ್ರತಿ ಷೇರಿಗೆ 54.20 ಡಾಲರ್ನಂತೆ ಪಾವತಿಸಲು ಒಪ್ಪಿರುವುದಾಗಿ ಮಸ್ಕ್ ಅವರಿಂದ ಪತ್ರ ಬಂದಿದೆ ಎಂದು ಟ್ವಿಟರ್ ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದೆ. ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು, ಎಲ್ಲ ಕಾನೂನು ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಮಸ್ಕ್ ಷರತ್ತು ಹಾಕಿದ್ದಾರೆ. ಟ್ವಿಟರ್ ದಾಖಲಿಸಿದ್ದ ಪ್ರಕರಣದ ವಿಚಾರಣೆಯು ಇದೇ ವಾರ ಆರಂಭವಾಗಬೇಕಿತ್ತು.
ನ್ಯಾಯಾಲಯದಲ್ಲಿ ತಮಗೆ ಗೆಲುವುದು ಸಿಗುವುದಿಲ್ಲ ಎಂದು ಖಾತ್ರಿಯಾದ ನಂತರವೇ ಮಸ್ಕ್ ಈ ನಿರ್ಧಾರಕ್ಕೆ ಬಂದಿರಬಹುದು. ಖರೀದಿಸುವ ನಿರ್ಧಾರ ಮಾಡಿ ಮತ್ತೆ ಹಿಂಜರಿಯುವುದು ಕೆಲ ಸಾಮಾನ್ಯ ಮನುಷ್ಯರಲ್ಲಿ ಕಂಡುಬರುವ ಪ್ರವೃತ್ತಿ. ಆದರೆ ಹೆಜ್ಜೆ ಮುಂದಿಡುವ ಮೊದಲು ಮಸ್ಕ್ ಪೂರ್ವಾಪರ ವಿವೇಚಿಸಿರಲಿಲ್ಲವೇ ಎಂದು ರಿಚ್ಮಂಡ್ ಲಾ ಯೂನಿವರ್ಸಿಟಿಯ ಪ್ರಾಧ್ಯಾಪಕ ಕಾರ್ಲ್ ಟೊಬಿಯಾಸ್ ಹೇಳಿದರು.
ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ, ಸ್ಪೇಸ್ ಎಕ್ಸ್ ಸೇರಿದಂತೆ ಹಲವು ಉದ್ಯಮಗಳ ಸಮೂಹ ಹೊಂದಿರುವ ಯಶಸ್ವಿ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸುವುದಾಗಿ ಕಳೆದ ಏಪ್ರಿಲ್ನಲ್ಲಿ ಘೋಷಿಸಿದ್ದರು. ಆದರೆ ಜುಲೈ ತಿಂಗಳಲ್ಲಿ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದರು. ‘ನಕಲಿ ಖಾತೆಗಳ ಮೂಲಕ ಟ್ವಿಟರ್ ಮೋಸ ಮಾಡುತ್ತಿದೆ’ ಎನ್ನುವುದು ಮಸ್ಕ್ ಅವರ ಆರೋಪವಾಗಿತ್ತು. ಈ ಅರೋಪವನ್ನು ಅಲ್ಲಗಳೆದಿದ್ದ ಟ್ವಿಟರ್, ನಿರೂಪಿಸುವಂತೆ ಸವಾಲು ಹಾಕಿತ್ತು.
Published On - 8:57 am, Wed, 5 October 22