ನವದೆಹಲಿ: ಉದ್ಯೋಗ ಕಡಿತದ ಭೀತಿಯಲ್ಲಿರುವ ಮೈಕ್ರೋ ಬ್ಲಾಗಿಂಗ್ ವೇದಿಕೆ ಟ್ವಿಟರ್ನ (Twitter) ಸಿಬ್ಬಂದಿ ಇದೀಗ ಹೆಚ್ಚುವರಿ ಸಮಯ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಟ್ವಿಟರ್ ಮ್ಯಾನೇಜರ್ಗಳಿಗೆ ದಿನಕ್ಕೆ 12 ಗಂಟೆ ಹಾಗೂ ವಾರದ ಎಲ್ಲ ದಿನಗಳಲ್ಲಿಯೂ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂಬುದಾಗಿ ಇಂಟರ್ನ್ಯಾಷನಲ್ಸ್ ಕಮ್ಯೂನಿಕೇಷನ್ಸ್ ಉಲ್ಲೇಖಿಸಿ ‘ಸಿಎನ್ಬಿಸಿ’ ವರದಿ ಮಾಡಿದೆ. ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ ಅನ್ನು ಖರೀದಿ ಮಾಡುವುದಕ್ಕೂ ಮೊದಲೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರಿಗೆ, ತಮ್ಮ ಹಾಗೂ ತಮ್ಮ ತಂಡಗಳ ಕೆಲಸದ ಅಗತ್ಯವನ್ನು ಕಂಪನಿಗೆ ಸಾಬೀತುಪಡಿಸುವಂತೆ ಮತ್ತು ಕಂಪನಿಗೆ ತಮ್ಮ ಮೌಲ್ಯವೇನು ಎಂಬುದನ್ನು ಮನವರಿಕೆ ಮಾಡಿಕೊಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.
ಯಾವುದೇ ಪರಿಹಾರವಿಲ್ಲದೆ, ಎಚ್ಚರಿಕೆ ನೋಟಿಸ್ ಸಹ ನೀಡದೆ ತಮ್ಮನ್ನು ಕೆಲಸದಿಂದ ವಜಾಗೊಳಿಸಬಹುದು ಎಂಬ ಆತಂಕ ಟ್ವಿಟರ್ನ ಅನೇಕ ಉದ್ಯೋಗಿಗಳಲ್ಲಿ ಮೂಡಿದೆ ಎಂದು ‘ಸಿಎನ್ಬಿಸಿ’ ವರದಿ ಉಲ್ಲೇಕಿಸಿದೆ. ತಮ್ಮ ಉದ್ಯೋಗದ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಅನೇಕ ಮ್ಯಾನೇಜರ್ಗಳು ಭಾವಿಸಿದ್ದಾರೆ. ಕೆಲವರು ಶುಕ್ರವಾರ ಮತ್ತು ಶನಿವಾರಗಳಂದು ಕೆಲಸದ ಅವಧಿ ಮುಗಿದ ಬಳಿಕ ಮನೆಗೆ ತೆರಳದೆ ಕಚೇರಿಯಲ್ಲಿಯೇ ಮಲಗಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಕಳೆದ ವಾರ ಟ್ವಿಟರ್ ಖರೀದಿಸಿದ್ದ ಮಸ್ಕ್
ಎಲಾನ್ ಮಸ್ಕ್ ಅವರು ಕಳೆದ ವಾರವಷ್ಟೇ 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್ ಅನ್ನು ಖರೀದಿಸಿದ್ದರು. ಇದರ ಬೆನ್ನಲ್ಲೇ, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪರಾಗ್ ಅಗರ್ವಾಲ್, ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ, ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಪ) ನೆಡ್ ಸೆಗಲ್ ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು.
ಟ್ವಟರ್ನಲ್ಲಿ ಇನ್ನಷ್ಟು ಉದ್ಯೋಗ ಕಡಿತ ಮಾಡುವುದಾಗಿ ಎಲಾನ್ ಮಸ್ಕ್ ಹೇಳಿದ್ದಾರೆಂದು ಈ ಹಿಂದೆ ‘ನ್ಯೂಯಾರ್ಕ್ ಟೈಮ್ಸ್’ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಯಾವ ಉದ್ಯೋಗಿಗಳನ್ನು ವಜಾಗೊಳಿಸಬಹುದು ಎಂಬ ಬಗ್ಗೆ ಪಟ್ಟಿ ಸಿದ್ಧಪಡಿಸುವಂತೆ ಮ್ಯಾನೇಜರ್ಗಳಿಗೆ ಸೂಚಿಸಲಾಗಿದೆ ಎಂದೂ ವರದಿ ಹೇಳಿತ್ತು. ಆದರೆ, ಈ ವರದಿಯನ್ನು ಮಸ್ಕ್ ನಿರಾಕರಿಸಿದ್ದರು.
ಇದನ್ನೂ ಓದಿ: Twitter: ಟ್ವಿಟರ್ನಲ್ಲಿ ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಶುಲ್ಕ: ಎಲಾನ್ ಮಸ್ಕ್
ಟ್ವಿಟರ್ನ ಮಾರಾಟ, ಉತ್ಪನ್ನ, ಎಂಜಿನಿಯರಿಂಗ್, ಕಾನೂನು, ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಅನೇಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಂಪನಿಯ ಕಾಲುಭಾಗ ಉದ್ಯೋಗಿಗಳು ವಜಾ ಭೀತಿ ಎದುರಿಸುತ್ತಿದ್ದಾರೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ಇತ್ತೀಚೆಗೆ ವರದಿ ಮಾಡಿತ್ತು.
ಟೆಸ್ಲಾದ 50 ಉದ್ಯೋಗಿಗಳು ಟ್ವಿಟರ್ಗೆ
ಈ ಮಧ್ಯೆ, ಟೆಸ್ಲಾ ಕಂಪನಿಯ 50 ಉದ್ಯೋಗಿಗಳನ್ನು ಮಸ್ಕ್ ಟ್ವಿಟರ್ಗೆ ವರ್ಗಾಯಿಸಿದ್ದಾರೆ. ಟ್ವಿಟರ್ನಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಈ ಉದ್ಯೋಗಿಗಳನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದೂ ‘ಸಿಎನ್ಬಿಸಿ’ ವರದಿ ಉಲ್ಲೇಖಿಸಿದೆ. ಟ್ವಿಟರ್ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸಲು ನೆರವಾಗುವ ಬ್ಲೂಟಿಕ್ ಪಡೆಯಲು ಇನ್ನು ಮುಂದೆ 8 ಡಾಲರ್ ಶುಲ್ಕ ತೆರಬೇಕು ಎಂದು ಎಲಾನ್ ಮಸ್ಕ್ ಹೇಳಿದ್ದು, ಜನರು ಸ್ವತಃ ಶುಲ್ಕ ತೆರಲು ಆರಂಭಿಸಿದರೆ ಜಾಹೀರಾತುದಾರರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಯೋಜನೆಗಳನ್ನು ಜಾರಿಗೊಳಿಸಲು ಟೆಸ್ಲಾದ ಉದ್ಯೋಗಿಗಳನ್ನು ಟ್ವಿಟರ್ಗೆ ವರ್ಗಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ