ಬೆಂಗಳೂರು, ಫೆಬ್ರುವರಿ 23: ಭಾರತದ ಪ್ರಮುಖ ಕ್ಯಾಬ್ ಅಗ್ರಿಗೇಟರ್ ಆಗಿರುವ ಊಬರ್ (Uber) ಸದಾ ಹೊಸ ಆವಿಷ್ಕಾರದಲ್ಲಿ ತೊಡಗಿರುತ್ತದೆ. ಇತ್ತೀಚೆಗಷ್ಟೇ ಬೆಂಗಳೂರು ಮೊದಲಾದ ಕೆಲ ನಗರಗಳಲ್ಲಿ ಊಬರ್ ಶಟಲ್ ಬಸ್ ಸರ್ವಿಸ್ (Uber shuttle bus service) ಆರಂಭಿಸಿದೆ. ಭಾರತದ ಭೇಟಿಗೆ ಬಂದಿರುವ ಊಬರ್ ಸಿಇಒ ದಾರಾ ಖುಸ್ರೋವಶಾಹಿ ನಿನ್ನೆ ಗುರುವಾರ (ಫೆ. 22) ಬೆಂಗಳೂರಿನಲ್ಲಿ ಊಬರ್ ಶಟಲ್ ಬಸ್ ಹತ್ತಿದ್ದರು. ಈ ಬಗ್ಗೆ ಫೋಟೋ ಸಮೇತ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಊಬರ್ ಇಡಿಯಾ ತಂಡದ ಕೆಲ ಸದಸ್ಯರೂ ಕೂಡ ಶಟಲ್ ಬಸ್ನಲ್ಲಿ ದಾರಾ ಖುಸ್ರೋವಶಾಹಿ ಅವರಿಗೆ ಜೊತೆನೀಡಿದರು.
‘ನಮ್ಮ ಬೆಂಗಳೂರು ಆಫೀಸ್ ಬಳಿ ಪ್ರತಿಭಾನ್ವಿತ ತಂಡದ ಜೊತೆ ಊಬರ್ ಶಟಲ್ ಬಸ್ ಹತ್ತಿದ್ದು ಖುಷಿ ತಂದಿತು,’ ಎಂದು ಸಿಇಒ ದಾರಾ ಖುಸ್ರೋವಶಾಹಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
Excited to check out the @Uber Shuttle bus 🚌 at our Bangalore office along with the hugely talented team behind it. Cars, bikes, autos and buses – Uber in India is a one-stop mobility hub. pic.twitter.com/YmRV65wGdW
— dara khosrowshahi (@dkhos) February 22, 2024
ಊಬರ್ ಶಟಲ್ ಬಸ್ ಸೇವೆ ಬೆಂಗಳೂರು, ದೆಹಲಿ, ಹೈದರಾಬಾದ್ ಮತ್ತು ಮುಂಬೈ ನಗರಗಳಲ್ಲಿ ನಡೆಸಲಾಗುತ್ತಿದೆ. ಇದು ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳಿಗೆಂದು ಸದ್ಯಕ್ಕೆ ಮಾಡಿರುವ ಸೇವೆ. ಊಬರ್ ಕಂಪನಿಯದ್ದೇ ಎಸಿ ಬಸ್ಸುಗಳು ಪೂರ್ವ ನಿಗದಿತ ಮಾರ್ಗಗಳಲ್ಲಿ ಸಂಚರಿಸುತ್ತವೆ. ಬುಕ್ ಮೈ ಶೋನಲ್ಲಿ ಸಿನಿಮಾ ಟಿಕೆಟ್ ಬುಕ್ ಮಾಡುವ ರೀತಿಯಲ್ಲಿ ಗ್ರಾಹಕರು ಮುಂಚಿತವಾಗಿ ತಮಗೆ ಬೇಕಾದ ಪಿಕಪ್ ಪಾಯಿಂಟ್, ಸಮಯ ಮತ್ತು ಬಸ್ನ ಸೀಟ್ ಇತ್ಯಾದಿಯನ್ನು ಒಂದು ವಾರ ಮುಂಚಿತವಾಗಿ ಬುಕ್ ಮಾಡಬಹುದು.
ಇದನ್ನೂ ಓದಿ: ಪಕ್ಕದ ಮನೆಯ ಕಂಪ್ಯೂಟರ್ ನೋಡಿ ಆಸೆ ಪಟ್ಟವ, ಇವತ್ತು ಭಾರತದಲ್ಲಿ ಡಿಜಿಟಲ್ ಸರ್ವಿಸ್ ಕಿಂಗ್
ಭಾರತದಲ್ಲಿ ಪ್ರಬಲವಾಗುತ್ತಿರುವ ಒಎನ್ಡಿಸಿ ಇ ಮಾರುಕಟ್ಟೆ ವ್ಯವಸ್ಥೆಗೆ ಊಬರ್ ಕೂಡ ಜೋಡಿತವಾಗಿದೆ. ಈ ನಿಟ್ಟಿನಲ್ಲಿ ಒಎನ್ಡಿಸಿ ಜೊತೆ ಊಬರ್ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ. ಈ ಒಪ್ಪಂದದಿಂದ ಊಬರ್ಗೆ ಸಾಕಷ್ಟು ಅನುಕೂಲವಾಗಬಹುದು. ಹೊಸ ಅವಕಾಶಗಳು ತೆರೆದುಕೊಳ್ಳಬಹುದು. ಉದಾಹರಣೆಗೆ, ಇಂಟರ್ಸಿಟಿ ಬಸ್ ಸೇವೆ, ಮೆಟ್ರೋ ರೈಲು ಟಿಕೆಟ್ ಬುಕಿಂಗ್ ಇತ್ಯಾದಿ ಆಫರ್ ಮಾಡಲು ಒಎನ್ಡಿಸಿ ನೆಟ್ವರ್ಕ್ ಸಹಾಯವಾಗುತ್ತದೆ.
ಭಾರತದಲ್ಲಿ ಆಧಾರ್ ಮೂಲಕ ತಂತ್ರಜ್ಞಾನ ಕ್ರಾಂತಿಗೆ ಕಾರಣವಾದ ನಂದನ್ ನಿಲೇಕಣಿ ಅವರನ್ನು ಊಬರ್ ಸಿಇಒ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿ ಸಂವಾದದಲ್ಲಿ ಭಾಗಿಯಾದರು. ಭಾರತದ ಮಾರುಕಟ್ಟೆಯಲ್ಲಿ ಈಜಿದರೆ ಎಲ್ಲಿಬೇಕಾದರೂ ಜೈಸಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ: 2023ರೊಳಗೆ ಭಾರತದ ಷೇರುಪೇಟೆ ಮೌಲ್ಯ 10 ಟ್ರಿಲಿಯನ್ ಡಾಲರ್ ಮಟ್ಟ ಮುಟ್ಟುತ್ತೆ: ಜೆಫರೀಸ್
‘ಭಾರತೀಯ ಗ್ರಾಹಕರ ನಿರೀಕ್ಷೆ ಎಷ್ಟೆಂದರೆ, ಅವರು ಯಾವುದಕ್ಕೂ ಸುಲಭಕ್ಕೆ ಹಣ ಕೊಡುವುದಿಲ್ಲ. ಭಾರತದ ಮಾರುಕಟ್ಟೆ ಬಹಳ ಕಠಿಣ. ಇಲ್ಲಿ ನಾವು ಯಶಸ್ವಿ ಆಗಿಬಿಟ್ಟರೆ ಎಲ್ಲೆಡೆಯೂ ನಮಗೆ ಯಶಸ್ಸು ಕಟ್ಟಿಟ್ಟಬುತ್ತಿ’ ಎಂದು ನಂದನ್ ನಿಲೇಕಣಿ ಅವರ ಬಳಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ದಾರಾ ಖುಸ್ರೋವಶಾಹಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Fri, 23 February 24