Stock Market: 2023ರೊಳಗೆ ಭಾರತದ ಷೇರುಪೇಟೆ ಮೌಲ್ಯ 10 ಟ್ರಿಲಿಯನ್ ಡಾಲರ್ ಮಟ್ಟ ಮುಟ್ಟುತ್ತೆ: ಜೆಫರೀಸ್
Jefferies Latest Report on Indian Economy: ಭಾರತದ ಷೇರುಮಾರುಕಟ್ಟೆ 2030ರೊಳಗೆ ಎರಡಕ್ಕೂ ಹೆಚ್ಚು ಪಟ್ಟು ಬೆಳೆದು 10 ಟ್ರಿಲಿಯನ್ ಡಾಲರ್ ಮಟ್ಟ ಮುಟ್ಟಬಹುದು ಎಂದು ಜೆಫರೀಸ್ ಹೇಳಿದೆ. ಸದ್ಯ ಭಾರತದ ಮಾರುಕಟ್ಟೆ ಬಂಡವಾಳ 4.3 ಟ್ರಿಲಿಯನ್ ಡಾಲರ್ ಇದೆ. ಈ ವಿಚಾರದಲ್ಲಿ ಅಮೆರಿಕ, ಚೀನಾ, ಜಪಾನ್, ಹಾಂಕಾಂಗ್ ಬಿಟ್ಟರೆ ಭಾರತದ ಷೇರುಪೇಟೆ ದೊಡ್ಡದಿದೆ. ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ರಚನಾತ್ಮಕವಾದ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಜಾಗತಿಕ ಇನ್ವೆಸ್ಟ್ಮೆಂಟ್ ಅಡ್ವೈಸರಿ ಸಂಸ್ಥೆ ಹೇಳಿದೆ.
ನವದೆಹಲಿ, ಫೆಬ್ರುವರಿ 23: ಕಳೆದ ಕೆಲ ವರ್ಷಗಳಿಂದ ಅದ್ವಿತೀಯವಾಗಿ ಬೆಳೆಯುತ್ತಿರುವ ಷೇರು ಮಾರುಕಟ್ಟೆಯ (stock market) ಓಟ ಇದೇ ರೀತಿ ಮುಂದುವರಿಯಬಹುದು ಎನ್ನುವ ಸುಳಿವನ್ನು ಜಾಗತಿಕ ಹೂಡಿಕೆ ಸಲಹೆಗಾರ ಸಂಸ್ಥೆ ಜೆಫರೀಸ್ (Jefferies) ನೀಡಿದೆ. ಈ ಸಂಸ್ಥೆಯ ಪ್ರಕಾರ ಭಾರತದ ಷೇರುಪೇಟೆ ಮೌಲ್ಯ 2030ರೊಳಗೆ 10 ಟ್ರಿಲಿಯನ್ ಡಾಲರ್ನಷ್ಟಾಗಬಹುದು. ಅಂದರೆ ಇನ್ನು ಆರು ವರ್ಷದಲ್ಲಿ ಎರಡಕ್ಕಿಂತ ಹೆಚ್ಚು ಪಟ್ಟು ಬೆಳೆಯುವ ಸಾಧ್ಯತೆ ಇದೆ. ಹಿಂದಿನ ವರ್ಷಗಳಲ್ಲಿ ಷೇರು ಸೂಚ್ಯಂಕಗಳು ಎರಡಂಕಿ ದರದಲ್ಲಿ ಬೆಳೆದಿರುವುದು, ಹಾಗೂ ಆರ್ಥಿಕ ಸುಧಾರಣೆಗಳು (Economic reforms) ಹೀಗೇ ಮುಂದುವರಿಯುವ ನಿರೀಕ್ಷೆ ಇರುವುದು, ಇದನ್ನು ಆಧರಿಸಿ ಜೆಫೆರೀಸ್ ಭಾರತದ ಷೇರುಮಾರುಕಟ್ಟೆಯ ಅಗಾಧ ಬೆಳವಣಿಗೆ ಬಗ್ಗೆ ಆಶಯ ವ್ಯಕ್ತಪಡಿಸಿದೆ.
ಭಾರತದ ಮಾರುಕಟ್ಟೆ ಬಂಡವಾಳ 4.3 ಟ್ರಿಲಿಯನ್ ಡಾಲರ್ನಷ್ಟಿದೆ. ಅಮೆರಿಕ, ಚೀನಾ, ಜಪಾನ್ ಮತ್ತು ಹಾಂಕಾಂಗ್ ಬಳಿಕ ಅತಿಹೆಚ್ಚು ಮೌಲ್ಯದ ಷೇರು ಮಾರುಕಟ್ಟೆ ಭಾರತದ್ದಾಗಿದೆ. ಅಮೆರಿಕದ ಷೇರು ಮಾರುಕಟ್ಟೆ 50 ಟ್ರಿಲಿಯನ್ ಡಾಲರ್ನದ್ದಾಗಿದೆ. ಚೀನಾದ್ದು 11 ಟ್ರಿಲಿಯನ್ ಡಾಲರ್ನಷ್ಟಿದೆ. ಐದನೇ ಸ್ಥಾನದಲ್ಲಿರುವ ಭಾರತದ ಷೇರು ಮಾರುಕಟ್ಟೆ ಮೌಲ್ಯ 4.3 ಟ್ರಿಲಿಯನ್ ಡಾಲರ್ ಇದೆ. 2030ರಲ್ಲಿ ಭಾರತದ ಮಾರುಕಟ್ಟೆ ಬಂಡವಾಳ 10 ಟ್ರಿಲಿಯನ್ ಡಾಲರ್ ಆದಲ್ಲಿ ಮೂರನೇ ಸ್ಥಾನ ಪಡೆಯಬಹುದು.
ಇದನ್ನೂ ಓದಿ: ಆಂಡ್ರಾಯ್ಡ್ ಮಾರುಕಟ್ಟೆಗೆ ಭಾರತದ್ದೇ ಇಂಡಸ್ ಆ್ಯಪ್ಸ್ಟೋರ್ ಲಗ್ಗೆ; ದೇಶೀಯ ಮೊಬೈಲ್ ಬ್ರ್ಯಾಂಡ್ ಅಭಿವೃದ್ಧಿಗೆ ಸರ್ಕಾರ ಆಸಕ್ತಿ
ಜೆಫೆರೀಸ್ ಪ್ರಕಾರ, ಭಾರತದ ಷೇರು ಮಾರುಕಟ್ಟೆ ಮುಂದಿನ ಏಳು ವರ್ಷ ಕಾಲ ಇದೇ ಅದ್ವಿತೀಯ ವೇಗದಲ್ಲಿ ಸಾಗಬಹುದು. ಬಂಡವಾಳ ವೆಚ್ಚದ ಚಕ್ರ ಮತ್ತೆ ತಿರುತ್ತದೆ. ಇದು ಷೇರು ಪೇಟೆಗೆ ಪುಷ್ಟಿ ಕೊಡಬಹುದು. ಭಾರತದ ಮಾರುಕಟ್ಟೆಯ ತೂಕ ಹೆಚ್ಚುತ್ತಿರುವುದು, ಸಾಕಷ್ಟು ವರ್ಷಗಳಿಂದ ಹೂಡಿಕೆಗಳಿಗೆ ಸಿಗುತ್ತಿರುವ ಹೆಚ್ಚಿನ ಲಾಭ, ಇವೆಲ್ಲಾ ಅಂಶಗಳು ವಿದೇಶೀ ಹೂಡಿಕೆಗಳ ಹರಿವನ್ನು ಹೆಚ್ಚಿಸಬಹುದು ಎಂದು ಜೆಫರೀಸ್ ವಿಶ್ಲೇಷಿಸಿದೆ.
ಆರ್ಥಿಕ ಸುಧಾರಣೆಗಳ ಫಲ
ಕಳೆದ ಹತ್ತು ವರ್ಷದಲ್ಲಿ ಭಾರತದಲ್ಲಿ ಮೂಲಭೂತ ರಚನಾತ್ಮಕ ಸುಧಾರಣೆಗಳನ್ನು ರಚಿಸಲಾಗಿದೆ. ಇದರಿಂದ ದೇಶದ ಪೂರ್ಣ ಸಾಮರ್ಥ್ಯ ತೋರ್ಪಡಿಸುವಂತಹ ಒಂದು ಚೌಕಟ್ಟು ಸೃಷ್ಟಿಯಾಗಿದೆ ಎಂದು ಅಮೆರಿಕ ಮೂಲದ ಇನ್ವೆಸ್ಟ್ಮೆಂಟ್ ಅಡ್ವೈಸರಿ ಸಂಸ್ಥೆಯಾದ ಜೆಫೆರೀಸ್ ಹೇಳಿದೆ.
ಇದನ್ನೂ ಓದಿ: ನಲವತ್ತಕ್ಕೂ ಹೆಚ್ಚು ಕಂಪನಿಗಳ ಒಡೆಯರಾಗಿದ್ದಾರೆ ಫ್ಲಿಪ್ಕಾರ್ಟ್ನ ಮಾಜಿ ಉದ್ಯೋಗಿಗಳು
ಮುಂದಿನ ನಾಲ್ಕು ವರ್ಷದಲ್ಲಿ ಭಾರತದ ಜಿಡಿಪಿ ಐದು ಟ್ರಿಲಿಯನ್ ಡಾಲರ್ನಷ್ಟಾಗಲಿದೆ. ಅತಿವೇಗದಲ್ಲಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯ ದೇಶವೆಂಬ ದಾಖಲೆಯನ್ನು ಉಳಿಸಿಕೊಳ್ಳಲಿದೆ. 2027ರಷ್ಟರಲ್ಲಿ ಅದು ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದೂ ಜೆಫೆರೀಸ್ ತನ್ನ ಇತ್ತೀಚಿನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ