ಇಲಾನ್ ಮಸ್ಕ್ ಅವರ ಎಐ ಕಂಪನಿ ಬಿಟ್ಟು ಎದುರಾಳಿ ಓಪನ್ಎಐ ಸೇರಿದ ಭಾರತ ಮೂಲದ ಉದಯ್ ರುದ್ರರಾಜು
Indian origin Uday Ruddarraju shares experience of working under Elon Musk: ಎಕ್ಸ್ಎಐ ಸ್ಟಾರ್ಟಪ್ನಲ್ಲಿ ಇನ್ಫ್ರಾಸ್ಟ್ರಕ್ಚರ್ ಮುಖ್ಯಸ್ಥನಾಗಿ ಒಂದು ವರ್ಷ ಕೆಲಸ ಮಾಡಿದ್ದ ಉದಯ್ ರುದ್ರರಾಜು ರಾಜೀನಾಮೆ ಕೊಟ್ಟಿದ್ದಾರೆ. ಇಲಾನ್ ಮಸ್ಕ್ ಅವರ ವಿರೋಧಿ ಎನ್ನಲಾದ ಸ್ಯಾಮ್ ಆಲ್ಟ್ಮ್ಯಾನ್ ಅವರ ಓಪನ್ ಎಐ ಕಂಪನಿಗೆ ಸೇರಿದ್ದಾರೆ. ಎಕ್ಸ್ಎಐನಲ್ಲಿನ ತಮ್ಮ ಕೆಲಸದ ಅನುಭವ, ಇಲಾನ್ ಮಸ್ಕ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.

ನವದೆಹಲಿ, ಜುಲೈ 13: ಒಂದು ವರ್ಷದ ಹಿಂದೆ ಇಲಾನ್ ಮಸ್ಕ್ ಅವರ ಎಕ್ಸ್ ಎಐ (xAI) ಎನ್ನುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿಗೆ ಅದರ ಇನ್ಫ್ರಾಸ್ಟ್ರಕ್ಚರ್ ಮುಖ್ಯಸ್ಥನಾಗಿ ಸೇರಿದ್ದ ಭಾರತ ಮೂಲದ (Indian origin) ಉದಯ್ ರುದ್ದರ್ರಾಜು (Uday Ruddarraju) ಅವರು ಇದೀಗ ರಾಜೀನಾಮೆ ನೀಡಿ ಎದುರಾಳಿ ಸ್ಯಾಮ್ ಆಲ್ಟ್ಮ್ಯಾನ್ ಅವರ ಓಪನ್ಎಐ ಕಂಪನಿಗೆ ಸೇರಿದ್ದಾರೆ. ಉದಯ್ ರುದ್ರರಾಜು ತಾನು ಎಕ್ಸ್ ಎಐಗೆ ರಾಜೀನಾಮೆ ನೀಡಿದ್ದು, ಹಾಗೂ ಆ ಸ್ಟಾರ್ಟಪ್ನಲ್ಲಿ ತಮ್ಮ ಒಂದು ವರ್ಷದ ಅನುಭವ ಹೇಗಿತ್ತು ಎಂದು ಹೇಳಿಕೊಂಡಿದ್ದಾರೆ. ಇಲಾನ್ ಮಸ್ಕ್ ಅವರ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ.
ಎಕ್ಸ್ಎಐ ಬಹಳ ಕಡಿಮೆ ಅವಧಿಯಲ್ಲಿ ಅನಿರೀಕ್ಷಿತ ಸಾಧನೆ ಮಾಡಿತಾ?
ಉದಯ್ ರುದ್ರರಾಜು ಅವರು ತಮ್ಮ ಒಂದು ವರ್ಷದ ಎಕ್ಸ್ಎಐ ಕೆಲಸವನ್ನು ಮರೆಯಲಾಗದ ಅನುಭವ ಎಂದು ಬಣ್ಣಿಸಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ ಕಂಪನಿ ಇಷ್ಟು ಸಾಧನೆ ಮಾಡುತ್ತದೆ ಎಂದು ತಾನು ನಿರೀಕ್ಷಿಸಿರಲಿಲ್ಲ ಎಂದು ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ದೂರದ ನಾಡಲ್ಲಿ ಬಿಲಿಯನೇರ್ಗಳಾದವರು; ಅಮೆರಿಕದಲ್ಲಿ ಇಸ್ರೇಲ್, ತೈವಾನ್, ಚೀನೀಯರನ್ನೂ ಮೀರಿಸಿದ ಭಾರತೀಯರು
‘ನಾನು ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ, ನಾಲ್ಕು ತಿಂಗಳಲ್ಲಿ ಒಂದು ಲಕ್ಷ ಜಿಪಿಯುಗಳನ್ನು ಅಳವಡಿಸಬಹುದು ಎಂದು ಹೇಳುತ್ತಿದ್ದುದನ್ನು ಕೇಳಿದ್ದೆ. ಪೂರ್ಣ ಕಾರ್ಯ ನಿರ್ವಹಣೆಯ ಸೈಟ್ ಇಲ್ಲದೇ ಇದನ್ನು ಮಾಡಲು ಸಾಧ್ಯವಾ? ಹಾಗನ್ನುತ್ತಿದ್ದವರೆಲ್ಲಾ ಹುಚ್ಚರು ಎಂದು ಭಾವಿಸಿದ್ದೆ. ಆದರೆ, ನಾವು ಎರಡು ಪಟ್ಟು ಹೆಚ್ಚು ಅಳವಡಿಸಿದೆವು. ಅದರಲ್ಲೂ ಗ್ರೋಕ್-3 ಅನ್ನು ಯಶಸ್ವಿಯಾಗಿ ಟ್ರೇನ್ ಮಾಡಿದ್ದು ನನಗೆ ಬಹಳ ಹೆಮ್ಮೆ ತಂದಿತು. ನಾನು ಮೊದಲು ಅಂದುಕೊಂಡಿದ್ದು ತಪ್ಪಾಯಿತಲ್ಲಾ ಎಂದು ಖುಷಿಯಾಯಿತು’ ಎಂದು ರುದ್ರರಾಜು ಸಂತಸ ವ್ಯಕ್ತಪಡಿಸಿದ್ದಾರೆ.
ಇಲಾನ್ ಮಸ್ಕ್ ಬಗ್ಗೆ ರುದ್ರರಾಜು ಹೇಳಿದ್ದಿದು…
ತಾನು ಇಲಾನ್ ಮಸ್ಕ್ ಅವರಿಗೆ ನೇರವಾಗಿ ರಿಪೋರ್ಟಿಂಗ್ ಮಾಡುತ್ತಿದ್ದೆ. ಅವರಿಂದ ನೇರವಾಗಿ ಕಲಿಯುವ ಅವಕಾಶ ಸಿಕ್ಕಿತು. ಎಷ್ಟು ತೀವ್ರತೆಯಿಂದ ಗಮನ ಹರಿಸಬೇಕು, ಹೇಗೆ ಎಕ್ಸಿಕ್ಯೂಟ್ ಮಾಡಬೇಕು ಎಂಬುದನ್ನು ಒಳಗಿಂದ ಪ್ರತ್ಯಕ್ಷವಾಗಿ ಕಂಡೆ ಎಂದು ಹೇಳಿದ ಅವರು ಇಲಾನ್ ಮಸ್ಕ್ ಅವರ ಕ್ಷಮತೆಯನ್ನು ಹೊಗಳಿದ್ದಾರೆ.
ಇದನ್ನೂ ಓದಿ: ಮಾವನ ಕಂಪನಿಯಲ್ಲಿ ಯಾಕೆ ಸೇರಲಿಲ್ಲ? ಕಾರ್ಪೊರೇಟ್ ಉದ್ಯೋಗಕ್ಕೆ ಸೇರಿದ ಮಾಜಿ ಪ್ರಧಾನಿ ಬಗ್ಗೆ ತಮಾಷೆ
‘ಜೆನ್ಸೆನ್ ಹುವಾಂಗ್ ಹೇಳಿದ್ದು ನಿಜ. ಇಲಾನ್ ಮತ್ತವರ ತಂಡಗಳು ಸಾಧನೆ ವಿಷಯಕ್ಕೆ ಬಂದರೆ ಒಂದೇ ತೆರನಾದವರು. ಎಐ ಕಂಪ್ಯೂಟಿಂಗ್ನ ಭವಿಷ್ಯವನ್ನು ರೂಪಿಸಲು ಸಣ್ಣ ಪಾತ್ರ ವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಋಣಿಯಾಗಿದ್ದೇನೆ’ ಎಂದು ಭಾರತ ಮೂಲದ ಉದಯ್ ರುದ್ರರಾಜು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ