ಆರ್ಬಿಐನ ಗೋಲ್ಡ್ ಸ್ಕೀಮ್; ಐದು ವರ್ಷದಲ್ಲಿ ಹಣ ಡಬಲ್; 2020ರ ಸರಣಿಯಲ್ಲಿ ಹೂಡಿಕೆ ಮಾಡಿದವರಿಗೆ ಅರ್ಲಿ ರಿಡೆಂಪ್ಷನ್ ಅವಕಾಶ
Sovereign Gold Bond scheme: 2020-21ರ ಸಾಲಿನ ನಾಲ್ಕನೇ ಸರಣಿ ಎಸ್ಜಿಬಿಯ ಅರ್ಲಿ ರಿಡೆಂಪ್ಷನ್ ಜುಲೈ 14ರಂದು ನಡೆಯಲಿದೆ. ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತದಾದರೂ ಅವಧಿಗೆ ಮುನ್ನ ಹೂಡಿಕೆ ಹಿಂಪಡೆಯುವ ಅವಕಾಶ ಇದೆ. ಐದು ವರ್ಷದ ಹಿಂದೆ ಮಾಡಿದ್ದ ಹೂಡಿಕೆ ಈಗ ಎರಡು ಪಟ್ಟು ಹೆಚ್ಚಾಗಿದೆ. ಈ ಸ್ಕೀಮ್ ಬಗ್ಗೆ ವಿವರ ಇಲ್ಲಿದೆ...

ನವದೆಹಲಿ, ಜುಲೈ 13: ಸರ್ಕಾರದಿಂದ ನಡೆಸಲಾಗುವ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ (Sovereign Gold Bond scheme) 2020-21ರ ಸರಣಿ-4ರ ಹೂಡಿಕೆಯ ಅವಧಿಪೂರ್ವ ರಿಡೆಂಪ್ಷನ್ ಅವಕಾಶ ನೀಡಲಾಗಿದೆ. 2025ರ ಜುಲೈ 14ರಂದು ಹೂಡಿಕೆದಾರರು ಅರ್ಲಿ ರಿಡೆಂಪ್ಷನ್ಗೆ ಅರ್ಜಿ ಸಲ್ಲಿಸಬಹುದು. ಎಂಟು ವರ್ಷಕ್ಕೆ ಮೆಚ್ಯೂರಿಟಿ ಆಗಲು ಇನ್ನೂ ಮೂರು ವರ್ಷ ಇದೆಯಾದರೂ ಈಗ ಐದು ವರ್ಷಕ್ಕೆ ಅರ್ಲಿ ರಿಡೆಂಪ್ಷನ್ ಪಡೆಯಲು ಅವಕಾಶ ಇರುತ್ತದೆ.
ಈ ಐದು ವರ್ಷದಲ್ಲಿ ಹೂಡಿಕೆದಾರರ ಹಣ ಎರಡು ಪಟ್ಟು ಹೆಚ್ಚಾಗಿದೆ. 2020ರ ಜುಲೈನಲ್ಲಿ 2020-21ರ ಸರಣಿ-4 ಅನ್ನು ವಿತರಿಸಲಾಗಿತ್ತು. ಆಗ ಹೂಡಿಕೆ ಮಾಡಲು ಒಂದು ಗ್ರಾಮ್ ಚಿನ್ನಕ್ಕೆ 4,852 ರೂ ಬೆಲೆ ನಿಗದಿ ಮಾಡಲಾಗಿತ್ತು. ಈಗ ಐದು ವರ್ಷಗಳ ಬಳಿಕ ಪ್ರೀಮೆಚ್ಯೂರ್ ರಿಡೆಂಪ್ಷನ್ನಲ್ಲಿ ಒಂದು ಗ್ರಾಮ್ ಚಿನ್ನಕ್ಕೆ 9,688 ರೂ ನಿಗದಿ ಮಾಡಲಾಗಿದೆ. ಅಂದರೆ, ಚಿನ್ನದ ಮೌಲ್ಯ ಗ್ರಾಮ್ಗೆ 4,836 ರೂ ಹೆಚ್ಚಿದೆ. ಅಂದರೆ, ಐದು ವರ್ಷದಲ್ಲಿ ಬಹುತೇಕ ಎರಡು ಪಟ್ಟು ಮೌಲ್ಯ ಹೆಚ್ಚಳ ಆಗಿದೆ. ಹೂಡಿಕೆ ಮೌಲ್ಯವೂ ದ್ವಿಗುಣಗೊಂಡಿದೆ.
ಹೂಡಿಕೆ ದ್ವಿಗುಣದ ಜೊತೆಗೆ ಶೇ. 2.5 ಬಡ್ಡಿ ಆದಾಯವನ್ನೂ ನೀಡುವ ಎಸ್ಜಿಬಿ
ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮೌಲ್ಯವು ಚಿನ್ನದ ಬೆಲೆಗೆ ಅನುಗುಣವಾಗಿ ಹೆಚ್ಚುತ್ತದೆ. ಜೊತೆಗೆ ಶೇ. 2.5ರಷ್ಟು ವಾರ್ಷಿಕ ಬಡ್ಡಿಯಂತೆ ಪ್ರತೀ ಆರು ತಿಂಗಳಿಗೊಮ್ಮೆ ಆದಾಯವೂ ಸಿಗುತ್ತಾ ಹೋಗುತ್ತದೆ.
ಇದನ್ನೂ ಓದಿ: ಪಿಪಿಎಫ್ನಿಂದ ಹಿಡಿದು ಆರ್ಬಿಟ್ರೇಜ್ ಫಂಡ್ವರೆಗೆ; ಕಡಿಮೆ ರಿಸ್ಕ್ ಇರುವ ಹೂಡಿಕೆ ಆಯ್ಕೆಗಳಿವು
ಐದು ವರ್ಷದ ಹಿಂದೆ ಎರಡು ಲಕ್ಷ ರೂ ಹೂಡಿಕೆ ಮಾಡಿದ್ದರೆ?
ನೀವು ಐದು ವರ್ಷದ ಹಿಂದೆ ಎಸ್ಜಿಬಿ ಸ್ಕೀಮ್ನಲ್ಲಿ ಎರಡು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ನಿಮ್ಮ ಹೂಡಿಕೆ ಮೌಲ್ಯ ನಾಲ್ಕು ಲಕ್ಷ ರೂ ಆಗಿರುತ್ತಿತ್ತು. ಇದರ ಜೊತೆಗೆ, ಪ್ರತೀ ಆರು ತಿಂಗಳಿಗೊಮ್ಮೆ ನಿಮಗೆ ಎರಡೂವರೆ ಸಾವಿರ ರೂ ಬಡ್ಡಿ ಆದಾಯವೂ ಬ್ಯಾಂಕ್ ಖಾತೆಗೆ ಜಮೆ ಆಗುತ್ತಾ ಹೋಗುತ್ತಿತ್ತು. ಅಂದರೆ, ನಿಮ್ಮ ಎರಡು ಲಕ್ಷ ರೂ ಹೂಡಿಕೆಯು ನಿಮಗೆ ತರುತ್ತಿದ್ದ ಒಟ್ಟು ರಿಟರ್ನ್ ಸುಮಾರು 4,25,000 ರೂ ಆಗಿರುತ್ತಿತ್ತು.
ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಪಾಲ್ಗೊಳ್ಳುವುದು ಹೇಗೆ?
ಎಸ್ಜಿಬಿ ಸ್ಕೀಮ್ ಆರ್ಬಿಐನಿಂದ ನಡೆಸಲ್ಪಡುತ್ತದೆ. ಕಳೆದ ಕೆಲ ವರ್ಷಗಳಿಂದ ಹೊಸ ಸರಣಿಯ ಬಿಡುಗಡೆ ಆಗಿಲ್ಲ. ಈ ಸ್ಕೀಮ್ನಲ್ಲಿ ಒಬ್ಬ ವ್ಯಕ್ತಿ ನಾಲ್ಕು ಕಿಲೋ ಚಿನ್ನದ ಮೌಲ್ಯದವರೆಗೂ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಎಂಟು ವರ್ಷಕ್ಕೆ ಹೂಡಿಕೆಯು ಮೆಚ್ಯೂರ್ ಆಗುತ್ತದೆ. ಹೂಡಿಕೆ ಮಾಡುವಾಗ ಮಾರುಕಟ್ಟೆ ಬೆಲೆ ಪ್ರಕಾರ ಚಿನ್ನದ ಬೆಲೆ ನಿರ್ಧರಿಸಲಾಗುತ್ತದೆ. ಮೆಚ್ಯೂರ್ ಆದಾಗ ಆಗಿನ ಮಾರುಕಟ್ಟೆ ದರ ಪ್ರಕಾರ ಬೆಲೆ ನಿಗದಿ ಆಗುತ್ತದೆ. ಬದಲಾದ ಬೆಲೆಗೆ ಅನುಗುಣವಾಗಿ ಹೂಡಿಕೆಯ ಮೌಲ್ಯ ಹೆಚ್ಚಳ ಆಗುತ್ತದೆ.
ಇದನ್ನೂ ಓದಿ: LIC Plans: ಸಂಬಳ ಪಡೆಯುವವರಿಗೆ ಸೂಕ್ತವಾಗುವ ಉತ್ತಮ ಎಲ್ಐಸಿ ಪ್ಲಾನ್ಗಳಿವು…
ಸದ್ಯ ಸರ್ಕಾರವು ಹೊಸ ಸರಣಿಯನ್ನು ಬಿಡುಗಡೆ ಮಾಡುತ್ತಿಲ್ಲ. ಎಸ್ಜಿಬಿ ಬಾಂಡ್ಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಟ್ರೇಡಿಂಗ್ ಮಾಡಲಾಗುತ್ತದೆ. ಈಗಾಗಲೇ ಬಾಂಡ್ ಪಡೆದವರು ಇಲ್ಲಿ ಮಾರುವಾಗ ನೀವು ಖರೀದಿಸಲು ಅವಕಾಶ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








