ಪಿಪಿಎಫ್ನಿಂದ ಹಿಡಿದು ಆರ್ಬಿಟ್ರೇಜ್ ಫಂಡ್ವರೆಗೆ; ಕಡಿಮೆ ರಿಸ್ಕ್ ಇರುವ ಹೂಡಿಕೆ ಆಯ್ಕೆಗಳಿವು
Investment options for low risk: ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸದ, ಆದರೆ, ದೀರ್ಘಾವಧಿ ಹಾಗೂ ತುಸು ಅಧಿಕ ರಿಟರ್ನ್ ಬಯಸುವ ಜನರಿಗೆ ಒಂದಷ್ಟು ಹೂಡಿಕೆ ಆಯ್ಕೆಗಳಿವೆ. ಫಿಕ್ಸೆಡ್ ಡೆಪಾಸಿಟ್ ಬಹಳ ಸಾಮಾನ್ಯ ಆಯ್ಕೆ. ಅದು ಬಿಟ್ಟು ಇನ್ನೂ ವಿವಿಧ ಹೂಡಿಕೆಗಳಿಗೆ ಅವಕಾಶ ಇದೆ. ಪಿಪಿಎಫ್, ಇಪಿಎಫ್ ಇತ್ಯಾದಿ ಇವೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ...

ಸಂಬಳದ ಆದಾಯ ಮಾತ್ರವನ್ನೇ ಹೊಂದಿರುವವರು, ಮತ್ತು ರಿಸ್ಕ್ ತೆಗೆದುಕೊಳ್ಳುವಷ್ಟು ಸಂಪಾದನೆ ಹೊಂದಿಲ್ಲದಿರುವವರು ತಮ್ಮ ಭವಿಷ್ಯದ ಹಣಕಾಸು ಭದ್ರತೆ ಹೇಗೆ ರೂಪಿಸಬಹುದು? ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವುದು ಎಲ್ಲರಿಗೂ ಸೂಕ್ತವಾಗುಂಥದ್ದಲ್ಲ. ಮ್ಯುಚುವಲ್ ಫಂಡ್ಗಳಲ್ಲಿ (Mutual Funds) ಹೂಡಿಕೆ ಮಾಡಬಹುದು. ಅಲ್ಲಿ ಈಕ್ವಿಟಿ ಫಂಡ್ಗಳಲ್ಲಿ ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ ನಿರೀಕ್ಷಿಸಬಹುದಾದರೂ ರಿಸ್ಕ್ ಅಂಶ (risky investments) ಅಧಿಕ ಇರುತ್ತದೆ. ಹೆಚ್ಚು ರಿಸ್ಕ್ ಇಲ್ಲದ ಹೂಡಿಕೆಗಳನ್ನು ಬಯಸುವವರಿಗೂ ವಿವಿಧ ಆಯ್ಕೆಗಳಿವೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್
ಪಿಪಿಎಫ್ ದೀರ್ಘಾವಧಿ ಹೂಡಿಕೆಗೆಂದು ಇರುವ ಸಣ್ಣ ಉಳಿತಾಯ ಯೋಜನೆ. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೂ ಹೂಡಿಕೆ ಸಾಧ್ಯ. 15 ವರ್ಷ ಲಾಕ್ ಇನ್ ಇರುತ್ತದೆ. ಹೀಗಾಗಿ, ದೀರ್ಘಾವಧಿಗೆ ನೀವು ಕಮಿಟ್ ಆಗುವಂತೆ ಮಾಡುತ್ತದೆ. ಸರ್ಕಾರ ಬೆಂಬಲಿತ ಸ್ಕೀಮ್ ಆದ್ದರಿಂದ ಮೋಸವಾಗುವ ಭಯ ಇಲ್ಲ. ಸದ್ಯ ಇದಕ್ಕೆ ವಾರ್ಷಿಕ ಬಡ್ಡಿದರ ಶೇ. 7.1 ಇದೆ. ಈ ಹೂಡಿಕೆ ಮೊತ್ತಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ.
ಇಪಿಎಫ್ ಸ್ಕೀಮ್
ಉದ್ಯೋಗಿಗಳ ಭವಿಷ್ಯ ನಿಧಿ ಎಂಬುದು ನಿವೃತ್ತಿ ಕಾಲಕ್ಕೆಂದು ರೂಪಿಸಿರುವ ಯೋಜನೆ. ಶೇ. 8.25 ಬಡ್ಡಿ ನೀಡಲಾಗುತ್ತಿದೆ. ಅತಿಹೆಚ್ಚು ಬಡ್ಡಿ ಸಿಗುವ ಸರ್ಕಾರಿ ಸ್ಕೀಮ್ಗಳಲ್ಲಿ ಇದೂ ಒಂದು.
ಇದನ್ನೂ ಓದಿ: LIC Plans: ಸಂಬಳ ಪಡೆಯುವವರಿಗೆ ಸೂಕ್ತವಾಗುವ ಉತ್ತಮ ಎಲ್ಐಸಿ ಪ್ಲಾನ್ಗಳಿವು…
ಚಿನ್ನದ ಮೇಲೆ ಹೂಡಿಕೆ ಉತ್ತಮ
ಚಿನ್ನವನ್ನು ಆಪತ್ಕಾಲದ ವಸ್ತು ಎನ್ನಲಾಗುತ್ತದೆ. ಸಾಮಾನ್ಯವಾಗಿ ಚಿನ್ನದ ಬೆಲೆ ವರ್ಷಕ್ಕೆ ಶೇ. 8-15ರಷ್ಟು ಬೆಳೆಯುತ್ತದೆ. ಕಳೆದ ಎರಡು ವರ್ಷದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದೆ. ಹೂಡಿಕೆ ಮಾಡಲು ಆಭರಣ ಚಿನ್ನಕ್ಕಿಂತ ಅಪರಂಜಿ ಚಿನ್ನ, ಡಿಜಿಟಲ್ ಗೋಲ್ಡ್ ಉತ್ತಮ ಆಯ್ಕೆಯಾಗಿರುತ್ತದೆ.
ಆರ್ಬಿಐ ಸೇವಿಂಗ್ಸ್ ಬಾಂಡ್
ರಿಸರ್ವ್ ಬ್ಯಾಂಕ್ನ ಸೇವಿಂಗ್ಸ್ ಬಾಂಡ್ಗಳು ಆರು ವರ್ಷಕ್ಕೆ ಮೆಚ್ಯೂರ್ ಆಗುತ್ತವೆ. ವಾರ್ಷಿಕ ಶೇ. 8ರಷ್ಟು ಬಡ್ಡಿ ನೀಡುತ್ತವೆ. ಪ್ರತೀ ಆರು ತಿಂಗಳಿಗೆ ಬಡ್ಡಿ ಹಣವನ್ನು ನಿಮಗೆ ನೀಡಲಾಗುತ್ತದೆ.
ಕಾರ್ಪೊರೇಟ್ ಬಾಂಡ್ಗಳು
ವಿವಿಧ ಕಾರ್ಪೊರೇಟ್ ಕಂಪನಿಗಳು ಸಾರ್ವಜನಿಕವಾಗಿ ಬಂಡವಾಳ ಪಡೆಯಲು ಸಾಲಪತ್ರಗಳನ್ನು ನೀಡುತ್ತವೆ. ಸರ್ಕಾರದ ಬಾಂಡ್ಗಳಿಗಿಂತ ಇವು ಹೆಚ್ಚು ಬಡ್ಡಿ ಆಫರ್ ಮಾಡುತ್ತವೆ. ಶೇ. 8ರಿಂದ 12ರಷ್ಟು ವಾರ್ಷಿಕ ರಿಟರ್ನ್ ನಿರೀಕ್ಷಿಸಬಹುದು. ಆದರೆ, ಖಾಸಗಿ ಕಂಪನಿಗಳಾದ್ದರಿಂದ ರಿಸ್ಕ್ ಅಂಶ ತುಸು ಹೆಚ್ಚಿರುತ್ತದೆ.
ಆರ್ಬಿಟ್ರೇಜ್ ಫಂಡ್ಗಳು
ಆರ್ಬಿಟ್ರೇಜ್ ಫಂಡ್ (Arbitrage Mutual Funds) ಎಂಬುದು ಒಂದು ರೀತಿಯ ಹೈಬ್ರಿಡ್ ಮ್ಯುಚುವಲ್ ಫಂಡ್. ಕ್ಯಾಷ್ ಸೆಗ್ಮೆಂಟ್ ಮತ್ತು ಡಿರೈವೇಟಿವ್ ಸೆಗ್ಮೆಂಟ್ಗಳಲ್ಲಿ ಒಂದು ಷೇರಿಗೆ ಇರುವ ಬೆಲೆ ವ್ಯತ್ಯಾಸವನ್ನು ಬಳಸಿ ಈ ಫಂಡ್ ಲಾಭ ಮಾಡುತ್ತದೆ.
ಇದನ್ನೂ ಓದಿ: Investment: 6 ತಿಂಗಳಿಂದ 1 ವರ್ಷದವರೆಗೆ ಹೂಡಿಕೆ ಮಾಡಲು ಯಾವ ಪ್ಲಾನ್ಗಳು ಬೆಸ್ಟ್?
ಉದಾಹರಣೆಗೆ, ಕ್ಯಾಷ್ ಮಾರ್ಕೆಟ್ನಲ್ಲಿ (ಸಾಂಪ್ರದಾಯಿಕ ಷೇರು ಟ್ರೇಡಿಂಗ್ ಇರುವ ಮಾರುಕಟ್ಟೆ) ಒಂದು ಷೇರಿಗೆ 2,000 ರೂ ಇರುತ್ತದೆ. ಡಿರೈವೇಟಿವ್ಸ್ ಸೆಗ್ಮೆಂಟ್ನ ಫ್ಯೂಚರ್ಸ್ ಮಾರ್ಕೆಟ್ನಲ್ಲಿ ಅದೇ ಷೇರಿಗೆ 2,400 ರೂ ಇರುತ್ತದೆ ಎಂದಿಟ್ಟುಕೊಳ್ಳಿ. ಆಗ ಆರ್ಬಿಟ್ರೇಜ್ ಫಂಡ್ ಕ್ಯಾಷ್ ಮಾರ್ಕೆಟ್ನಲ್ಲಿ ಆ ಷೇರನ್ನು ಖರೀದಿಸಿ ಫ್ಯೂಚರ್ಸ್ ಮಾರ್ಕೆಟ್ನಲ್ಲಿ ಮಾರುತ್ತದೆ. ಇದರಿಂದ ಒಂದು ಷೇರಿಗೆ 400 ರೂ ಲಾಭ ಸಿಗುತ್ತದೆ. ಹೀಗಾಗಿ, ಆರ್ಬಿಟ್ರೇಜ್ ಮ್ಯೂಚುವಲ್ ಫಂಡ್ಗಳು ಸುರಕ್ಷಿತ ಎನಿಸುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ