ವಾರನ್ ಬಫೆಟ್ ಇನ್ವೆಸ್ಟ್ಮೆಂಟ್ ಟಿಪ್ಸ್; ಮ್ಯುಚುವಲ್ ಫಂಡ್ ಹೂಡಿಕೆದಾರರು ಕಲಿಯಬೇಕಾದ ಪಾಠಗಳು…
Warren Buffett investment tips for mutual fund investors: ಸುಪ್ರಸಿದ್ಧ ಹೂಡಿಕೆದಾರ ವಾರನ್ ಬಫೆಟ್ ಅವರಿಂದ ಕಲಿಯಬಹುದಾದ ಹೂಡಿಕೆ ಪಾಠಗಳು ಅಗಣಿತ. ಮ್ಯುಚುವಲ್ ಫಂಡ್ ಹೂಡಿಕೆದಾರರಿಗೆ ವಾರನ್ ಬಫೆಟ್ ಅವರ ಅನೇಕ ಸಲಹೆಗಳು ಸೂಕ್ತ ಎನಿಸುತ್ತವೆ. ಹೂಡಿಕೆ ವಿಚಾರದಲ್ಲಿ ಇರುವ ಕೆಲ ತಪ್ಪು ತಿಳಿವಳಿಕೆಯನ್ನು ನೀಗಿಸಿ ಸರಿಯಾಗಿ ಹೂಡಿಕೆ ಹೇಗೆ ಮಾಡಬೇಕು ಎಂದು ತಿಳಿಸುವ ಪ್ರಯತ್ನ...

ವಾರನ್ ಬಫೆಟ್ (Warren Buffett) ವಿಶ್ವದ ಅತ್ಯಂತ ಜಾಣ ಹಾಗೂ ಅತಿದೊಡ್ಡ ಹೂಡಿಕೆದಾರ ಎನಿಸಿದ್ದಾರೆ. ಹಲವು ದಶಕಗಳಿಂದ ಹೂಡಿಕೆ ಮಾಡಿದ ಅಪಾರ ಅನುಭವ ಅವರದ್ದು. ಹಲವು ಮಾರುಕಟ್ಟೆ ಏರಿಳಿತಗಳನ್ನು ಕಂಡು ಮಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೇಗೆ ಹೂಡಿಕೆ ಮಾಡಬಹುದು ಎಂದು ಅವರು ವಿವಿಧ ಸಂದರ್ಭಗಳಲ್ಲಿ ಸಲಹೆಗಳನ್ನು ನೀಡಿದ್ದಿದೆ. ಮ್ಯುಚುವಲ್ ಫಂಡ್ (Mutual fund) ಹೂಡಿಕೆದಾರರಾಗಿ ಅವರ ಸಲಹೆಗಳನ್ನು ಹೇಗೆ ಸ್ವೀಕರಿಸಬಹುದು? ಮುಂದಿವೆ ಅವರ ಕೆಲ ಅನುಭವ ನುಡಿಗಳಿಂದ ಕಲಿಯಬಹುದಾದ ಪಾಠಗಳು…
ಇಂಡೆಕ್ಸ್ ಫಂಡ್ಗಳಲ್ಲಿ ಹೂಡಿಕೆ ಸುಲಭ ಮತ್ತು ಸೂಕ್ತ
ಸಣ್ಣ ಹೂಡಿಕೆದಾರರಿಗೆ ಯಾವುದರಲ್ಲಿ ಮತ್ತು ಯಾವಾಗ ಹೂಡಿಕೆ ಮಾಡಬೇಕೆಂದು ಆಳವಾಗಿ ರಿಸರ್ಚ್ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅಂಥವರು ಕಡಿಮೆ ವೆಚ್ಚದ ಇಂಡೆಕ್ಸ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಮ್ಯಾನೇಜರ್ ನಿರ್ವಹಿತ ಫಂಡ್ಗಳಲ್ಲಿ ಎಕ್ಸ್ಪೆನ್ಸ್ ರೇಶಿಯೋ ಅಧಿಕ ಇರುತ್ತದಾದ್ದರಿಂದ ಇಂಡೆಕ್ಸ್ ಫಂಡ್ ಉತ್ತಮ ಆಯ್ಕೆ ಎನಿಸುತ್ತದೆ.
ಇದನ್ನೂ ಓದಿ: ಪಿಪಿಎಫ್ನಿಂದ ಹಿಡಿದು ಆರ್ಬಿಟ್ರೇಜ್ ಫಂಡ್ವರೆಗೆ; ಕಡಿಮೆ ರಿಸ್ಕ್ ಇರುವ ಹೂಡಿಕೆ ಆಯ್ಕೆಗಳಿವು
ವಾರನ್ ಬಫೆಟ್ ಈ ಅಭಿಪ್ರಾಯ ಅನುಮೋದಿಸುತ್ತಾರೆ. ತಾನು ಸತ್ತ ಬಳಿಕ ಶೇ. 90ರಷ್ಟು ಆಸ್ತಿಯನ್ನು ಎಸ್ ಅಂಡ್ ಪಿ 500 ಇಂಡೆಕ್ಸ್ ಫಂಡ್ಗಳಲ್ಲಿ ಹೂಡಿಕೆ ಮಾಡಬೇಕೆಂದು ಒಮ್ಮೆ ಅವರು ಹೇಳಿದ್ದುಂಟು.
ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯ ಯಾವುದು?
ಮಾರ್ಕೆಟ್ ಟೈಮಿಂಗ್ ಮಾಡುವುದು ಮುಖ್ಯ ಎಂದು ಕೆಲವರು ಹೇಳುತ್ತಾರೆ. ಅಂದರೆ, ಮಾರುಕಟ್ಟೆ ಕೆಳಗೆ ಕುಸಿದಾಗ ಹೂಡಿಕೆ ಮಾಡಬೇಕು ಎನ್ನುವುದು. ಆದರೆ, ವಾರನ್ ಬಫೆಟ್ ಪ್ರಕಾರ, ಆ ರೀತಿ ಟೈಮಿಂಗ್ಗೆ ಕಾಯುವುದು ಸೂಕ್ತವಲ್ಲ, ಉತ್ತಮ ಸ್ಟಾಕ್ ಸಿಕ್ಕರೆ ಯಾವ ಸಮಯವಾದರೂ ಹೂಡಿಕೆ ಮಾಡಬಹುದು. ಮುಂದಿನ 10 ವರ್ಷ ಮಾರುಕಟ್ಟೆ ಬಂದ್ ಆಗುತ್ತದೆ ಎಂದಾಗ ನೀವು ಯಾವ ಷೇರನ್ನು ಇಟ್ಟುಕೊಂಡಿರಲು ಇಷ್ಟಪಡುತ್ತೀರಿ ಅದನ್ನಷ್ಟೇ ಆಯ್ಕೆ ಮಾಡಿಕೊಳ್ಳಿ ಎನ್ನುತ್ತಾರೆ ಬಫೆಟ್.
ಮಾರುಕಟ್ಟೆ ಏರಿಳಿತಕ್ಕೆ ತಲೆಕೆಡಿಸಿಕೊಳ್ಳಬೇಡಿ
ಕಳೆದ ಒಂದು ವರ್ಷದಲ್ಲಿ ಷೇರು ಮಾರುಕಟ್ಟೆ ವಿಪರೀತ ಅಲುಗಾಟ ಕಂಡಿದೆ. ಈ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರು ವಿಚಲಿತಗೊಂಡು ನಷ್ಟ ಕಾಣುವ ಸಾಧ್ಯತೆ ಹೆಚ್ಚಿರುತ್ತದೆ. ಹೂಡಿಕೆದಾರರು ಮಾರುಕಟ್ಟೆಯ ಅಲುಗಾಟಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಮಾರುಕಟ್ಟೆ ಹೇಗೇ ಇರಲಿ ಹೂಡಿಕೆ ಮುಂದುವರಿಯುತ್ತಿರಬೇಕು ಎನ್ನುತ್ತಾರೆ ವಾರನ್ ಬಫೆಟ್. ಅಂತೆಯೇ, ಮ್ಯುಚುವಲ್ ಫಂಡ್ಗಳಲ್ಲಿ ಎಸ್ಐಪಿ ಮೂಲಕ ಹೂಡಿಕೆ ಮುಂದುವರಿಸಿಕೊಂಡು ಹೋಗುವುದು ಜಾಣತನ.
ಇದನ್ನೂ ಓದಿ: ಮ್ಯುಚುವಲ್ ಫಂಡ್ ಉದ್ಯಮದಲ್ಲಿ 74 ಲಕ್ಷ ಕೋಟಿ ರೂ; 8 ಕೋಟಿ ಎಸ್ಐಪಿ ಅಕೌಂಟ್; ಗೋಲ್ಡ್ ಇಟಿಎಫ್ಗಳಿಗೆ ಬೇಡಿಕೆ
ಮಾರುಕಟ್ಟೆ ಬಗ್ಗೆ ಭವಿಷ್ಯ ನುಡಿಯುವ ತಜ್ಞರ ಮಾತು ನಂಬಬೇಡಿ…
ಮಾರುಕಟ್ಟೆ ಮುಂದಿನ ಒಂದು ವರ್ಷದಲ್ಲಿ ಇಷ್ಟು ಏರುತ್ತೆ, ಇಷ್ಟು ಕುಸಿಯುತ್ತೆ ಎಂದು ತಜ್ಞರು ಭವಿಷ್ಯ ಹೇಳುವುದನ್ನು ಕೇಳಿರುತ್ತೇವೆ. ಆದರೆ, ವಾರನ್ ಬಫೆಟ್ ಪ್ರಕಾರ ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. ನೀವು ಮ್ಯುಚುವಲ್ ಫಂಡ್ ಹೂಡಿಕೆದಾರರಾಗಿದ್ದರೆ ಇಂಥ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಹೂಡಿಕೆ ಮುಂದುವರಿಸುವುದು ಜಾಣತನವಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ