ನವದೆಹಲಿ, ಜನವರಿ 26: ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ವ್ಯವಸ್ಥೆಯಾಗಿ ಯುನಿಫೈಡ್ ಪೆನ್ಷನ್ ಸ್ಕೀಮ್ ಅನ್ನು ಜಾರಿಗೊಳಿಸುತ್ತಿರುವುದಾಗಿ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಹಳೆಯ ಪೆನ್ಷನ್ ಸ್ಕೀಮ್ ಬದಲು ಸರ್ಕಾರ ಹೊಸದಾದ ನ್ಯಾಷನಲ್ ಪೆನ್ಷನ್ ಸಿಸ್ಟಂ ಅಥವಾ ಎನ್ಪಿಎಸ್ ಅನ್ನು ಜಾರಿಗಳಿಸಿತ್ತು. ಆದರೆ, ಸರ್ಕಾರಿ ನೌಕರರು ತಮಗೆ ಹಳೆಯ ಪೆನ್ಷನ್ ವ್ಯವಸ್ಥೆಯೇ ಬೇಕೆಂದು ಪಟ್ಟು ಹಿಡಿದಿದ್ದರು. ಸಾಕಷ್ಟು ಹಗ್ಗಜಗ್ಗಾಟದ ಬಳಿಕ ಸರ್ಕಾರ ಮಧ್ಯದ ಹಾದಿ ತುಳಿಯುತ್ತಿದೆ. ಯೂನಿಫೈಡ್ ಪೆನ್ಷನ್ ಸ್ಕೀಮ್ (Unified Pension System) ಅಥವಾ ಯುಪಿಎಸ್ ಹಳೆಯ ಪೆನ್ಷನ್ ಸಿಸ್ಟಂ ಹಾಗೂ ನ್ಯಾಷನಲ್ ಪೆನ್ಷನ್ ಸಿಸ್ಟಂನ (NPS) ಅಂಶಗಳನ್ನು ಸಂಯೋಜಿಸಿ ರೂಪಿಸಿರುವ ಪಿಂಚಣಿ ಯೋಜನೆಯಾಗಿದೆ.
ಕೇಂದ್ರ ಸರ್ಕಾರ ಜನವರಿ 24, ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ಅದರ ಪ್ರಕಾರ 2025ರ ಏಪ್ರಿಲ್ 1ರಿಂದ ಯೂನಿಫೈಡ್ ಪೆನ್ಷನ್ ಸ್ಕೀಮ್ ಜಾರಿಗೆ ಬರಲಿದೆ. ನ್ಯಾಷನಲ್ ಪೆನ್ಷನ್ ಸಿಸ್ಟಂಗೆ ಜೋಡಿತವಾಗಿರುವ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಯುಪಿಎಸ್ ಅನ್ವಯ ಆಗುತ್ತದೆ.
ಪಿಂಚಣಿಗೆ ಅರ್ಹರಾಗಬೇಕಾದರೆ ಸರ್ಕಾರಿ ನೌಕರಿಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕು. ಕನಿಷ್ಠ ಪಿಂಚಣಿ 10,000 ರೂ ಸಿಗುತ್ತದೆ. 25 ಹಾಗೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಬಳಿಕ ನೌಕರರು ನಿವೃತ್ತರಾದಾಗ, ಅವರು ಹಿಂದಿನ 12 ತಿಂಗಳ ಸರಾಸರಿ ಮೂಲವೇತನದ ಶೇ. 50ರಷ್ಟು ಹಣವನ್ನು ಪಿಂಚಣಿಯಾಗಿ ಪಡೆಯಲಿದ್ದಾರೆ.
ಇದನ್ನೂ ಓದಿ: ಬಜೆಟ್ಗೆ ದಿನಗಣನೆ; ನಿರ್ಮಲಾ ಸೀತಾರಾಮನ್ರಿಂದ ಹಲ್ವಾ ಕಾರ್ಯಕ್ರಮ; ಏನಿದರ ವಿಶೇಷತೆ?
25 ವರ್ಷಕ್ಕಿಂತ ಕಡಿಮೆ ಅವಧಿ ಸೇವೆ ಸಲ್ಲಿಸಿದರೆ ಅವರ ಸೇವಾವಧಿಗೆ ಅನುಗುಣವಾಗಿ ಪಿಂಚಣಿ ನಿರ್ಧರಿಸಲಾಗುತ್ತದೆ. 25 ವರ್ಷ ಸೇವೆ ಸಲ್ಲಿಸಿ ಬಳಿಕ ವಾಲಂಟರಿ ರಿಟೈರ್ಮೆಂಟ್ ಪಡೆದಿದ್ದರೆ, ಅವರ ಪೂರ್ಣಾವಧಿ ವರ್ಷದ ಬಳಿಕವಷ್ಟೇ ಪಿಂಚಣಿ ನೀಡುವಿಕೆ ಆರಂಭವಾಗುತ್ತದೆ.
ಒಂದು ವೇಳೆ ಪಿಂಚಣಿದಾರ ಮೃತ್ತಪಟ್ಟರೆ, ಆಗ ಸಿಗುತ್ತಿದ್ದ ಪಿಂಚಣಿ ಮೊತ್ತದಲ್ಲಿ ಶೇ. 60ರಷ್ಟನ್ನು ಮೃತರ ಸಂಗಾತಿಗೆ ಪಿಂಚಣಿಯಾಗಿ ನೀಡಲಾಗುತ್ತದೆ.
ಸರ್ಕಾರಿ ಸೇವೆಯಲ್ಲಿದ್ದಾಕ್ಷಣ ಅವರು ಪಿಂಚಣಿಗೆ ಅರ್ಹರಾಗುತ್ತಾರೆ ಎನ್ನುವುದು ಖಾತ್ರಿ ಇಲ್ಲ. ಪಿಂಚಣಿಗೆ ಅರ್ಹರಾಗಲು ಕೆಲ ನಿಯಮಗಳಿವೆ.
ಇದನ್ನೂ ಓದಿ: ಚೆಕ್ ಮೇಲೆ ಕಪ್ಪು ಇಂಕ್ನಲ್ಲಿ ಸಹಿ ಮಾಡಬಾರದಾ? ಆರ್ಬಿಐ ಮಾರ್ಗಸೂಚಿ ಏನು ಹೇಳುತ್ತೆ? ಇಲ್ಲಿದೆ ಮಾಹಿತಿ
ಮೊದಲನೆಯದು, ಉದ್ಯೋಗಿಗಳು ಕನಿಷ್ಠ 10 ವರ್ಷ ಅಧಿಕೃತವಾಗಿ ಸೇವೆ ಸಲ್ಲಿಸಿರಬೇಕು. ಎರಡನೆಯದೆಂದರೆ, ಯಾವುದೇ ದಂಡ ಇಲ್ಲದೇ, ಸರ್ಕಾರಿ ನಿಯಮಗಳ ಅನುಸಾರ ನಿವೃತ್ತರಾಗಿರಬೇಕು. ಮೂರನೆಯ ನಿಯಮ ಎಂದರೆ, ಸೇವೆಗೆ ರಾಜೀನಾಮೆ ನೀಡಿದವರು, ಅಥವಾ ಕೆಲಸದಿಂದ ವಜಾಗೊಂಡವರು ಯುಪಿಎಸ್ ಸ್ಕೀಮ್ ಅಡಿ ಪಿಂಚಣಿ ಪಡೆಯಲು ಅರ್ಹರಾಗಿರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ