Halwa Ceremony: ಕಳೆದ ಬಾರಿ ಕೈಬಿಟ್ಟಿದ್ದ ‘ಹಲ್ವಾ’ ಈ ಬಾರಿ ವಿತರಣೆಯಾಗುತ್ತಾ? ಏನಿದು ಬಜೆಟ್ ಹಲ್ವಾ ಸಮಾರಂಭ?

| Updated By: Ganapathi Sharma

Updated on: Jan 10, 2023 | 4:45 PM

ಬಜೆಟ್ ಅನ್ನು ಬಹುತೇಕ ಅಂತಿಮ ರೂಪಿಗೆ ಕೊಂಡೊಯ್ಯಲಾಗುತ್ತಿರುವ ಖುಷಿಯನ್ನು ಹೀಗೆ ಸಿಹಿ ತಿನಿಸುವ ಮೂಲಕ ಹಂಚಿಕೊಳ್ಳಲಾಗುತ್ತದೆ. ಭಾರತದಲ್ಲಿ ಶುಭ ಕಾರ್ಯ ನಡೆದಾಗ ಮತ್ತು ನಡೆಯುವ ಮುನ್ನ ಬಾಯಿ ಸಿಹಿ ಮಾಡುವ ಮೂಲಕ ಸಂಭ್ರಮಿಸುವ ಸಂಪ್ರದಾಯದ ದ್ಯೋತಕವಾಗಿ ಬಜೆಟ್ ವೇಳೆ ಹಲ್ವಾ ಕಾರ್ಯಕ್ರಮ ನಡೆಯುತ್ತದೆ.

Halwa Ceremony: ಕಳೆದ ಬಾರಿ ಕೈಬಿಟ್ಟಿದ್ದ ‘ಹಲ್ವಾ ಈ ಬಾರಿ ವಿತರಣೆಯಾಗುತ್ತಾ? ಏನಿದು ಬಜೆಟ್ ಹಲ್ವಾ ಸಮಾರಂಭ?
ಹಲ್ವಾ ಸಮಾರಂಭದ ಸಂಗ್ರಹ ಚಿತ್ರ
Image Credit source: PTI
Follow us on

ಕೇಂದ್ರೀಯ ಬಜೆಟ್ (Union Budget) ಹಲವು ಕಾರಣಗಳಿಗೆ ಜನಸಾಮಾನ್ಯರನ್ನೂ ಸೇರಿದಂತೆ ಹಲವರನ್ನು ಆಕರ್ಷಿಸುತ್ತದೆ. ಬಜೆಟ್ ಸುತ್ತ ಕೆಲ ಆಚರಣೆಗಳು ಮತ್ತು ಸಂಪ್ರದಾಯಗಳು ಒಂದಷ್ಟು ಅಚ್ಚರಿ ಮೂಡಿಸುತ್ತವೆ. ಅದರಲ್ಲಿ ಹಲ್ವಾ ಕಾರ್ಯಕ್ರಮವೂ ಒಂದು. ಬಜೆಟ್ ತಯಾರಿಕೆಯ ಕೊನೆಯ ಹಂತದ ಕಾರ್ಯಗಳಿಗೆ ಹಲ್ವಾ ಕಾರ್ಯಕ್ರಮ ನಾಂದಿ (Halwa Ceremony) ಹಾಡುತ್ತದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಸಚಿವಾಲಯ ಕಟ್ಟಡದ ನಾರ್ಥ್ ಬ್ಲಾಕ್ ಭಾಗದಲ್ಲಿ ಹಣಕಾಸು ಸಚಿವಾಲಯದ ಮುಖ್ಯಕಚೇರಿ ಇದ್ದು ಬೇಸ್ಮೆಂಟ್ (ನೆಲ ಮಾಳಿಗೆ) ನಲ್ಲಿ ಹಲ್ವಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಬಜೆಟ್ ತಯಾರಿಕೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡ ಸಿಬ್ಬಂದಿ ವರ್ಗಕ್ಕೆ ಹಣಕಾಸು ಸಚಿವರು ಹಲ್ವಾ ಹಂಚುವುದು ಈ ಕಾರ್ಯಕ್ರಮದ ಮುಖ್ಯಾಂಶ. ಬಜೆಟ್ ಅನ್ನು ಬಹುತೇಕ ಅಂತಿಮ ರೂಪಿಗೆ ಕೊಂಡೊಯ್ಯಲಾಗುತ್ತಿರುವ ಖುಷಿಯನ್ನು ಹೀಗೆ ಸಿಹಿ ತಿನಿಸುವ ಮೂಲಕ ಹಂಚಿಕೊಳ್ಳಲಾಗುತ್ತದೆ. ಭಾರತದಲ್ಲಿ ಶುಭ ಕಾರ್ಯ ನಡೆದಾಗ ಮತ್ತು ನಡೆಯುವ ಮುನ್ನ ಬಾಯಿ ಸಿಹಿ ಮಾಡುವ ಮೂಲಕ ಸಂಭ್ರಮಿಸುವ ಸಂಪ್ರದಾಯದ ದ್ಯೋತಕವಾಗಿ ಬಜೆಟ್ ವೇಳೆ ಹಲ್ವಾ ಕಾರ್ಯಕ್ರಮ ನಡೆಯುತ್ತದೆ.

2021ರಲ್ಲಿ ಸಿಗದ ಹಲ್ವಾ

ಕಳೆದ ವರ್ಷ ಕೋವಿಡ್​ನಿಂದ ಇಡೀ ದೇಶವೇ ಜರ್ಝರಿತ ಸ್ಥಿತಿಯಲ್ಲಿತ್ತು. ಹೀಗಾಗಿ, ಹಲ್ವಾ ಕಾರ್ಯಕ್ರಮವನ್ನು ಮೊದಲ ಬಾರಿಗೆ ಕೈಬಿಡಲಾಗಿತ್ತು. ಆದರೆ ಬಜೆಟ್ ಮುಖ್ಯ ಕೆಲಸಗಳಲ್ಲಿ ತೊಡಗಿದ ಸಿಬ್ಬಂದಿಗೆ ಆಗ ಸಿಹಿ ಹಂಚಿಕೆ ಮಾತ್ರ ಮಾಡಲಾಗಿತ್ತು. ಈ ಬಾರಿ ದೇಶಕ್ಕೆ ಅಂಥ ಕೋವಿಡ್ ಭಯ ಕಾಣುತ್ತಿಲ್ಲ. ಹೊಸ ಕೋವಿಡ್ ಅಲೆ ದೊಡ್ಡ ಮಟ್ಟಕ್ಕೆ ಏರುವ ಸಾಧ್ಯತೆ ಇಲ್ಲ. ಹೀಗಾಗಿ, ಇದೇ ಫೆಬ್ರವರಿ 1ರಂದು ಮಂಡನೆಯಾಗಲಿರುವ ಬಜೆಟ್​​ನಲ್ಲಿ ‘ಹಲ್ವಾ ಕಾರ್ಯಕ್ರಮ’ ಮತ್ತೆ ಚಾಲನೆಗೆ ಬಂದರೂ ಬರಬಹುದು.

ಲಾಕ್ ಆಗುವ ಸಿಬ್ಬಂದಿ

ಬಜೆಟ್ ತಯಾರಿಕೆ ವೇಳೆ ಎಲ್ಲಾ ಇಲಾಖೆಗಳು, ವಿವಿಧ ಸರ್ಕಾರಿ ಸಂಸ್ಥೆಗಳಿಂದ ಸಲಹೆ ಸಮಾಲೋಚನೆಗಳನ್ನು ಪಡೆಯಲಾಗುತ್ತದೆ. ಅಂತಿಮವಾಗಿ ಬಜೆಟ್ ನಲ್ಲಿ ಯಾವ್ಯಾವುದಕ್ಕೆ ಎಷ್ಟೆಷ್ಟು ಹಂಚಿಕೆ ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳುವುದು ಹಣಕಾಸು ಸಚಿವರೇ. ಹೀಗಾಗಿ, ಬಜೆಟ್ ಮಂಡನೆಯಾಗುವವರೆಗೂ ಸರ್ಕಾರದ ಬೇರೆ ಸಚಿವರಿಗೂ ಪೂರ್ಣ ಮಾಹಿತಿ ಇರುವುದಿಲ್ಲ.

ಬಜೆಟ್ ತಯಾರಿಕೆಯಲ್ಲಿ ತೊಡಗುವ ಸಿಬ್ಬಂದಿ ಬಜೆಟ್ ಮಂಡನೆ ಆಗುವವರೆಗೂ ಲಾಕ್ ಇನ್ ಆಗಿರುತ್ತಾರೆ. ಅಂದರೆ ಬಾಹ್ಯ ಸಂಪರ್ಕ ಕಡಿದುಹೋಗುತ್ತದೆ. ಬಜೆಟ್ ರಹಸ್ಯವನ್ನು ಕೊನೆಯವರೆಗೂ ಕಾಯ್ದುಕೊಳ್ಳಲು ಈ ವ್ಯವಸ್ಥೆ ಮಾಡಲಾಗುತ್ತದೆ.

ಬಜೆಟ್ ತಯಾರಿಕೆಯಲ್ಲಿ ಇವರನ್ನು ಉತ್ತೇಜಿಸಲು ಹಲ್ವಾ ಕಾರ್ಯಕ್ರಮವನ್ನು ಅವರಿದ್ದ ಸ್ಥಳದಲ್ಲೇ ಏರ್ಪಡಿಸಲಾಗುತ್ತದೆ. ಒಂದು ದೊಡ್ಡ ಕಡಾಯಿಯಲ್ಲಿ (ಅಡುಗೆ ಮಾಡಲು ಬಳಸುವ ದೊಡ್ಡ ಪಾತ್ರೆ) ಹಲ್ವಾ ತಯಾರಿಸಲಾಗುತ್ತದೆ. ಹಣಕಾಸು ಸಚಿವರು ಅಲ್ಲಿಗೆ ಬಂದು ಕಡಾಯಿಯಲ್ಲಿರುವ ಹಲ್ವಾ ಹೂರಣವನ್ನು ಸೌಟಿನಿಂದ ತಿರುಗಿಸುತ್ತಾರೆ. ಬಳಿಕ ಆ ಸಿಹಿಯನ್ನು ಅಲ್ಲಿನ ಎಲ್ಲಾ ಸಿಬ್ಬಂದಿಗೂ ಹಂಚುತ್ತಾರೆ.

ಇದನ್ನೂ ಓದಿ: Budget 2023: ಸ್ವಂತ ಸೂರಿನ ಆಸೆಗೆ ನೀರೆರೆಯುತ್ತಾ ಈ ಬಾರಿಯ ಬಜೆಟ್?

ಇದು ಸಾಮಾನ್ಯವಾಗಿ ಬಜೆಟ್ ಮಂಡನೆಗೆ 10 ದಿನ ಮುಂಚೆ ನಡೆಯುವ ಕಾರ್ಯಕ್ರಮ. ಇದಾದ ಬಳಿಕ ಸಿಬ್ಬಂದಿ ಸಂಪೂರ್ಣವಾಗಿ ಲಾಕ್ ಇನ್ ಆಗಿ ಬಜೆಟ್ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಣಕಾಸು ಸಚಿವರು ಹಾಗು ಇಲಾಖೆಯ ಕೆಲ ಹಿರಿಯ ಅಧಿಕಾರಿಗಳನ್ನು ಬಿಟ್ಟರೆ ಬೇರಾರೂ ಕೂಡ ಆ ಕಟ್ಟಡದಿಂದ ಹೊರಗೆ ಹೋಗಲು ಅವಕಾಶ ಇರುವುದಿಲ್ಲ. ತಮ್ಮ ಮನೆಯವರ ಸಂಪರ್ಕದಿಂದಲೂ ಕಡಿತಗೊಂಡಿರುತ್ತಾರೆ. ಅಷ್ಟರ ಮಟ್ಟಿಗೆ ರಹಸ್ಯತನ ಕಾಪಾಡಿಕೊಳ್ಳಲಾಗುತ್ತದೆ.

ಯಾವಾಗಿನಿಂದ ಈ ಸಂಪ್ರದಾಯ?

ಬಜೆಟ್ ಸಂದರ್ಭದಲ್ಲಿ ನಡೆಯುವ ಹಲ್ವಾ ಕಾರ್ಯಕ್ರಮ ಬಹಳ ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಆದರೆ, ಯಾವಾಗ ಈ ಸಂಪ್ರದಾಯ ಮೊದಲಿಗೆ ಅಡಿ ಇಟ್ಟಿತು ಎಂಬುದು ಗೊತ್ತಿಲ್ಲ. ದಶಕಗಳಿಂದಲೂ ಇದು ಆಚರಣೆಯಲ್ಲಿದೆ. ಕೋವಿಡ್ ಕಾರಣಕ್ಕೆ ಕಳೆದ ವರ್ಷ ಮೊದಲ ಬಾರಿಗೆ ಈ ಸಂಪ್ರದಾಯದ ಪಾಲನೆಯಾಗಲಿಲ್ಲ. ಈ ವರ್ಷ ಪುನಾರಂಭಗೊಳ್ಳಬಹುದು.

ಬಜೆಟ್ ಸಿದ್ಧತೆ ಹೇಗೆ?

ಬಜೆಟ್ ಸಿದ್ಧತೆ ಎಂಬುದು ತಿಂಗಳುಗಟ್ಟಲೆ ನಡೆಯುವ ಶ್ರಮಭರಿತ ಪ್ರಕ್ರಿಯೆ. ನೀತಿ ಆಯೋಗ್ ಹಾಗೂ ಸರ್ಕಾರದ ಎಲ್ಲಾ ಸಚಿವಾಲಯಗಳೊಂದಿಗೆ ಹಣಕಾಸು ಸಚಿವಾಲಯ ಸಮಾಲೋಚನೆ ನಡೆಸುತ್ತದೆ. ಬಜೆಟ್ ತಯಾರಿಕೆಯಲ್ಲಿ ತೊಡಗುವ ಮುನ್ನ ರಾಜ್ಯ ಸರ್ಕಾರಗಳು, ವಿವಿಧ ಉದ್ಯಮ, ವಲಯಗಳ ಪ್ರತಿನಿಧಿಗಳೊಂದಿಗೆ ಹಣಕಾಸು ಸಚಿವರು ಪೂರ್ವಭಾವಿ ಸಭೆಗಳನ್ನು ನಡೆಸಿ ಅಹವಾಲುಗಳನ್ನು ಸ್ವೀಕರಿಸುತ್ತಾರೆ. ಈ ಪ್ರಕ್ರಿಯೆ 2-3 ತಿಂಗಳ ಹಿಂದಿನಿಂದಲೇ ನಡೆಯುತ್ತದೆ.

ಇದನ್ನೂ ಓದಿ: Budget Terms: ಬಜೆಟ್ ಪದಗಳು; ಜಿಡಿಪಿ, ಹಣದುಬ್ಬರ, ಕ್ಯಾಪಿಟಲ್ ರಿಸಿಪ್ಟ್ ಇತ್ಯಾದಿ ಪದಗಳ ಬಗ್ಗೆ ತಿಳಿಯಿರಿ

ಹಿಂದಿನ ಬಜೆಟ್​ನಲ್ಲಿ ವಿವಿಧ ಸಚಿವಾಲಯಗಳಿಗೆ ನೀಡಿದ ಹಂಚಿಕೆಯಲ್ಲಿ ಎಷ್ಟು ಬಳಕೆಯಾಗಿದೆ, ಎಷ್ಟು ಪರಿಣಾಮ ಬೀರಿದೆ, ಈ ವರ್ಷ ಎಷ್ಟು ಅನುದಾನದ ಅವಶ್ಯತೆ ಇದೆ ಇವೆಲ್ಲವನ್ನೂ ಅಮೂಲಾಗ್ರವಾಗಿ ಪರಿಶೀಲಿಸಲಾಗುತ್ತದೆ. ಬಳಿಕ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ ಬಜೆಟ್ ಕೊರತೆ ನೀಗಿಸಲು ಬೇಕಾದ ಹೆಚ್ಚುವರಿ ಹಣ ಎಷ್ಟು ಎಂಬಿತ್ಯಾದಿ ಅಂಶಗಳನ್ನು ನಿರ್ಧರಿಸಲಾಗುತ್ತದೆ. ಬಳಿಕ ಈ ಬಾರಿಯ ಬಜೆಟ್ ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನದ ಹಂಚಿಕೆ ಆಗಬೇಕು ಎಂಬುದನ್ನೂ ನಿರ್ಧರಿಸಲಾಗುತ್ತದೆ.

ವಿತ್ತಸಚಿವರೇ ಬಜೆಟ್ ಮಂಡನೆ ಮಾಡಬೇಕೆಂದಿಲ್ಲ

ಇನ್ನು, ಹಣಕಾಸು ಖಾತೆಯನ್ನು ಹೊಂದಿರುವ ಸಚಿವರೇ ಬಜೆಟ್ ಮಂಡನೆ ಮಾಡುವುದುಂಟು. ಆದರೆ, ಅವರೇ ಬಜೆಟ್ ಮಂಡಿಸಬೇಕೆಂಬ ನಿಯಮ ಇಲ್ಲ. ಹಣಕಾಸು ಸಚಿವರಿಗೆ ಅನಾರೋಗ್ಯವೋ ಮತ್ತೊಂದೋ ಕಾರಣವಿದ್ದಲ್ಲಿ ಬೇರೆಯವರು ಬಜೆಟ್ ಮಂಡನೆ ಮಾಡಬಹುದು. ಬಜೆಟ್ ಮಂಡನೆ ಎಂದರೆ ಬಜೆಟ್ ಪುಸ್ತಕವನ್ನು ಸಂಸತ್​ನಲ್ಲಿ ಓದುವುದಷ್ಟೇ ಆಗಿರುವುದರಿಂದ ಸರ್ಕಾರದ ಯಾವ ಸಚಿವ ಬೇಕಾದರೂ ಅದನ್ನು ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ