Budget Terms: ಬಜೆಟ್ ಪದಗಳು; ಜಿಡಿಪಿ, ಹಣದುಬ್ಬರ, ಕ್ಯಾಪಿಟಲ್ ರಿಸಿಪ್ಟ್ ಇತ್ಯಾದಿ ಪದಗಳ ಬಗ್ಗೆ ತಿಳಿಯಿರಿ
ವರ್ಷಕ್ಕೆ ಎರಡು ಬಜೆಟ್ ನಾವು ನೋಡುತ್ತೇವೆ. ರಾಜ್ಯದ್ದು ಒಂದು, ಕೇಂದ್ರದ್ದು ಇನ್ನೊಂದು. ಸಾಮಾನ್ಯವಾಗಿ ಹಣಕಾಸು ಖಾತೆಯನ್ನು ಹೊಂದಿದವರು ಬಜೆಟ್ ಮಂಡಿಸುತ್ತಾರೆ. ಬಜೆಟ್ ವೇಳೆ ನಾವು ಹಲವು ರೀತಿಯ ಆರ್ಥಿಕತೆಯ ಪದಪುಂಜಗಳ ಬಳಕೆಯಾಗುವುದನ್ನು ಕೇಳಿರುತ್ತೇವೆ. ಅಂಥ ಕೆಲ ಪ್ರಮುಖ ಪದಗಳ ವಿವರಣೆ ಇಲ್ಲಿದೆ.
ಬಜೆಟ್ ಅಥವಾ ಆಯವ್ಯಯ ಪತ್ರ (Budget 2023) ಮಂಡನೆಯಾಗುವ ದಿನ ಚುನಾವಣಾ ಫಲಿತಾಂಶ ಪ್ರಕಟದ ದಿನದ ಕುತೂಹಲದೊಂದಿಗೆ ಕೂತಿರುತ್ತೇವೆ. ಇದೇ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಇದ್ದು, ಈಗಾಗಲೇ ವಿವಿಧ ಕ್ಷೇತ್ರವಾರು ನಿರೀಕ್ಷೆಗಳು, ಅವಲೋಕನೆಗಳು, ಸಮೀಕ್ಷೆಗಳು ನಡೆಯುತ್ತಿವೆ. ವಿವಿಧ ಸರ್ಕಾರಗಳು ಪ್ರತೀ ವರ್ಷವೂ ಬಜೆಟ್ ಮಂಡಿಸುತ್ತವೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಪ್ರತ್ಯೇಕವಾಗಿ ಬಜೆಟ್ ಮಂಡಿಸುತ್ತವೆ. ವರ್ಷಕ್ಕೆ ಎರಡು ಬಜೆಟ್ ನಾವು ನೋಡುತ್ತೇವೆ. ರಾಜ್ಯದ್ದು ಒಂದು, ಕೇಂದ್ರದ್ದು ಇನ್ನೊಂದು. ಸಾಮಾನ್ಯವಾಗಿ ಹಣಕಾಸು ಖಾತೆಯನ್ನು ಹೊಂದಿದವರು ಬಜೆಟ್ ಮಂಡಿಸುತ್ತಾರೆ. ಬಜೆಟ್ ವೇಳೆ ನಾವು ಹಲವು ರೀತಿಯ ಆರ್ಥಿಕತೆಯ ಪದಪುಂಜಗಳ ಬಳಕೆಯಾಗುವುದನ್ನು ಕೇಳಿರುತ್ತೇವೆ. ಅಂಥ ಕೆಲ ಪ್ರಮುಖ ಪದಗಳ ವಿವರಣೆ ಇಲ್ಲಿದೆ.
ಬಜೆಟ್ ಎಂದರೇನು?
ಬಜೆಟ್ ಎಂದರೆ ಆಯವ್ಯಯ ಪತ್ರ. ಹೆಸರೇ ಹೇಳುವಂತೆ ಆಯ ಎಂದರೆ ಆದಾಯ, ವ್ಯಯ ಎಂದರೆ ಖರ್ಚು. ಇದು ಆದಾಯ ಮತ್ತು ಖರ್ಚಿನ ಲೆಕ್ಕಾಚಾರ. ಸರ್ಕಾರದ ಬಳಿ ಯಾವ್ಯಾವ ಕಡೆಯಿಂದ ಆದಾಯ ಇದೆ. ಅಷ್ಟು ಹಣವನ್ನು ಯಾವ್ಯಾವುದಕ್ಕೆ ಖರ್ಚು ಮಾಡುತ್ತದೆ ಎಂಬುದನ್ನು ಬಜೆಟ್ ನಲ್ಲಿ ಸರ್ಕಾರ ತಿಳಿಸುತ್ತದೆ. ಆದಾಯ ಸೃಷ್ಟಿಗೆ ಏನೇನು ಕ್ರಮ ಕೈಗೊಳ್ಳುತ್ತದೆ, ವೆಚ್ಚ ಸರಿದೂಗಿಸಲು ಎಷ್ಟೆಷ್ಟು ಸಾಲ ಮಾಡಲಾಗುತ್ತದೆ ಮುಂತಾದ ಎಲ್ಲಾ ವಿವರನ್ನು ಇದರಲ್ಲಿ ನೀಡಲಾಗುತ್ತದೆ.
ವೆಚ್ಚದ ವಿಚಾರಕ್ಕೆ ಬಂದರೆ ಯಾವೆಲ್ಲಾ ಇಲಾಖೆಗಳಿಗೆ ಎಷ್ಟೆಷ್ಟು ಹಣ ವಿತರಣೆ ಆಗುತ್ತದೆ, ಯಾವ್ಯಾವ ಯೋಜನೆಗಳಿಗೆ ಎಷ್ಟು ಹಣ ಬಿಡುಗಡೆ ಆಗುತ್ತದೆ ಇವುಗಳನ್ನು ಸ್ಪಷ್ಟವಾಗಿ ತಿಳಿಸಲಾಗುತ್ತದೆ. ಕೆಲ ಹಳೆಯ ಯೋಜನೆಗಳನ್ನು ಕೈಬಿಡಬಹುದು, ಹೊಸ ಯೋಜನೆಗಳ ಘೋಷಣೆ ಆಗಬಹುದು.
ಜಿಡಿಪಿ ಎಂದರೇನು?
ಜಿಡಿಪಿ ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್. ಅಂದರೆ ಒಟ್ಟು ಆಂತರಿಕ ಉತ್ಪನ್ನ ಎನ್ನಬಹುದು. ನಿರ್ದಿಷ್ಟ ಅವಧಿಯಲ್ಲಿ ದೇಶದ ಒಳಗೆ ಬಳಕೆಯಾಗುವ ಸರಕು ಮತ್ತು ಸೇವೆಗಳ ಅಂತಿಮ ಹಣಕಾಸು ಮೌಲ್ಯವೇ ಜಿಡಿಪಿ ಆಗುತ್ತದೆ. ಇದರಲ್ಲಿ ಸರ್ಕಾರ ಬಿಡುಗಡೆ ಮಾಡುವ ಮತ್ತು ಮಾರುಕಟ್ಟೆಯಲ್ಲಿ ಮಾರಾಟವಾಗದ ರಕ್ಷಣಾ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳೂ ಒಳಗೊಂಡಿರುತ್ತವೆ.
ಆದರೆ, ಗೃಹ ಕಾರ್ಯಗಳು, ಅಂದರೆ ಮನೆಯಲ್ಲಿ ಗೃಹಿಣಿಯರು ಮಾಡುವ ಕೆಲಸದ ಮೌಲ್ಯವಾಗಲೀ, ಅಥವಾ ಕಾಳಸಂತೆ ಚಟುವಟಿಕೆಗಳಾಗಲೀ ಜಿಡಿಪಿಯ ಗಣನೆಗೆ ಬರುವುದಿಲ್ಲ.
ಇದನ್ನು ಓದಿ: Amazon employees layoff : ಅಮೆಜಾನ್ 8,000 ಉದ್ಯೋಗಿಗಳು ವಜಾ, ಕಾರಣ ಇಲ್ಲಿದೆ ನೋಡಿ
ಇಲ್ಲಿ ನಾಮಿನಲ್ ಜಿಡಿಪಿ ಮತ್ತು ರಿಯಲ್ ಜಿಡಿಪಿ ಎಂದು ಎರಡು ರೀತಿಯ ವರ್ಗೀಕರಣ ಮಾಡಬಹುದು. ನಾಮಿನಲ್ ಜಿಡಿಪಿ ಎಂದರೆ ಜಿಡಿಪಿಯ ಒಟ್ಟು ಮೌಲ್ಯವನ್ನು ಈಗಿನ ಕರೆನ್ಸಿ ಲೆಕ್ಕದಲ್ಲಿ ಅಳೆಯಲಾಗುತ್ತದೆ. ರಿಯಲ್ ಜಿಡಿಪಿಯಲ್ಲಿ ಹಣದುಬ್ಬರ ಅಥವಾ ಹಣಸಂಕುಚಿತತೆಯ ವ್ಯತ್ಯಾಸವನ್ನು ನೀಗಿಸಲಾಗುತ್ತದೆ. ಹೀಗಾಗಿ, ರಿಯಲ್ ಜಿಡಿಪಿಯಲ್ಲಿ ನಮ್ಮ ಆರ್ಥಿಕತೆಯ ನಿಜ ಸ್ಥಿತಿ ಹೆಚ್ಚು ಸ್ಪಷ್ಟವಾಗಿ ಗೋಚರವಾಗುತ್ತದೆ.
ಇನ್ನು, ಜಿಎನ್ಪಿ ಎಂಬ ಇನ್ನೊಂದು ವರ್ಗೀಕರಣವೂ ಉಂಟು. ಜಿಎn್ಪಿ ಎಂದರೆ ಗ್ರಾಸ್ ನ್ಯಾಷನಲ್ ಪ್ರಾಡಕ್ಟ್. ಇದರಲ್ಲಿ ಜಿಡಿಪಿ ಜೊತೆಗೆ ನಮ್ಮ ದೇಶವಾಸಿಗಳು ವಿದೇಶಗಳಲ್ಲಿ ಮಾಡಿದ ಹೂಡಿಕೆಗಳಿಂದ ಬಂದ ನಿವ್ವಳ ಆದಾಯವೂ ಸೇರಿರುತ್ತದೆ.
ಕಂಟಿಂಜೆನ್ಸಿ ಫಂಡ್
ಕಂಟಿಂಜೆನ್ಸಿ ಫಂಡ್ ಎಂದರೆ ಸಾದಿಲ್ವಾರು ನಿಧಿ ಎಂದು ಕನ್ನಡದಲ್ಲಿ ಹೇಳುತ್ತಾರೆ. ಭವಿಷ್ಯದಲ್ಲಿ ಎದುರಾಗಬಹುದಾದ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಇರಿಸುವ ಮೀಸಲು ನಿಧಿಯೇ ಕಂಟಿಂಜೆನ್ಸಿ ಫಂಡ್. ಸದ್ಯ ಕೇಂದ್ರ ಸರ್ಕಾರ ಇಂಥ ತುರ್ತು ನಿಧಿಯಲ್ಲಿ 30 ಸಾವಿರ ಕೋಟಿ ರೂ ಇರಿಸಿದೆ.
ಕ್ಯಾಪಿಟಲ್ ಮತ್ತು ರೆವೆನ್ಯೂ ರಿಸಿಪ್ಟ್
ಕ್ಯಾಪಿಟಲ್ ರಿಸಿಪ್ಟ್ ಎಂಬುದು ಬಂಡವಾಳ ಜಮೆ. ಅಂದರೆ ಮಾರುಕಟ್ಟೆಯಿಂದ ಕಲೆಹಾಕಿದ ಹಣ, ಸಾಲ ಇತ್ಯಾದಿಯನ್ನು ಒಳಗೊಂಡಿರಲಾಗುತ್ತದೆ. ಬಂಡವಾಳ ಹಿಂತೆಗೆತ, ಸರ್ಕಾರಿ ಆಸ್ತಿಗಳ ಮಾರಾಟ, ಸರ್ಕಾರದಿಂದ ನೀಡಿದ ಸಾಲದ ವಸೂಲಾತಿ ಇತ್ಯಾದಿ ಮೊತ್ತವೂ ಕ್ಯಾಪಿಟಲ್ ರಿಸಿಪ್ಟ್ ನಲ್ಲಿ ಒಳಗೊಳ್ಳಲಾಗುತ್ತದೆ.
ಇದನ್ನು ಓದಿ: Fact Check: ಪೆನ್ನಿನಲ್ಲಿ ಗೀಚಿದ, ತಿದ್ದಿದ ನೋಟು ಚಲಾವಣೆ ಆಗುತ್ತಾ? ಸರ್ಕಾರದ ಸ್ಪಷ್ಟನೆ ಇಲ್ಲಿದೆ
ಇನ್ನು ರೆವೆನ್ಯೂ ರಿಸಿಪ್ಟ್ ಎಂಬುದು ರಾಜಸ್ವ ಜಮೆ. ಇದರಲ್ಲಿ ಹೆಚ್ಚಾಗಿ ತೆರಿಗೆಗಳಿಂದ ಬರುವ ಆದಾಯವೇ ಆಗಿರುತ್ತದೆ. ಸರ್ಕಾರ ಮಾಡಿದ ಹೂಡಿಕೆಗಳಿಂದ ಸಿಗುವ ಬಡ್ಡಿ ಮತ್ತು ಲಾಭಾಂಶ ಇತ್ಯಾದಿ ತೆರಿಗೇತರ ಆದಾಯವೂ ರೆವೆನ್ಯೂ ರಿಸಿಪ್ಟ್ ನಲ್ಲಿ ಸೇರಿಸಲಾಗುತ್ತದೆ. ಹಾಗೆಯೇ, ವಿವಿಧ ಸೇವೆಗಳಿಗೆ ಸರ್ಕಾರ ನಿಗದಿ ಮಾಡುವ ಶುಲ್ಕಗಳಿಂದ ಬರುವ ಹಣವೂ ರಾಜಸ್ವ ನಿಧಿಗೆ ಹೋಗುತ್ತದೆ.
ಫಿಸ್ಕಲ್ ಡೆಫಿಸಿಟ್
ಇದು ವಿತ್ತೀಯ ಕೊರತೆ. ಬಹಳ ಸರಳವಾಗಿ ಹೇಳುವುದಾದರೆ ವಿತ್ತೀಯ ಕೊರತೆ ಎಂದರೆ ಸರ್ಕಾರದ ಆದಾಯ ಮತ್ತು ವೆಚ್ಚದ ನಡುವೆ ಇರುವ ಅಂತರ. ಅಂದರೆ ಆದಾಯಕ್ಕಿಂತ ವೆಚ್ಚ ಹೆಚ್ಚಾದಷ್ಟೂ ವಿತ್ತೀಯ ಕೊರತೆ ಹೆಚ್ಚಾಗುತ್ತದೆ. ಆರ್ಥಿಕ ಶಿಸ್ತು ಸಾಧಿಸಬೇಕಾದರೆ ವಿತ್ತೀಯ ಕೊರತೆ ಶೂನ್ಯದಲ್ಲಿರಬೇಕು.
ಹಣದುಬ್ಬರ
ಇನ್ಫ್ಲೇಷನ್ ಅಥವಾ ಹಣದುಬ್ಬರ ಎಂದರೆ ನಿರ್ದಿಷ್ಟ ಅವಧಿಯಲ್ಲಿ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಾಸ ಆಗಿರುವುದು. ಈಗ ಒಂದು ವಸ್ತುವಿನ ಬೆಲೆ ಇವತ್ತಿಗೆ ಇಂತಿಷ್ಟು ಇದೆ ಎಂದಿಟ್ಟುಕೊಳ್ಳಿ. ಕಳೆದ ವರ್ಷ ಇದೇ ದಿನದಲ್ಲಿ ಆ ವಸ್ತುವಿನ ಬೆಲೆ ಎಷ್ಟಿತ್ತು, ಈಗ ಅದರ ಬೆಲೆ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬುದನ್ನು ಲೆಕ್ಕ ಮಾಡಿ ಹಣದುಬ್ಬರ ಅಳೆಯಲಾಗುತ್ತದೆ. ಎಲ್ಲಾ ವಸ್ತು ಮತ್ತು ಸೇವೆಗಳ ಮೌಲ್ಯವನ್ನು ಇದೇ ರೀತಿ ಅಳತೆ ಮಾಡಿ ಸರಾಸರಿಯಾಗಿ ಹಣದುಬ್ಬರ ಎಷ್ಟೆಂದು ಗಣಿಸಲಾಗುತ್ತದೆ. ಸದ್ಯ ಭಾರತದಲ್ಲಿ ಹಣದುಬ್ಬರ ಶೇ. 5.88 ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಹಣದುಬ್ಬರ ದರವನ್ನು ಶೇ. 4ಕ್ಕೆ ಕಟ್ಟಿಹಾಕಲು ಹಲವು ತಿಂಗಳಿಂದ ವಿಫಲಪ್ರಯತ್ನ ಮಾಡುತ್ತಿದೆ.
ಆರ್ಥಿಕತೆಯ ದೃಷ್ಟಿಯಿಂದ ನೋಡುವುದಾದರೆ ಹಣದುಬ್ಬರ ತೀರಾ ಅನಾಹುತ ತರುವಂಥದ್ದಲ್ಲ. ಮದ್ಯ ಸೇವನೆಯಂತೆ ಹಣದುಬ್ಬರವೂ ಇತಿಮಿತಿಯಲ್ಲಿ ಇದ್ದರೆ ಆರ್ಥಿಕ ಆರೋಗ್ಯಕ್ಕೆ ಚೆನ್ನ. ತಜ್ಞರು ಹೇಳುವ ಪ್ರಕಾರ ಶೇ. 2ರಷ್ಟು ಹಣದುಬ್ಬರ ಇರುವುದು ಉತ್ತಮ. ಯಾಕೆಂದರೆ ಉತ್ಪಾದಕರಿಗೆ ತಮ್ಮ ಉತ್ಪನ್ನವನ್ನು ಲಾಭದಲ್ಲಿ ಮಾರಬೇಕೆಂದರೆ ಹಣದುಬ್ಬರ ಇರಲೇಬೇಕು. ಇಲ್ಲದಿದ್ದರೆ ಉತ್ಪಾದಕರು ನಷ್ಟ ಹೊಂದುತ್ತಾರೆ, ಅದರ ಪರಿಣಾಮ ಆರ್ಥಿಕತೆಯ ಮೇಲೆ ನಕಾರಾತ್ಮಕವಾಗಿರುತ್ತದೆ.