Fact Check: ಪೆನ್ನಿನಲ್ಲಿ ಗೀಚಿದ, ತಿದ್ದಿದ ನೋಟು ಚಲಾವಣೆ ಆಗುತ್ತಾ? ಸರ್ಕಾರದ ಸ್ಪಷ್ಟನೆ ಇಲ್ಲಿದೆ
ನೋಟಿನ ಮೇಲೆ ಪೆನ್ನಿನಲ್ಲಿ ಗೀಚುವುದೋ, ಕೊಳಕು ಕೈಗಳಲ್ಲಿ ಮುಟ್ಟಿ ಹಾಳು ಮಾಡುವುದೋ ಮಾಡಿದಲ್ಲಿ ನೋಟಿನ ಆಯಸ್ಸು ಬೇಗ ಮುಗಿಯುತ್ತದೆ. ಆರ್ಬಿಐ ಕೂಡ ಈ ಬಗ್ಗೆ ಜನರಲ್ಲಿ ಆಗಾಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ನೋಟು ಹಾಳಾಗುವಂಥ ಯಾವುದೇ ಅಭ್ಯಾಸವನ್ನೂ ಮಾಡದಿರಿ ಎಂದು ರಿಸರ್ವ್ ಬ್ಯಾಂಕ್ ಮನವಿ ಮಾಡುತ್ತದೆ.
ನೋಟುಗಳ ಮೇಲೆ ಇರುವ ತುಸು ಖಾಲಿ ಜಾಗದಲ್ಲಿ ಏನಾದರೂ ಪೆನ್ನಿನಲ್ಲಿ ಗೀಚಿರುವುದನ್ನು (Scribbling on the Currency Note) ನಾವು ನೋಡಿರುತ್ತೇವೆ. ನೋಟುಗಳ ಮೇಲೆ ಗೀಚದಿರಿ, ಹಾಳು ಮಾಡದಿರಿ ಎಂದು ಆರ್ಬಿಐ (Reserve Bank of India) ಆಗಾಗ ಎಚ್ಚರಿಸುತ್ತಲೇ ಇದ್ದರೂ ಜನರು ಮಾತ್ರ ತಮ್ಮ ಗೀಚು ಪ್ರವೃತ್ತಿ ಬಿಡುವುದೇ ಇಲ್ಲ. ಈ ರೀತಿ ಗೀಚಿದ ಮತ್ತು ಹಾಳಾದ ನೋಟು ಅಸಿಂಧುವಾಗಿದ್ದು ಅದು ಚಲಾವಣೆ ಮಾಡಲು ಬರುವುದಿಲ್ಲ ಎಂಬಂತಹ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಸಹಜವಾಗಿಯೇ ಜನರಲ್ಲಿ ಗೊಂದಲ ಏರ್ಪಟ್ಟಿದೆ. ಹಾಗಾದರೆ, ಈ ರೀತಿ ಗೀಚಿದ ನೋಟುಗಳು ನಿಜಕ್ಕೂ ಚಲಾವಣೆಗೆ ಅರ್ಹವಿರುವುದಿಲ್ಲವೇ?
“ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ಮಾರ್ಗಸೂಚಿಗಳ ಪ್ರಕಾರ ಹೊಸ ನೋಟಿನ ಮೇಲೆ ಏನಾದರೂ ಗೀಚುವುದಿಂದ ಅದು ಚಲಾವಣೆಗೆ ಅನರ್ಹವಾಗುತ್ತದೆ” ಎಂಬಂತಹ ಮಾಹಿತಿ ಇರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಹೌದು. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಪೋಸ್ಟ್ಗಳು ವೈರಲ್ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ವಿಭಾಗ ಸ್ಪಷ್ಟೀಕರಣ ಹೊರಡಿಸಿದೆ. ಹೊಸ ನೋಟುಗಳ ಮೇಲೆ ಏನಾದರೂ ಗೀಚುವುದರಿಂದ ಆ ನೋಟಿನ ಮಾನ್ಯತೆ ಸ್ಥಗಿತಗೊಳ್ಳುವುದಿಲ್ಲ ಎಂದು ಹೇಳಿ ಟ್ವೀಟ್ ಮಾಡಿದೆ.
Does writing anything on the bank note make it invalid❓#PIBFactCheck
✔️ NO, Bank notes with scribbling are not invalid & continue to be legal tender
✔️Under the Clean Note Policy, people are requested not to write on the currency notes as it defaces them & reduces their life pic.twitter.com/V8Lwk9TN8C
— PIB Fact Check (@PIBFactCheck) January 8, 2023
ಇದನ್ನೂ ಓದಿ: Indian Rupee: ಏಷ್ಯಾದ ಕಳಪೆ ಕರೆನ್ಸಿಯಾಗಿ ವರ್ಷದ ವಹಿವಾಟು ಮುಗಿಸಿದ ರೂಪಾಯಿ
ನೋಟಿನ ಮೇಲೆ ಬರೆದರೆ ಏನೂ ಆಗಲ್ಲ ಎಂದು ಯಾರಾದರೂ ಭಾವಿಸಿ ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ಮಾಡದಿರಿ. ನೋಟನ್ನು ಆದಷ್ಟೂ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ನೋಟಿನ ಮುದ್ರಣಕ್ಕೆ ಸರ್ಕಾರ ಬಹಳಷ್ಟು ದುಡ್ಡು ವ್ಯಯಿಸುತ್ತದೆ. ನೋಟಿನ ಮೇಲೆ ಪೆನ್ನಿನಲ್ಲಿ ಗೀಚುವುದೋ, ಕೊಳಕು ಕೈಗಳಲ್ಲಿ ಮುಟ್ಟಿ ಹಾಳು ಮಾಡುವುದೋ ಮಾಡಿದಲ್ಲಿ ನೋಟಿನ ಆಯಸ್ಸು ಬೇಗ ಮುಗಿಯುತ್ತದೆ. ಆರ್ಬಿಐ ಕೂಡ ಈ ಬಗ್ಗೆ ಜನರಲ್ಲಿ ಆಗಾಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ.
ಕರೆನ್ಸಿ ನೋಟಿಗೆ ಈ ರೀತಿ ಮಾಡದಿರಿ:
- ಯಾವುದೇ ಬ್ಯಾಂಕ್ ನೋಟಿಗೆ ಸ್ಟೇಪಲ್ ಪಿನ್ ಅದುಮದಿರಿ
- ನೋಟುಗಳನ್ನು ಪೋಣಿಸಿ ಹಾರದಂತೆ ಮಾಡದಿರಿ
- ಡೆಕೋರೇಶನ್ ಮಾಡಲು ನೋಟುಗಳನ್ನು ಬಳಸದಿರಿ
- ಅಭಿಮಾನ ತೋರಲು ನೋಟುಗಳನ್ನು ಎರಚುವುದೋ, ನೆಲಕ್ಕೆ ಬಿಸುಡುವುದೋ ಇತ್ಯಾದಿ ಮಾಡದಿರಿ
- ನೋಟುಗಳ ಮೇಲೆ ಬರೆಯದಿರಿ
- ನೋಟು ಹಾಳಾಗುವಂಥ ಯಾವುದೇ ಅಭ್ಯಾಸವನ್ನೂ ಮಾಡದಿರಿ ಎಂದು ರಿಸರ್ವ್ ಬ್ಯಾಂಕ್ ಮನವಿ ಮಾಡುತ್ತದೆ. ಹಿಂದೆ, ಬ್ಯಾಂಕಿನಲ್ಲಿರುವ ಸಿಬ್ಬಂದಿಯೇ ಸಾಮಾನ್ಯವಾಗಿ ನೋಟುಗಳ ಕಂತೆಗೆ ಸ್ಟೇಪಲ್ ಪಿನ್ ಚುಚ್ಚುವುದುಂಟು ಮತ್ತು ಎಣಿಕೆಗೆ ಸಹಾಯವಾಗಲು ಗುರುತಿಗೆ ನಂಬರ್ ಬರೆಯುತ್ತಿದ್ದುಂಟು. ಈಗ ರಬ್ಬರ ಬ್ಯಾಂಡ್ ಹಾಕಲಾಗುತ್ತದೆ ಮತ್ತು ಎಣಿಕೆಗೆ ಮೆಷೀನ್ ಕೂಡ ಇದೆ.
- ಹಲವು ಕಾರಣಗಳಿಂದ ಒಂದು ನೋಟು ಕೆಲ ವರ್ಷಗಳ ಬಳಿಕ ಹಾಳಾದ ಸ್ಥಿತಿಗೆ ಬರುವುದುಂಟು. ಹಲವೊಮ್ಮೆ ನೋಟು ಹರಿದುಹೋಗುವುದುಂಟು. ಒಂದು ವೇಳೆ ಆ ರೀತಿ ಆದರೆ ಹೆದರುವ ಅವಶ್ಯಕತೆ ಇರುವುದಿಲ್ಲ. ನೋಟಿನ ನಂಬರ್ ಸರಿಯಾಗಿ ಕಾಣುವಂತಿದ್ದರೆ ಅದನ್ನು ಯಾವುದೇ ಬ್ಯಾಂಕಿಗೆ ಹೋಗಿ ಹೊಸ ನೋಟಿಗೆ ವಿನಿಮಯ ಮಾಡಬಹುದು.