Indian Rupee: ಏಷ್ಯಾದ ಕಳಪೆ ಕರೆನ್ಸಿಯಾಗಿ ವರ್ಷದ ವಹಿವಾಟು ಮುಗಿಸಿದ ರೂಪಾಯಿ
Indian Rupee Value; ಇದು 2013ರ ನಂತರದ ಅತಿ ಹೆಚ್ಚಿನ ಮೌಲ್ಯ ಕುಸಿತವಾಗಿದೆ. ಹಣದುಬ್ಬರ ಏರಿಕೆ ತಡೆಗೆ ಅಮೆರಿಕದ ಫೆಡರಲ್ ಬ್ಯಾಂಕ್ ಕೈಗೊಂಡ ಕಠಿಣ ಹಣಕಾಸು ನೀತಿಗಳು, ಇದರ ಪರಿಣಾಮವಾಗಿ ಡಾಲರ್ ಮೌಲ್ಯದಲ್ಲಿ ಭಾರೀ ಹೆಚ್ಚಳವಾಗಿರುವುದೂ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.
ನವದೆಹಲಿ: ಭಾರತೀಯ ರೂಪಾಯಿಯು (Indian Rupee) 2022ರಲ್ಲಿ ಏಷ್ಯಾದ ಅತಿ ಕಳಪೆ ಕರೆನ್ಸಿಯಾಗಿ ವರ್ಷಾಂತ್ಯದ ವಹಿವಾಟು ಮುಗಿಸಿದೆ. ಈ ವರ್ಷ ರೂಪಾಯಿ ಮೌಲ್ಯ (Rupee Value) ಶೇಕಡಾ 11.3ರಷ್ಟು ಕುಸಿತವಾಗಿದೆ. ಇದು 2013ರ ನಂತರದ ಅತಿ ಹೆಚ್ಚಿನ ಮೌಲ್ಯ ಕುಸಿತವಾಗಿದೆ. ಹಣದುಬ್ಬರ ಏರಿಕೆ ತಡೆಗೆ ಅಮೆರಿಕದ ಫೆಡರಲ್ ಬ್ಯಾಂಕ್ ಕೈಗೊಂಡ ಕಠಿಣ ಹಣಕಾಸು ನೀತಿಗಳು, ಇದರ ಪರಿಣಾಮವಾಗಿ ಡಾಲರ್ ಮೌಲ್ಯದಲ್ಲಿ ಭಾರೀ ಹೆಚ್ಚಳವಾಗಿರುವುದೂ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ವರ್ಷಾಂತ್ಯದ ವಹಿವಾಟಿನ ಕೊನೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 82.72 ಆಗಿದೆ. 2021ರಲ್ಲಿ 74.33 ಇತ್ತು. ಡಾಲರ್ ಮೌಲ್ಯ 2015ರ ನಂತರ ಅತಿಹೆಚ್ಚಿನ ವೃದ್ಧಿ ದಾಖಲಿಸಿದೆ.
ತೈಲ ಬೆಲೆ ಏರಿಕೆ, ರಷ್ಯಾ – ಉಕ್ರೇನ್ ಯುದ್ಧವೂ ಕಾರಣ
ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲೆ ಬೆಲೆ ಹೆಚ್ಚಳ ಕೂಡ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ. 2023ರಲ್ಲಿ ರೂಪಾಯಿ ಮೌಲ್ಯ ವೃದ್ಧಿಯಾಗುವ ನಿರೀಕ್ಷೆ ಇದೆ. ಸರಕುಗಳ ಬೆಲೆ ಇಳಿಕೆಯ ನಿರೀಕ್ಷೆಯೊಂದಿಗೆ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಎಂದು ‘ರಾಯಿಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: Digital Rupee: ಡಿಜಿಟಲ್ ರೂಪಾಯಿ ಬಳಸಿ ಎಫ್ಡಿ ಇಡಬಹುದೇ?
‘ಅಮೆರಿಕದ ಫೆಡ್ ದೀರ್ಘಾವಧಿಗೆ ದರ ಹೆಚ್ಚಳ ಮುಂದುವರಿಸಿದರೆ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಹಿಂಜರಿತವು ಹೆಚ್ಚು ಕಾಲ ಮುಂದುವರಿದರೆ ಭಾರತದ ರಫ್ತಿನ ಮೇಲೆ ತೀವ್ರ ಹೊಡೆತ ಬೀಳಲಿದೆ. ಇದು ರೂಪಾಯಿಯನ್ನು ಅಪಾಯಕ್ಕೆ ಸಿಲುಕಿಸಬಹುದು’ ಎಂದು ಐಸಿಐಸಿಐ ಸೆಕ್ಯುರಿಟೀಸ್ನ ಮುಖ್ಯ ಸಂಶೋಧಕ ರಾಜ್ ದೀಪಕ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
2023ರ ಮೊದಲ ತ್ರೈಮಾಸಿಕದಲ್ಲಿ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ 81.50 ರಿಂದ 83.50ರ ನಡುವೆ ಇರಲಿದೆ ಎಂದು ಹೆಚ್ಚಿನ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹೂಡಿಕೆಯ ಒಳಹರಿವು ರೂಪಾಯಿ ಮೌಲ್ಯವನ್ನು ಅಂದಾಜಿಸುವ ನಿಟ್ಟಿನಲ್ಲಿ ವಿದೇಶಿ ಹೂಡಿಕೆದಾರರಿಗೆ ಬಹಳ ಮುಖ್ಯವಾದ ಅಂಶವಾಗಿರುತ್ತದೆ ಎಂದೂ ವಿಶ್ಲೇಷಕರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Fri, 30 December 22