ನಕಲಿ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ಗೆ ತಡೆ, ಟಾಲಿವುಡ್ನಲ್ಲಿ ಬರಲಿದೆ ಹೊಸ ವ್ಯವಸ್ಥೆ
Dil Raju Collection: ಸಿನಿಮಾಗಳು ಬಿಡುಗಡೆ ಆದ ಮರುದಿನವೇ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ಗಳು ಹೊರಬೀಳುತ್ತವೆ. ಆದರೆ ಈ ಕಲೆಕ್ಷನ್ ರಿಪೋರ್ಟ್ಗಳು ಬಹುತೇಕ ಸುಳ್ಳೆ ಆಗಿರುತ್ತವೆ. ಕೆಲ ನಿರ್ಮಾಪಕರು ಹೇಳುವಂತೆ ಪ್ರಕಟವಾಗುವ ಯಾವೊಂದು ಕಲೆಕ್ಷನ್ ರಿಪೋರ್ಟ್ ಸಹ ನಿಜವಲ್ಲ. ಆದರೆ ಇದೀಗ ಟಾಲಿವುಡ್ನಲ್ಲಿ ನಿಜವಾದ ಕಲೆಕ್ಷನ್ ಅನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಯತ್ನ ಚಾಲ್ತಿಯಲ್ಲಿದೆ.

ನಮ್ಮ ಸಿನಿಮಾ ಮೂರು ದಿನಕ್ಕೆ ನೂರು ಕೋಟಿ ಗಳಿಸಿತು, ವಾರಕ್ಕೆ 200 ಕೋಟಿ ಗಳಿಸಿತು ಎಂದೆಲ್ಲ ನಿರ್ಮಾಣ ಸಂಸ್ಥೆಗಳೇ ಜಾಹೀರಾತು ಪ್ರಕಟಿಸುತ್ತಿವೆ. ಈ ಬಾಕ್ಸ್ ಆಫೀಸ್ ಲೆಕ್ಕಾಚಾರಗಳು ನಟರ ಅಭಿಮಾನಿಗಳ ಮಧ್ಯೆ ವೈಷಮ್ಯಕ್ಕೆ ಕಾರಣವಾಗುತ್ತಿವೆ, ನಿರ್ಮಾಪಕರ ಮೇಳೆ ಐಟಿ, ಸರ್ಕಾರಗಳ ಕಣ್ಣು ಬೀಳಲು ಕಾರಣ ಆಗುತ್ತಿವೆ. ಈ ಬಾಕ್ಸ್ ಆಫೀಸ್ ಲೆಕ್ಕಾಚಾರಗಳು ಬಹುತೇಕ ಸುಳ್ಳೆ ಆಗಿರುತ್ತವೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯವೇ ಆದರೂ ಅಹಂಗಾಗಿ ನಟರು, ನಿರ್ಮಾಪಕ, ನಿರ್ದೇಶಕರು ಸುಳ್ಳು ಲೆಕ್ಕಗಳನ್ನು ಜಾಹೀರಾತು ಪಾಡುತ್ತಿದ್ದಾರೆ. ಈ ಸುಳ್ಳು ಬಾಕ್ಸ್ ಆಫೀಸ್ ಲೆಕ್ಕಗಳು ಎಲ್ಲ ಚಿತ್ರರಂಗದಲ್ಲಿಯೂ ಇದೆ. ಆದರೆ ಟಾಲಿವುಡ್ನಲ್ಲಿ ತುಸು ಹೆಚ್ಚಾಗಿಯೇ ಇದೆ. ಇದೀಗ ಈ ಸುಳ್ಳು ಲೆಕ್ಕಗಳಿಗೆ ಕಡಿವಾಣ ಹಾಕಲು ಟಾಲಿವುಡ್ನ ಕೆಲವರು ಮುಂದಾಗಿದ್ದಾರೆ.
ತೆಲಂಗಾಣ ಸರ್ಕಾರದ ಸಿನಿಮಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಖ್ಯಾತ ನಿರ್ಮಾಪಕ ಹಾಗೂ ತೆಲುಗು ಸಿನಿಮಾ ನಿರ್ಮಾಪಕರ ಸಂಘದ ಪ್ರಮುಖ ಸದಸ್ಯರೂ ಆಗಿರುವ ದಿಲ್ ರಾಜು, ಇತ್ತೀಚೆಗೆ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ನಕಲಿ ಬಾಕ್ಸ್ ಆಫೀಸ್ ಲೆಕ್ಕಾಚಾರಕ್ಕೆ ಬ್ರೇಕ್ ಹಾಕಲು ಹೊಸ ನಿಯಮವೊಂದನ್ನು ಜಾರಿ ತರುವ ಕುರಿತು ಯೋಜನೆ ಸಿದ್ಧವಾಗುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:‘ಥಗ್ ಲೈಫ್’ ಬಾಕ್ಸ್ ಆಫೀಸ್ನಲ್ಲಿ ಸೋಲು, ಒಟಿಟಿ ಬಿಡುಗಡೆಯೂ ಇಕ್ಕಟ್ಟಿನಲ್ಲಿ
ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್ ಸದಾ ತಪ್ಪು ಸಂಖ್ಯೆಗಳಿಂದಲೇ ಕೂಡಿರುತ್ತದೆ. ಆದರೆ ಅಮೆರಿಕ ಇನ್ನಿತರೆ ಕೆಲವು ದೆಶಗಳಲ್ಲಿ ರನ್ ಟ್ರ್ಯಾಕ್ ಇನ್ನಿತರೆ ಮೂಲಗಳಿಂದ ನಿಖರವಾದ ಬಾಕ್ಸ್ ಆಫೀಸ್ ಕಲೆಕ್ಷನ್ ತಿಳಿಯುತ್ತದೆ. ಅದೇ ಮಾದರಿಯನ್ನು ಭಾರತದಲ್ಲಿಯೂ ತೆಗೆದುಕೊಂಡು ಬರುವ ಆಲೋಚನೆಯಲ್ಲಿರುವುದಾಗಿ ನಿರ್ಮಾಪಕ ದಿಲ್ ರಾಜು ಹೇಳಿದ್ದಾರೆ. ಈ ಬದಲಾವಣೆಗೆ ಎಲ್ಲರೂ ಜೊತೆಗೂಡಬೇಕು, ವಿಶೇಷವಾಗಿ ಮಾಧ್ಯಮದವರು ಬೆಂಬಲಿಸಬೇಕು, ಆ ಮೂಲಕ ನಿಜವಾದ ಬಾಕ್ಸ್ ಆಫೀಸ್ ಸಂಖ್ಯೆಗಳನ್ನೇ ಜನರ ಮುಂದೆ ಇಡುವಂತಾಗಬೇಕು’ ಎಂದಿದ್ದಾರೆ.
‘ಬದಲಾವಣೆ ಎಂಬುದು ಅಚಾನಕ್ಕಾಗಿ ಆಗುವುದಿಲ್ಲ, ಅದಕ್ಕೆ ಎಲ್ಲರ ಬೆಂಬಲ ಬೇಕು, ನಾವು ಈಗ ಸರಿಯಾದ ಮಾಹಿತಿ ನೀಡಿದೆವೆಂದರೆ ಇನ್ನೊಬ್ಬರು ಅದನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತಾರೆ. ಈ ಬದಲಾವಣೆ ಬಹಳ ದೂರದಲ್ಲೇನೂ ಇಲ್ಲ, ಬಹಳ ಹತ್ತಿರದಲ್ಲೇ ಇದೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಗಳು ಚಾಲ್ತಿಯಲ್ಲಿವೆ’ ಎಂದಿದ್ದಾರೆ ದಿಲ್ ರಾಜು.
ಕೆಲ ದಿನಗಳ ಹಿಂದಷ್ಟೆ ನಟ, ಶಾಸಕ ನಂದಮೂರಿ ಬಾಲಕೃಷ್ಣ ಸಹ, ಸಿನಿಮಾ ಪ್ರಚಾರಕ್ಕಾಗಿ ಬಾಕ್ಸ್ ಆಫೀಸ್ನ ತಪ್ಪು ಅಂಕಿ-ಸಂಖ್ಯೆಗಳನ್ನು ಜನರ ಮುಂದಿಡುವುದನ್ನು ವಿರೋಧಿಸಿ ಹೇಳಿಕೆ ನೀಡಿದ್ದರು. ಕೆಲವು ನಿರ್ಮಾಪಕರು ಸಹ, ನಿಜವಾದ ಬಾಕ್ಸ್ ಆಫೀಸ್ ಕಲೆಕ್ಷನ್ ನಮಗೆ ಮಾತ್ರ ಗೊತ್ತಿರುತ್ತದೆ ಇನ್ಯಾರಿಗೂ ಗೊತ್ತಿರುವುದಿಲ್ಲ’ ಎಂದಿದ್ದಿದೆ. ಕನ್ನಡ ಚಿತ್ರರಂಗದಲ್ಲಿಯೂ ಸಹ ಹಲವು ಸಿನಿಮಾಗಳ ಸುಳ್ಳು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಹಿತಿ ಹರಿದಾಡಿದ್ದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ