ಕೇವಲ 1 ಕೋಟಿ ರೂಪಾಯಿ ಗಳಿಸಿದ ‘ಥಗ್ ಲೈಫ್’; ಕಮಲ್ಗೆ ದೊಡ್ಡ ನಷ್ಟ
ಮಣಿರತ್ನಂ ನಿರ್ದೇಶನದ, ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರವು ಭಾರಿ ನಿರೀಕ್ಷೆಗಳ ನಡುವೆ 300 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ಬಿಡುಗಡೆಯಾಯಿತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ವೈಫಲ್ಯ ಅನುಭವಿಸಿದೆ. ಕನ್ನಡ ವಿರೋಧಿ ಹೇಳಿಕೆ ಮತ್ತು ನಕಾರಾತ್ಮಕ ವಿಮರ್ಶೆಗಳು ಚಿತ್ರದ ಗಳಿಕೆಯನ್ನು ದುರ್ಬಲಗೊಳಿಸಿವೆ.

ಸಾಕಷ್ಟು ವಿರೋಧ ಕಟ್ಟಿಕೊಂಡು ರಿಲೀಸ್ ಆದ ಕಮಲ್ ಹಾಸನ್ ನಟನೆಯ ಹಾಗೂ ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಸಿನಿಮಾ (Thug Life Movie) ಡಿಸಾಸ್ಟರ್ ಎನಿಸಿಕೊಂಡಿದೆ. ಈ ಸಿನಿಮಾದ ಬಜೆಟ್ 300 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ಸಿನಿಮಾ ಬಜೆಟ್ನ 20ರಷ್ಟು ಗಳಿಕೆ ಮಾಡೋದು ಅನುಮಾನ ಆಗಿದೆ. ಈ ಸಿನಿಮಾ ಏಳನೇ ದಿನ ಕೇವಲ 1.25 ಕೋಟಿ ರೂಪಾಯಿ ಮಾತ್ರ ಗಳಿಸಲು ಶಕ್ಯವಾಗಿದೆ. ವೀಕೆಂಡ್ ಬಂದರೂ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತದೆ ಎಂಬ ನಂಬಿಕೆ ಸ್ವತಃ ತಂಡದವರಿಗೂ ಇಲ್ಲ.
ಕಮಲ್ ಹಾಸನ್ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿದರು. ಈ ಕಾರಣಕ್ಕೆ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಸಾಧ್ಯವಾಗಿಲ್ಲ. ಇದರ ಜೊತೆಗೆ ಸಿನಿಮಾಗೆ ಕೆಟ್ಟ ವಿಮರ್ಶೆ ಸಿಕ್ಕಿದೆ. ಇದರಿಂದ ಚಿತ್ರದ ಗಳಿಕೆ ಕಡಿಮೆ ಆಗಿದೆ. ಮೊದಲ ದಿನ (15 ಕೋಟಿ ರೂಪಾಯಿ) ಹೊರತುಪಡಿಸಿದರೆ ಇನ್ಯಾವ ದಿನವೂ ಸಿನಿಮಾ 10 ಕೋಟಿ ರೂಪಾಯಿ ಗಳಿಕೆ ದಾಟಲು ಸಾಧ್ಯವಾಗೇ ಇಲ್ಲ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 42 ಕೋಟಿ ರೂಪಾಯಿ ಆಗಿದೆ.
ಮಣಿರತ್ನಂ ಅವರು ‘ಪಲ್ಲವಿ ಅನುಪಲ್ಲವಿ’, ‘ಗುರು’, ರೀತಿಯ ಚಿತ್ರಗಳನ್ನು ನೀಡಿದವರು. 2022-23ರಲ್ಲಿ ರಿಲೀಸ್ ಆದ ‘ಪೊನ್ನಿಯಿನ್ ಸೆಲ್ವನ್’ ಪಾರ್ಟ್ 1 ಹಾಗೂ 2 ಸಾಮಾನ್ಯ ಯಶಸ್ಸು ಕಂಡಿತ್ತು. ಈಗ ಅದಕ್ಕಿಂತಲೂ ಹೀನಾಯ ಸ್ಥಿತಿಯನ್ನು ಈ ಚಿತ್ರ ತಲುಪಿದೆ.
ಇದನ್ನೂ ಓದಿ: ‘ಥಗ್ ಲೈಫ್’ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್ಗೆ ಹಿನ್ನಡೆ
ಕಮಲ್ ಹಾಸನ್ ಅವರು ‘ಇಂಡಿಯನ್ 2’ ಸಿನಿಮಾ ಹೀನಾಯ ವಿಮರ್ಶೆ ಪಡೆಯಿತು. ಅದಕ್ಕಿಂತಲೂ ಕೆಟ್ಟ ವಿಮರ್ಶೆ ‘ಥಗ್ ಲೈಫ್’ ಚಿತ್ರಕ್ಕೆ ಸಿಕ್ಕಿದೆ. ಇದು ಕಮಲ್ ಹಾಸನ್ ವೃತ್ತಿ ಜೀವನಕ್ಕೂ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡಿದೆ. ಈ ಸಿನಿಮಾಗೆ ಅವರದ್ದೇ ನಿರ್ಮಾಣ ಇದೆ. ಈ ಕಾರಣಕ್ಕೆ ನಿರ್ಮಾಪಕರಾಗಿ ಅವರು ದೊಡ್ಡ ನಷ್ಟವನ್ನು ಕಂಡಿದ್ದಾರೆ. ಇನ್ನು, ಸಿನಿಮಾ ಹೀನಾಯ ಸ್ಥಿತಿಯಲ್ಲಿ ಇರುವುದರಿಂದ ಈ ಮೊದಲು ಒಟಿಟಿ ಜೊತೆ ಆದ ಒಪ್ಪಂದವನ್ನು ನೆಟ್ಫ್ಲಿಕ್ಸ್ ರದ್ದು ಮಾಡಿಕೊಳ್ಳುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








