ಸರಣಿ ಸೋಲುಗಳ ಬಳಿಕವೂ ಭಾರಿ ಬಜೆಟ್ ಸಿನಿಮಾಕ್ಕೆ ಸೂರ್ಯ ನಾಯಕ
Suriya: ತಮಿಳಿನ ಸ್ಟಾರ್ ನಟರಲ್ಲಿ ಒಬ್ಬರಾದ ಸೂರ್ಯ ನಟನೆಯ ಕಳೆದ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿವೆ. ಆದರೆ ಸೂರ್ಯ ಅವರಿಗೆ ಬೇಡಿಕೆ ಇದರಿಂದ ಕಡಿಮೆ ಆಗಿಲ್ಲ. ಈಗಲೂ ಸಹ ನಿರ್ಮಾಪಕರು ಸೂರ್ಯ ಮೇಲೆ ಬಂಡವಾಳ ಹಾಕಲು ಸಾಲುಗಟ್ಟಿ ನಿಂತಿದ್ದಾರೆ. ಸೂರ್ಯ ನಟಿಸುತ್ತಿರುವ ಹೊಸ ಸಿನಿಮಾಕ್ಕೆ ಭಾರಿ ದೊಡ್ಡ ಬಜೆಟ್ ಹಾಕಲಾಗುತ್ತಿದೆ.

ತಮಿಳಿನ ಸ್ಟಾರ್ ನಟರಲ್ಲಿ ಸೂರ್ಯ (Suriya) ಸಹ ಒಬ್ಬರು. ಒಳ್ಳೆಯ ನಟ, ನೃತ್ಯಗಾರ, ಆಕ್ಷನ್, ಫಿಟ್ನೆಸ್, ಸ್ಟೈಲ್ ಎಲ್ಲವೂ ಇರುವ ಪರಿಪೂರ್ಣ ನಾಯಕ ನಟ. ಆದರೆ ಅವರ ಅದೃಷ್ಟವೇ ಸರಿ ಇಲ್ಲ. ಸೂರ್ಯ ನಟಿಸಿರುವ ಸಿನಿಮಾಗಳೆರಡು ಸತತವಾಗಿ ಸೋಲು ಕಂಡಿವೆ. 2024 ರಲ್ಲಿ ಬಿಡುಗಡೆ ಆದ ‘ಕಂಗುವ’ ಮತ್ತು ಇದೇ ವರ್ಷ ತೆರೆಗೆ ಬಂದ ‘ರೆಟ್ರೊ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿವೆ. ಇದರ ನಡುವೆಯೂ ಸೂರ್ಯಗೆ ಬೇಡಿಕೆ ಕಡಿಮೆ ಆಗಿಲ್ಲ, ಇದೀಗ ಸೂರ್ಯ ಮತ್ತೊಂದು ಭಾರಿ ಬಜೆಟ್ ಸಿನಿಮಾಕ್ಕೆ ನಾಯಕನಾಗಿ ಆಯ್ಕೆ ಆಗಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳಾದ ‘ವಾತಿ’, ‘ಲಕ್ಕಿ ಭಾಸ್ಕರ್’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವೆಂಕಿ ಅಟ್ಲೂರಿ ನಿರ್ದೇಶನದ ಹೊಸ ಸಿನಿಮಾನಲ್ಲಿ ಸೂರ್ಯ ನಾಯಕನಾಗಿ ನಟಿಸಲಿದ್ದಾರೆ. ನಾಗ ವಂಶಿ ಮತ್ತು ಸಾಯಿ ಸೌಜನ್ಯ ಅವರುಗಳು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಇದು ಸೂರ್ಯ ಅವರ 46ನೇ ಸಿನಿಮಾ ಆಗಿರಲಿದೆ. ಸಿನಿಮಾ ಮೇಲೆ ಭಾರಿ ದೊಡ್ಡ ಬಂಡವಾಳವನ್ನೇ ನಿರ್ಮಾಪಕರು ಹಾಕುತ್ತಿದ್ದಾರೆ. ಈ ಸಿನಿಮಾಕ್ಕಾಗಿ ನಾಗ ವಂಶಿ ಮತ್ತು ಸಾಯಿ ಸೌಜನ್ಯ 350 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಿದ್ದಾರಂತೆ.
ಈ ಸಿನಿಮಾ ಆಕ್ಷನ್ ಜೊತೆಗೆ ಭಾವನೆಗಳನ್ನು ಒಳಗೊಂಡ ಥ್ರಿಲ್ಲರ್ ರೀತಿಯ ಕತೆಯನ್ನು ಹೊಂದಿದ್ದು, ಸಿನಿಮಾ ಅನ್ನು ಹಲವು ಬೇರೆ ಬೇರೆ ಲೊಕೇಶನ್ಗಳನ್ನು ಚಿತ್ರೀಕರಣ ಮಾಡಲಾಗುತ್ತದೆಯಂತೆ. ಸಿನಿಮಾದಲ್ಲಿ ವಿಎಫ್ಎಕ್ಸ್ ಕೆಲಸವೂ ಸಾಕಷ್ಟು ಇರಲಿದೆಯಂತೆ. ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಪ್ರೇಮಲು’ ನಾಯಕಿ ಮಮತಾ ಬಿಜು ಈ ಸಿನಿಮಾದ ನಾಯಕಿ. ಇದು ಅವರ ಮೊದಲ ತಮಿಳು ಸಿನಿಮಾ ಸಹ ಹೌದು.
ಇದನ್ನೂ ಓದಿ:90 ಎಸೆತಗಳಲ್ಲಿ 190 ರನ್ ಚಚ್ಚಿದ ವೈಭವ್ ಸೂರ್ಯವಂಶಿ
ಸೂರ್ಯ ಅವರ ಈ ಸಿನಿಮಾಕ್ಕೆ ಹೆಸರು ಇನ್ನೂ ಅಧಿಕೃತವಾಗಿಲ್ಲವಾದರೂ ಸಿನಿಮಾಕ್ಕೆ ‘ವೆಟ್ಟೈ ಕರುಪ್ಪು’ ಹೆಸರಿಡುವ ಯೋಚನೆಯಲ್ಲಿದ್ದಾರೆ ನಿರ್ದೇಶಕ. ಇನ್ನು ಸಿನಿಮಾನಲ್ಲಿ ಹಲವು ವಿಶೇಷತೆಗಳು ಇರಲಿವೆಯಂತೆ. ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ಈ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ನಟ ಸೂರ್ಯ ನಟನೆಯ ‘ಕಂಗುವ’ ಹಾಗೂ ‘ರೆಟ್ರೊ’ ಸಿನಿಮಾಗಳು ಒಂದರ ಹಿಂದೊಂದರಂತೆ ಫ್ಲಾಪ್ ಆಗಿವೆ. ಇದೀಗ ‘ಖೈದಿ 2’ ಸಿನಿಮಾನಲ್ಲಿ ಸೂರ್ಯ ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಅವರ ಸಹೋದರ ಕಾರ್ತಿ ಆ ಸಿನಿಮಾದ ನಾಯಕ. ಇದರ ಜೊತೆಗೆ ನಟ, ನಿರ್ದೇಶಕ ಆರ್ಜೆ ಬಾಲಾಜಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ಸೂರ್ಯ ನಟಿಸಲಿದ್ದಾರೆ. ಆ ಸಿನಿಮಾಕ್ಕೆ ತ್ರಿಷಾ ನಾಯಕಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




