ಬಿಗ್ಬಾಸ್ ಕನ್ನಡ 12, ತಯಾರಿ ಆರಂಭ, ಹೊಸ ನಿರೂಪಕ ಯಾರು?
Bigg Boss Kannada 12: ಬಿಗ್ಬಾಸ್ ಕನ್ನಡ ಹೊಸ ಸೀಸನ್ ಸೆಪ್ಟೆಂಬರ್ ತಿಂಗಳಲ್ಲಿ ಆರಂಭ ಆಗಲಿದೆ ಎನ್ನಲಾಗುತ್ತಿದೆ. ಸ್ಪರ್ಧಿಗಳ ಆಯ್ಕೆಯನ್ನು ಆಯೋಜಕರು ಮಾಡುತ್ತಿದ್ದಾರೆ. ಅದರ ಜೊತೆಗೆ ಸೆಟ್ ನಿರ್ಮಾಣ ಇನ್ನಿತರೆ ಕಾರ್ಯಗಳು ಸಹ ಭರದಿಂದ ಸಾಗಿವೆಯಂತೆ. ಇದೆಲ್ಲದರ ನಡುವೆ ಆಯೋಜಕರು ಈ ಸೀಸನ್ಗಾಗಿ ಹೊಸ ನಿರೂಪಕರನ್ನು ಸಹ ಆಯ್ಕೆ ಮಾಡಬೇಕಿದೆ. ಹೊಸ ಸೀಸನ್ ನಿರೂಪಕರು ಯಾರಾಗಲಿದ್ದಾರೆ?

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ಆರಂಭಕ್ಕೆ ಸಿದ್ಧತೆ ಈಗಾಗಲೇ ಆರಂಭವಾಗಿದೆ. ಜೂನ್ ತಿಂಗಳ ಬಳಿಕ ವಿವಿಧ ಭಾಷೆಗಳಲ್ಲಿ ಬಿಗ್ಬಾಸ್ ರಿಯಾಲಿಟಿ ಶೋ ಒಂದೊಂದಾಗಿ ಆರಂಭವಾಗುತ್ತಿದೆ. ಹೋಲಿಸಿದರೆ ಕನ್ನಡದಲ್ಲಿಯೇ ತುಸು ತಡವಾಗಿ ಬಿಗ್ಬಾಸ್ ಆರಂಭವಾಗುತ್ತದೆ. ಆದರೆ ಟಿಆರ್ಪಿ ಬಾಚುವುದರಲ್ಲಿ ಮಾತ್ರ ಹಿಂದುಳಿಯುವುದಿಲ್ಲ. ಇದೀಗ ಬಿಗ್ಬಾಸ್ ಕನ್ನಡ 12 ನೇ ಸೀಸನ್ಗೆ ಸಿದ್ಧತೆ ಆರಂಭ ಆಗಿದೆ ಎನ್ನಲಾಗುತ್ತಿದೆ. ಆದರೆ ಆಯೋಜಕರಿಗೆ ನಿರೂಪಕರದ್ದೇ ದೊಡ್ಡ ಸಮಸ್ಯೆ ಆಗಿದೆ.
ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳನ್ನು ಗುರುತಿಸುವುದು ಅವರನ್ನು ಅಂತಿಮಗೊಳಿಸುವುದು, ಪ್ರೋಮೋ ಕಂಟೆಂಟ್ ಅಂತಿಮಗೊಳಿಸುವುದು, ಬಿಗ್ಬಾಸ್ ಸೆಟ್ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಈಗಾಗಲೇ ಆಯೋಜಕರು ಆರಂಭ ಮಾಡಿದ್ದಾರಂತೆ. ಕೆಲ ವರದಿಗಳ ಪ್ರಕಾರ, ಈ ಬಾರಿ ಬಿಗ್ಬಾಸ್ ಮನೆ ಸೇರಲಿರುವ ಸಂಭಾವ್ಯ ಪಟ್ಟಿ ಈಗಾಗಲೇ ತಯಾರಾಗಿದೆಯಂತೆ. ಆದರೆ ಅಂತಿಮ ಹಂತದ ಜರಡಿ ಹಿಡಿಯುವ ಕಾರ್ಯಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ಇನ್ನು ಸೆಟ್ ನಿರ್ಮಾಣ ಕಾರ್ಯವೂ ಸಹ ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದೆ. ಈ ಹಿಂದಿನ ಎಲ್ಲ ಸೀಸನ್ನ ಮನೆಗಳಿಗಿಂತಲೂ ಭಿನ್ನವಾಗಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸೆಟ್ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಸೆಟ್ಗೆ ಪ್ರಾಯೋಜಕರು ಅಂತಿಮಗೊಂಡಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ
ಎಲ್ಲವೂ ರೆಡಿಯಾಗಿದೆ ಆದರೆ ಈ ಬಾರಿ ಕನ್ನಡ ಬಿಗ್ಬಾಸ್ ರಿಯಾಲಿಟಿ ಶೋ ಅನ್ನು ಹೋಸ್ಟ್ ಮಾಡುವವರು ಯಾರು ಎಂಬುದೇ ಚಿಂತೆಯಾಗಿದೆ. ಸುದೀಪ್ ಅವರು ಕಳೆದ ವರ್ಷವೇ, ಈ ಸೀಸನ್ ನನ್ನ ಕೊನೆಯ ಸೀಸನ್ ಆಗಿರಲಿದೆ ಎಂದು ಘೋಷಣೆ ಮಾಡಿದ್ದಾಗಿದೆ. ಕನ್ನಡದಲ್ಲಿ ಬಿಗ್ಬಾಸ್ ಆರಂಭವಾದ ಬಳಿಕ ಸುದೀಪ್ ಹೊರತಾಗಿ ಇನ್ಯಾರೂ ಸಹ ಬಿಗ್ಬಾಸ್ ನಿರೂಪಣೆ ಮಾಡಿಲ್ಲ. ಪ್ರೇಕ್ಷಕರು, ಸುದೀಪ್ ಅವರ ನಿರೂಪಣೆಗೆ ಒಗ್ಗಿ ಹೋಗಿದ್ದಾರೆ. ಹಾಗಾಗಿ ಮುಂದಿನ ನಿರೂಪಕರು ಯಾರಾಗಿರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ರಿಷಬ್ ಶೆಟ್ಟಿ, ಡಾಲಿ ಧನಂಜಯ್, ರಮೇಶ್ ಅರವಿಂದ್, ದುನಿಯಾ ವಿಜಯ್ ಇನ್ನೂ ಕೆಲವು ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡುತ್ತಿವೆ. ಆದರೆ ಯಾವೊಂದು ಸಹ ಫೈನಲ್ ಆಗಿಲ್ಲ. ಕೆಲ ವರದಿಗಳ ಪ್ರಕಾರ, ಜನಪ್ರಿಯ ನಟನೊಟ್ಟಿಗೆ ಆಯೋಜಕರು ಈಗಾಗಲೇ ಮಾತುಕತೆ ಮುಗಿಸಿದ್ದು, ಶೀಘ್ರವೇ ಪ್ರೋಮೋ ಮೂಲಕ ಅವರ ಪರಿಚಯ ಮಾಡಿಕೊಡಲಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Thu, 12 June 25




