‘ಥಗ್ ಲೈಫ್’ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್ಗೆ ಹಿನ್ನಡೆ
Thug Life Movie: ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರದ ಕರ್ನಾಟಕದಲ್ಲಿ ಬಿಡುಗಡೆ ಆಗಿಲ್ಲ. ಕನ್ನಡದ ಮೇಲಿನ ಅವರ ವಿವಾದಾತ್ಮಕ ಹೇಳಿಕೆಯಿಂದಾಗಿ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದರೂ, ಸುಪ್ರೀಂಕೋರ್ಟ್‌ನಲ್ಲಿ ಅವರು ಮನವಿ ಮಾಡಿದ್ದಾರೆ. ಆದರೆ, ಈ ಮನವಿ ತಿರಸ್ಕರಿಸಲ್ಪಟ್ಟಿದೆ.

‘ಥಗ್ ಲೈಫ್’ ಚಿತ್ರವನ್ನು (Thug Life Movie) ಶತಾಯ-ಗತಾಯ ಕರ್ನಾಟಕದಲ್ಲಿ ರಿಲೀಸ್ ಮಾಡಿಯೇ ತೀರಬೇಕು ಎಂದು ಕಮಲ್ ಹಾಸನ್ ಅವರು ಪಟ್ಟು ಹಿಡಿದಂತಿದೆ. ಈ ಕಾರಣದಿಂದಲೇ ಅವರು ನ್ಯಾಯಾಲಯದ ಮೂಲಕ ಪ್ರಕರಣವನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಯಲ್ಲಿರುವಾಗಲೇ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಅಲ್ಲಿ ಅವರಿಗೆ ಹಿನ್ನಡೆ ಆಗಿದೆ. ಮನವಿಯನ್ನು ನೋಡಿದ ಸುಪ್ರೀಂಕೋರ್ಟ್ ಹೈಕೋರ್ಟ್ನತ್ತ ಬೆರಳು ಮಾಡಿದೆ. ಹೀಗಾಗಿ ಕಮಲ್ ಅವರು ಹೈಕೋರ್ಟ್ ಆದೇಶ ಬರುವವರೆಗೆ ಕಾಯಲೇಬೇಕಿದೆ.
‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂಬ ಕಮಲ್ ಹಾಸನ್ ಹೇಳಿಕೆಗೆ ಎಲ್ಲ ಕಡೆಗಳಲ್ಲಿ ವಿರೋಧ ವ್ಯಕ್ತವಾಯಿತು. ಈ ಹೇಳೆಯನ್ನು ಕನ್ನಡಿಗರು ಬಹುವಾಗಿ ಖಂಡಿಸಿದರು. ಈ ಕಾರಣದಿಂದಲೇ ಅವರ ನಟನೆಯ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡದಿರಲು ನಿರ್ಧರಿಸಲಾಯಿತು. ಈ ವಿಚಾರ ಕಮಲ್ನ ಕೆರಳಿಸಿದೆ. ಆರಂಭದಲ್ಲಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದ ಅವರು, ಸಿನಿಮಾ ರಿಲೀಸ್ ವೇಳೆ ಭದ್ರತೆಗೆ ಮನವಿ ಮಾಡಿದ್ದರು.
ಈ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಇದು ಅಸಾಧ್ಯ ಎಂದಿದೆ. ‘ಕನ್ನಡಿಗರ ಬಳಿ ಕ್ಷಮೆ ಕೇಳಿದರೆ ಮಾತ್ರ ಸಮಸ್ಯೆಗೆ ಪರಿಹಾರ’ ಎಂದು ಕೋರ್ಟ್ ಪರೋಕ್ಷವಾಗಿ ಹೇಳಿತ್ತು. ಸದ್ಯ ಅರ್ಜಿ ವಿಚಾರಣೆ ಜೂನ್ 10ರಂದು ನಡೆಯಬೇಕಿದೆ. ಅದಕ್ಕೂ ಮೊದಲೇ ಕಮಲ್ ಹಾಸನ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿ ಅವರಿಗೆ ಹಿನ್ನಡೆ ಆಗಿದೆ.
‘ಥಗ್ ಲೈಫ್ ವಿರುದ್ಧ ಕರ್ನಾಟಕದಲ್ಲಿ ಬೆದರಿಕೆಗಳು ಬರುತ್ತಿವೆ. ಚಿತ್ರ ಪ್ರದರ್ಶನಕ್ಕೆ ಬಿಡುತ್ತಿಲ್ಲ’ ಎಂದು ಸುಪ್ರೀಂನಲ್ಲಿ ತಂಡ ಅರ್ಜಿ ಸಲ್ಲಿಸಿದೆ. ಅರ್ಜಿ ವಿಚಾರಣೆಗೆ ನ್ಯಾಯಮೂರ್ತಿ ಪಿಕೆ ಮಿಶ್ರಾ ನಿರಾಕರಣೆ ಮಾಡಿದ್ದಾರೆ. ಅರ್ಜಿದಾರರು ಹೈ ಕೋರ್ಟ್ ಮೊರೆ ಹೋಗುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ: ಭಾನುವಾರವೇ ಅತೀ ಕಡಿಮೆ ಗಳಿಕೆ ಮಾಡಿದ ‘ಥಗ್ ಲೈಫ್’; ಕನ್ನಡಿಗರ ತಂಟೆಗೆ ಬಂದವರಿಗೆ ತಕ್ಕ ಪಾಠ
‘ಥಗ್ ಲೈಫ್’ ಸಿನಿಮಾಗೆ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕಮಲ್ ಹಾಸನ್, ಸಿಂಬು, ತ್ರಿಷಾ, ಅಭಿರಾಮಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಹೇಳಿಕೊಳ್ಳುವಂಥ ಗಳಿಕೆ ಮಾಡಲು ವಿಫಲವಾಗಿದೆ. ಇನ್ನು ಸಿನಿಮಾ ಕೂಡ ಹೀನಾಯ ಗಳಿಕೆ ಮಾಡುತ್ತಿದೆ. ನಾಲ್ಕು ದಿನಕ್ಕೆ ಚಿತ್ರದ ಗಳಿಕೆ 36 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:49 am, Mon, 9 June 25