ಭಾನುವಾರವೇ ಅತೀ ಕಡಿಮೆ ಗಳಿಕೆ ಮಾಡಿದ ‘ಥಗ್ ಲೈಫ್’; ಕನ್ನಡಿಗರ ತಂಟೆಗೆ ಬಂದವರಿಗೆ ತಕ್ಕ ಪಾಠ
ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಿಲ್ಲ. ಇದರಿಂದ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಗಿದೆ. ಕನ್ನಡದ ಮೂಲ ತಮಿಳು ಎಂದು ಹೇಳಿದ್ದ ಅವರು, ಕ್ಷಮೆ ಕೇಳಲು ನಿರಾಕರಿಸಿದ್ದರು. ಇದು ಅವರ ಸಿನಿಮಾಗೆ ದೊಡ್ಡ ಹೊಡೆತ ಕೊಟ್ಟಿದೆ.

ಹಿರಿಯ ನಟ ಕಮಲ್ ಹಾಸನ್ (Kamal Haasan) ಅವರು ಸುಖಾಸುಮ್ಮನೆ ಕನ್ನಡಿಗರ ಕೆಣಕಿದ್ದರು. ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿದ್ದು ಮಾತ್ರವಲ್ಲದೆ, ಅದಕ್ಕೆ ಕ್ಷಮೆ ಕೇಳಲು ನಿರಾಕರಿಸಿದ್ದರು. ಇದರ ಪರಿಣಾಮ ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಮೇಲೆ ಉಂಟಾಯಿತು. ಕರ್ನಾಟಕದಲ್ಲಿ ಸಿನಿಮಾ ರಿಲೀಸ್ಗೆ ಅವಕಾಶ ನೀಡಿಲ್ಲ. ಈ ಕಾರಣದಿಂದಲೇ ಕಲೆಕ್ಷನ್ ವಿಚಾರದಲ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಮುಗ್ಗರಿಸಿದೆ. ಸಿನಿಮಾ ರಿಲೀಸ್ ಆಗಿ ನಾಲ್ಕು ದಿನ ಕಳೆದಿದ್ದು, ಇನ್ನೂ 40 ಕೋಟಿ ರೂಪಾಯಿ ಕ್ಲಬ್ ಸೇರಲು ಒದ್ದಾಡುತ್ತಿದೆ.
ಈ ಮೊದಲು ರಿಲೀಸ್ ಆದ ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಹೀನಾಯ ವಿಮರ್ಶೆ ಪಡೆಯಿತು. ಈ ರೀತಿ ವಿಮರ್ಶೆ ಪಡೆದ ಸಿನಿಮಾ ಕೂಡ ಮೂರು ದಿನಕ್ಕೆ ಸುಮಾರು 70 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಚಿತ್ರಕ್ಕೆ ಕರ್ನಾಟಕದಲ್ಲೂ ಒಳ್ಳೆಯ ಗಳಿಕೆ ಆಗಿತ್ತು. ಆದರೆ, ಈಗ ‘ಥಗ್ ಲೈಫ್’ ಚಿತ್ರಕ್ಕೆ ಕರ್ನಾಟಕದ ಕಲೆಕ್ಷನ್ ಇಲ್ಲದೆ ಕಷ್ಟ ಹೆಚ್ಚಿದೆ. ‘ಇಂಡಿಯನ್ 2’ ಚಿತ್ರದ ಅರ್ಧದಷ್ಟು ಗಳಿಸಲು ಈ ಸಿನಿಮಾ ಬಳಿ ಸಾಧ್ಯವಾಗುತ್ತಿಲ್ಲ.
‘ಥಗ್ ಲೈಫ್’ ಸಿನಿಮಾ ಗುರುವಾರ (ಜೂನ್ 5) ರಿಲೀಸ್ ಆಯಿತು. ಮೊದಲ ದಿನ 15 ಕೋಟಿ ರೂಪಾಯಿ, ಎರಡನೇ ದಿನ 7.15 ಕೋಟಿ ರೂಪಾಯಿ ಗಳಿಸಿತು. ಶನಿವಾರ 7.75 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಸಾಮಾನ್ಯವಾಗಿ ಭಾನುವಾರ ಎಲ್ಲಾ ಸಿನಿಮಾಗಳಿಗೆ ತುಂಬಾನೇ ಮುಖ್ಯವಾಗುತ್ತದೆ. ಕಷ್ಟದಲ್ಲಿದ್ದ ‘ಥಗ್ ಲೈಫ್’ ಚಿತ್ರಕ್ಕೂ ಈ ದಿನ ಮುಖ್ಯವಾಗಿತ್ತು. ಆದರೆ, ಸಿನಿಮಾ ಗಳಿಸಿದ್ದು ಕೇವಲ 6.50 ಕೋಟಿ ರೂಪಾಯಿ. ಈ ಮೂಲಕ ಚಿತ್ರದ ಒಟ್ಟೂ ಕಲೆಕ್ಷನ್ 36.90 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ಕಮಲ್ ಹಾಸನ್ ಬಳಿಕ ಕನ್ನಡಕ್ಕೆ ಮಸಿ ಬಳಿಯಲು ಬಂದ ಆರ್ಜಿವಿ; ಅಣ್ಣಾವ್ರ ಹೀಗಳೆದ ನಿರ್ದೇಶಕ
‘ವಿಕ್ರಮ್’ ಸಿನಿಮಾ ನಿರ್ಮಾಣ ಮಾಡಿ ಗೆದ್ದಿದ್ದ ಕಮಲ್ ಹಾಸನ್ ಅವರು ‘ಥಗ್ ಲೈಫ್’ ಕೂಡ ನಿರ್ಮಿಸಿದರು. ಆದರೆ, ಈ ಚಿತ್ರ ಅವರಿಗೆ ದೊಡ್ಡ ಹೊಡೆತ ಕೊಟ್ಟಿದೆ. ನಿರ್ಮಾಪಕನಾಗಿ ಅವರಿಗೆ ಸಾಕಷ್ಟು ಹಿನ್ನಡೆ ಆಗಿದೆ. ಅವರು ರಾಜಕೀಯದಲ್ಲೂ ಬ್ಯುಸಿ ಇದ್ದಾರೆ. ಈಗ ಕನ್ನಡಿಗರ ಕೆಣಕಿ ದೊಡ್ಡ ಪಾಠ ಕಲಿತುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








