‘ಥಗ್ ಲೈಫ್’ ಸೋಲಿನಿಂದ ರಾಮ್ ಚರಣ್ ಚಿತ್ರಕ್ಕೂ ಶುರವಾಗಿದೆ ಭಯ; ಏನಿದು ನಂಟು?
ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ಬಾಕ್ಸ್ ಆಫೀಸ್ ವೈಫಲ್ಯವು ರಾಮ್ ಚರಣ್ ಅವರ ಮುಂಬರುವ ಚಿತ್ರ ‘ಪೆದ್ದಿ’ಗೆ ಆತಂಕವನ್ನುಂಟು ಮಾಡಿದೆ. ಎರಡೂ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್. ‘ಥಗ್ ಲೈಫ್’ ಚಿತ್ರದ ಸಂಗೀತದ ವಿಫಲತೆಯು ‘ಪೆದ್ದಿ’ ಚಿತ್ರದ ಯಶಸ್ಸಿನ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕವಿದೆ.

ಕಮಲ್ ಹಾಸನ್ (Kamal Haasan) ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದುರಂತ ಅಂತ್ಯ ಕಾಣುವ ಸೂಚನೆ ನೀಡಿದೆ. 300 ಕೋಟಿ ರೂಪಾಯಿ ಬಜೆಟ್ನ ಈ ಚಿತ್ರ ಎರಡು ದಿನಕ್ಕೆ ಗಳಿಕೆ ಮಾಡಿದ್ದು ಕೇವಲ 23 ಕೋಟಿ ರೂಪಾಯಿ. ಈ ಚಿತ್ರದಿಂದ ನಿರ್ಮಾಪಕನಾಗಿ ಕಮಲ್ ಹಾಸನ್ ಅವರು ಸಾಕಷ್ಟು ನಷ್ಟ ಅನುಭವಿಸುವ ಸಾಧ್ಯತೆ ಇದೆ. ಈ ಮಧ್ಯೆ ಕಮಲ್ ಹಾಸನ್ ಚಿತ್ರದ ಸೋಲಿನಿಂದ ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರಕ್ಕೂ ಭಯ ಆರಂಭ ಆಗಿದೆ. ಎರಡೂ ಚಿತ್ರಗಳ ಮಧ್ಯೆ ಇರುವ ಲಿಂಕ್ ಎನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
‘ಥಗ್ ಲೈಫ್’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಎಆರ್ ರೆಹಮಾನ್. ಇವರು ಎರಡು ಆಸ್ಕರ್ ಅವಾರ್ಡ್ನ ಪಡೆದುಕೊಂಡಿದ್ದಾರೆ. ಹೀಗಾಗಿ ಇವರು ಸಂಗೀತ ಸಂಯೋಜನೆ ಮಾಡುತ್ತಾರೆ ಎಂದರೆ ಅಲ್ಲಿ ಹಾಡುಗಳ ಬಗ್ಗೆ ನಿರೀಕ್ಷೆ ಹೆಚ್ಚಿರುತ್ತದೆ. ‘ಥಗ್ ಲೈಫ್’ ಸಿನಿಮಾಗೆ ಇವರೇ ಮ್ಯೂಸಿಕ್ ನೀಡಿದ್ದರು. ಆದರೆ, ಹಾಡಿನ ಮೂಲಕವಾಗಲಿ ಅಥವಾ ಹಿನ್ನೆಲೆ ಸಂಗೀತದ ಮೂಲಕವಾಗಲಿ ಅವರು ಗೆಲ್ಲಲು ಸಾಧ್ಯವಾಗಲೇ ಇಲ್ಲ.
ಮಣಿರತ್ನಂ ನಿರ್ದೇಶನದ ಸಿನಿಮಾಗಳು ಎಂದರೆ ಅಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ‘ಥಗ್ ಲೈಫ್’ ಚಿತ್ರದ ಯಾವ ಹಾಡುಗಳು ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿಲ್ಲ. ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಸಾಥ್ ನೀಡಿಲ್ಲ. ಈ ಚಿತ್ರ ಸೋಲಲು ಇದು ಕೂಡ ಒಂದು ಕಾರಣ ಎಂದು ಅನೇಕರು ಬಣ್ಣಿಸಿದ್ದಾರೆ. ಈಗ ರೆಹಮಾನ್ ಅವರು ಸಂಗೀತ ನೀಡುತ್ತಿರುವ ಮುಂದಿನ ಚಿತ್ರವೇ ‘ಪೆದ್ದಿ’. ಈ ಕಾರಣಕ್ಕೆ ರಾಮ್ ಚರಣ್ ಫ್ಯಾನ್ಸ್ಗೆ ಆತಂಕ ಮೂಡಿದೆ.
ಇದನ್ನೂ ಓದಿ: ಒಂದಂಕಿಗೆ ಬಂತು ‘ಥಗ್ ಲೈಫ್’ ಕಲೆಕ್ಷನ್; ಕಮಲ್ ಚಿತ್ರಕ್ಕೆ ಕುಂಟೋಂದೋಂದೆ ಆಯ್ಕೆ
ರಾಮ್ ಚರಣ್ ಕೂಡ ‘ಆರ್ಆರ್ಆರ್’ ಬಳಿಕ ಸಾಲು ಸಾಲು ಸೋಲು ಕಂಡಿದ್ದಾರೆ. ಅವರ ನಟನೆಯ ‘ಆಚಾರ್ಯ’ ಹಾಗೂ ‘ಗೇಮ್ ಚೇಂಜರ್’ ಚಿತ್ರಗಳು ಮಕಾಡೆ ಮಲಗಿವೆ. ಈ ಕಾರಣದಿಂದ ಅವರಿಗೆ ‘ಪೆದ್ದಿ’ ಸಿನಿಮಾ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ರೆಹಮಾನ್ ಅವರು ಕೂಡ ಸಾಥ್ ನೀಡಬೇಕಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








