ರಕ್ಷಿತ್ ಶೆಟ್ಟಿ ಜನ್ಮದಿನ: ನಟನ ಎದುರು ಇರೋ ಪ್ರಶ್ನೆಗೆ ಸಿಗುತ್ತಾ ಉತ್ತರ?
Rakshit Shetty Birthday: ರಕ್ಷಿತ್ ಶೆಟ್ಟಿ ಅವರಿಗೆ ಇಂದು ಹುಟ್ಟುಹಬ್ಬ. ಈ ವೇಳೆ ಅವರ ಅಭಿಮಾನಿಗಳು ಅವರ ಮುಂದಿನ ಚಿತ್ರವಾದ ‘ರಿಚರ್ಡ್ ಆಂಟನಿ ಬಗ್ಗೆ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ‘ರಿಚರ್ಡ್ ಆಂಟನಿ’ ಚಿತ್ರದ ನಿರ್ಮಾಣದಲ್ಲಿನ ವಿಳಂಬ ಮತ್ತು ಹೊಂಬಾಳೆ ಫಿಲ್ಮ್ಸ್‌ನಿಂದ ಹಿಂದೆ ಸರಿದಿರುವ ಸುದ್ದಿಯಿಂದ ಅಭಿಮಾನಿಗಳು ಆತಂಕದಲ್ಲಿದ್ದಾರೆ.

ರಕ್ಷಿತ್ ಶೆಟ್ಟಿ (Rakshit Shetty) ಕನ್ನಡ ಚಿತ್ರರಂಗದ ಶ್ರೇಷ್ಠ ನಟ, ನಿರ್ಮಾಪಕ ಹಾಗೂ ನಿರ್ದೇಶಕ. ಅವರು ಯುವ ಪ್ರತಿಭೆಗಳಿಗೆ ಮಣೆ ಹಾಕುತ್ತಾರೆ. ಅವರ ಗರಡಿಯಲ್ಲಿ ಬೆಳೆದ ಅನೇಕ ನಿರ್ಮಾಪಕರು, ನಿರ್ದೇಶಕರು ಇಂದು ಯಶಸ್ಸು ಕಂಡಿದ್ದಾರೆ. ಅವರು ಪರಿಚಯಿಸಿದ ನಾಯಕಿಯರು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಆದರೆ, ರಕ್ಷಿತ್ ಶೆಟ್ಟಿ ಅವರೇ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಇಂದು (ಜೂನ್ 6) ಅವರಿಗೆ ಬರ್ತ್ಡೇ ಸಂಭ್ರಮ. ಇಂದಾದರೂ ಅವರ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದಿಯೇ ಎಂಬ ಪ್ರಶ್ನೆಯನ್ನು ಫ್ಯಾನ್ಸ್ ಕೇಳುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಓರ್ವ ಯಶಸ್ವಿ ನಟ ಹಾಗೂ ನಿರ್ದೇಶಕ. ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಉಳಿದವರು ಕಂಡಂತೆ’ ಸಿನಿಮಾ ಯಶಸ್ಸು ಪಡೆಯಿತು. ಇದು ಅವರ ನಿರ್ದೇಶನದ ಮೊದಲ ಚಿತ್ರ. ಥಿಯೇಟರ್ನಲ್ಲಿ ಸಿನಿಮಾ ಕಮಾಲ್ ಮಾಡದೇ ಇದ್ದರೂ ಆ ಬಳಿಕ ಎಲ್ಲರಿಂದ ಮೆಚ್ಚುಗೆ ಪಡೆಯಿತು. ನಿರ್ಮಾಪಕರಾಗಿ ಅವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಆದರೆ, ಈಗಾಗಲೇ ಸೆಟ್ಟೇರಬೇಕಿದ್ದ ‘ರಿಚರ್ಡ್ ಆಂಟನಿ’ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.
ರಕ್ಷಿತ್ ಶೆಟ್ಟಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ ಬಿ’ ಚಿತ್ರದಲ್ಲಿ. ಈ ಸಿನಿಮಾದಲ್ಲಿ ಭಗ್ನ ಪ್ರೇಮಿಯಾಗಿ ರಕ್ಷಿತ್ ಕಾಣಿಸಿಕೊಂಡರು. ಎಲ್ಲರನ್ನೂ ಭಾವನೆಗಳ ಅಲೆಯಲ್ಲಿ ಅವರು ತೇಲಿಸಿದರು. ಆ ಬಳಿಕ ರಕ್ಷಿತ್ ಅವರು ‘ರಿಚರ್ಡ್ ಆಂಟನಿ’ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡರು. ‘ಸಪ್ತ..’ ಸಿನಿಮಾ ಬಂದಿದ್ದು 2023ರಲ್ಲಿ. ಎರಡು ವರ್ಷ ಕಳೆದರೂ ಈ ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ‘ರಿಚರ್ಡ್ ಆಂಟನಿ’ ಸಿನಿಮಾನ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಬೇಕಿದೆ. ಆದರೆ, ಈ ಸಂಸ್ಥೆ ನಿರ್ಮಾಣದಿಂದ ಹಿಂದೆ ಸರಿದಿದೆ ಎನ್ನುವ ಮಾತು ಗಾಂಧಿ ನಗರದ ಅಂಗಳದಲ್ಲಿ ಇದೆ. ಆದರೆ, ಇದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ.
ಇದನ್ನೂ ಓದಿ: ಪ್ರಾಣಿಗಳನ್ನು ಕಂಡರೆ ಇಷ್ಟಪಡುತ್ತಿರಲಿಲ್ಲ ರಕ್ಷಿತ್ ಶೆಟ್ಟಿ; ನಂತರ ಆಗಿದ್ದೇ ಬೇರೆ
ಇಂದು ರಕ್ಷಿತ್ ಬರ್ತ್ಡೇ ಪ್ರಯುಕ್ತ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ರಕ್ಷಿತ್ ಅವರು ಸದ್ಯ ತಮ್ಮ ಹುಟ್ಟೂರಾದ ಉಡುಪಿಯಲ್ಲಿ ವಾಸವಾಗಿದ್ದು, ಅಲ್ಲಿ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:40 am, Fri, 6 June 25








