‘ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು’; ಶಿವಣ್ಣ ಭಾವುಕ ಪೋಸ್ಟ್
ಬೆಂಗಳೂರಿನಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. ಶಿವರಾಜ್ ಕುಮಾರ್, ರಕ್ಷಿತಾ ಪ್ರೇಮ್, ನಿಶ್ವಿಕಾ ನಾಯ್ಡು ಮತ್ತು ಕಮಲ್ ಹಾಸನ್ ಸೇರಿದಂತೆ ಅನೇಕರು ಈ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾಗಿರುವ ಜನರು ಸರ್ಕಾರವನ್ನು ದೂಷಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. ಆರ್‌ಸಿಬಿ ಗೆಲುವಿನ ಖುಷಿಯಲ್ಲಿದ್ದ ಅಭಿಮಾನಿಗಳು ಅಸುನೀಗಿದ್ದು ನಿಜಕ್ಕೂ ಶಾಕಿಂಗ್ ಸಂಗತಿ. ಈ ಘಟನೆ ಬಗ್ಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ನಟ ಶಿವರಾಜ್ಕುಮಾರ್ (Shivarajkumar), ನಟಿ ರಕ್ಷಿತಾ ಪ್ರೇಮ್, ನಿಶ್ವಿಕಾ ನಾಯ್ಡು ಸೇರಿದಂತೆ ಅನೇಕರು ಘಟನೆಯ ಬಗ್ಗೆ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.
‘ಗೆಲುವಿನ ಸಂಭ್ರಮಕ್ಕೆ ಸಾವಿನ ಸೂತಕ ತುಂಬಾ ನೋವಿನ ಸಂಗತಿ. ನೊಂದ ಕುಟುಂಬಸ್ಥರಿಗೆ ಆ ದೇವರು ಈ ನೋವನ್ನು ಭರಿಸುವ ಶಕ್ತಿ ಕೊಡಲಿ. ಸರ್ಕಾರ ಮೃತಪಟ್ಟವರಿಗೆ ನೆರವಾಗಿ ನಿಲ್ಲಲ್ಲಿ ಎಂದು ಪ್ರಾರ್ಥಿಸುತ್ತೇವೆ. ನಾನು ಇಂದಿಗೂ ಹೇಳೋದು ಒಂದೇ, ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು. ನಿಮ್ಮ ಅಭಿಮಾನ, ನಿಮ್ಮ ಪ್ರೀತಿ ಎಲ್ಲರನ್ನು ಕಾಪಾಡುತ್ತದೆ. ನಿಮ್ಮ ಕುಟುಂಬದವರನ್ನು ನೀವು ಮಾತ್ರ ಕಾಪಾಡಲು ಸಾಧ್ಯ. ಓಂ ಶಾಂತಿ’ ಎಂದು ಶಿವಣ್ಣ ಪೋಸ್ಟ್ ಮಾಡಿದ್ದಾರೆ.
‘ಅಮಾಯಕ ಜೀವಗಳು ಬಲಿಯಾಗಿವೆ. ಸುದ್ದಿ ವಾಹಿನಿಗಳಲ್ಲಿ ಕಾರ್ಯಕ್ರಮ ಲೈವ್ ವೀಕ್ಷಣೆಗೆ ಅವಕಾಶ ಇತ್ತು. ಅಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದಿತ್ತು. ಮನೆಯಲ್ಲೇ ಇರಿ. ವಿಧಾನಸೌಧದಲ್ಲಿ ಕಾರ್ಯಕ್ರಮ ಸಂಘಟಿತವಾಗಿ ನಡೆದಿಲ್ಲ. ಇದೊಂದು ರಾಜಕೀಯ ಕಾರ್ಯಕ್ರಮದ ರೀತಿ ಇತ್ತು’ ಎಂದು ಅಸಮಧಾನ ಹೊರಹಾಕಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಕೂಡ ಘಟನೆಯಿಂದ ಶಾಕ್ಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಬೆಂಗಳೂರಿಗರ ನೆನೆದು ಮರುಗಿದ ಕಮಲ್ ಹಾಸನ್
ಕಮಲ್ ಹಾಸನ್ ಕೂಡ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ದುರಂತ ನಡೆದಿದೆ. ಈ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ. ಈ ದುಃಖದ ಕ್ಷಣದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ನಾನು ಮಿಡಿಯುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ’ ಎಂದು ಕಮಲ್ ಹಾಸನ್ ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Thu, 5 June 25








