ರಾಮನಗರದಲ್ಲಿ ಶೂಟ್ ಆದ ಅಮಿತಾಭ್ ‘ಶೋಲೆ’ಗೆ 50 ವರ್ಷ; ಮಾಡಿದ ದಾಖಲೆಗಳು ಒಂದೆರಡಲ್ಲ
1975ರ ಆಗಸ್ಟ್ 15ರಂದು ಬಿಡುಗಡೆಯಾದ ಶೋಲೆ ಚಿತ್ರ 50 ವರ್ಷ ಪೂರ್ಣಗೊಳಿಸುತ್ತಿದೆ. ರಾಮನಗರದಲ್ಲಿ ಚಿತ್ರೀಕರಣಗೊಂಡ ಈ ಚಿತ್ರ ಅಮಿತಾಭ್ ಬಚ್ಚನ್ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು. 24 ಕೋಟಿ ರೂಪಾಯಿ ಬಜೆಟ್‌ನ ಈ ಚಿತ್ರ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿ ಅತಿ ಹೆಚ್ಚು ವೀಕ್ಷಣೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಅದು 1975ರ ಆಗಸ್ಟ್ 15. ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ (Amitabh Bachchan), ಸಂಜೀವ್ ಕುಮಾರ್, ಹೇಮಾ ಮಾಲಿನಿ, ಧರ್ಮೇಂದ್ರ, ಜಯಾ ಬಚ್ಚನ್, ಅಮ್ಜದ್ ಖಾನ್ ನಟನೆಯ ‘ಶೋಲೆ’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾ ಮೊದಲ ಎರಡು ವಾರ ಸಾಮಾನ್ಯ ಪ್ರದರ್ಶನ ಕಂಡಿತು. ಆದರೆ, ಚಿತ್ರಕ್ಕೆ ಸಿಕ್ಕ ಮಾತಿನ ಪ್ರಚಾರದಿಂದ ಮೂರನೇ ವಾರ ಎನ್ನುವಾಗ ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲಾ ಸೂಚನೆ ಪಡೆಯಿತು. ಈ ಚಿತ್ರ ಈಗ 50 ವರ್ಷ ಪೂರ್ಣಗೊಳಿಸುವ ಹಂತದಲ್ಲಿ ಇದೆ.
‘ಶೋಲೆ’ ಚಿತ್ರವನ್ನು ಕರ್ನಾಟಕದ ರಾಮನಗರದಲ್ಲಿ ಶೂಟ್ ಮಾಡಲಾಯಿತು. ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟ್ ಆದ ಬೆಟ್ಟಕ್ಕೆ ‘ಶೋಲೆ ಬೆಟ್ಟ’ ಎನ್ನುವ ಹೆಸರನ್ನೇ ಇಡಲಾಗಿದೆ ಅನ್ನೋದು ವಿಶೇಷ. ಈ ಸಿನಿಮಾಗೆ ಸಲ್ಮಾನ್ ಖಾನ್ ತಂದೆ ಸಲೀಮ್ ಹಾಗೂ ಕಥೆಬರಹಗಾರ ಜಾವೇದ್ ಅಖ್ತರ್ ಅವರು ಕಥೆಯನ್ನು ಬರೆದಿದ್ದರು. ರಮೇಶ್ ಸಿಪ್ಪಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದರು. 50ನೇ ವರ್ಷದ ಸಂಭ್ರಮಾಚರಣೆ ವೇಳೆ ಸಿನಿಮಾ ಮತ್ತೆ ರೀ-ರಿಲೀಸ್ ಆಗುವ ಸಾಧ್ಯತೆ ಇದೆ. ಈ ಸಿನಿಮಾ ಮಾಡಿದ ದಾಖಲೆ ಬಗ್ಗೆ ಇಲ್ಲಿದೆ ಮಾಹಿತಿ.
- ‘ಶೋಲೆ’ ಚಿತ್ರ ಅಮಿತಾಭ್ ಬಚ್ಚನ್ ಅವರ ವೃತ್ತಿ ಜೀವನವನ್ನೇ ಸಂಪೂರ್ಣವಾಗಿ ಬದಲಿಸಿಬಿಟ್ಟಿತು. ಈ ಚಿತ್ರದ ಎಲ್ಲಾ ಕಲಾವಿದರು ಭರ್ಜರಿ ಮೈಲೇಜ್ ಪಡೆದರು.
- ‘ಶೋಲೆ’ ಸಿನಿಮಾಗೆ ಈ ಮೊದಲು 25 ವರ್ಷ ತುಂಬಿದಾಗ ಸಿಲ್ವರ್ ಜುಬ್ಲಿ ಆಚರಿಸಲಾಯಿತು. ಈ ವೇಳೆ 100ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಇದನ್ನು ಸಂಭ್ರಮಿಸಲಾಯಿತು.
- ಮುಂಬೈನ ಮಿನರ್ವಾ ಥಿಯೇಟರ್ನಲ್ಲಿ ಈ ಚಿತ್ರ 5 ವರ್ಷಕ್ಕೂ ಅಧಿಕ ಕಾಲ ಪ್ರದರ್ಶನ ಕಂಡಿತು. ಅತಿ ದೀರ್ಘ ಕಾಲ (286 ವಾರ) ಪ್ರದರ್ಶನ ಕಂಡ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ಇತ್ತು. ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’ (2001) ಸಿನಿಮಾ ಇದನ್ನು ಬ್ರೇಕ್ ಮಾಡಿತು.
- ಈ ಚಿತ್ರ ಅಂದಿನ ಕಾಲಕ್ಕೆ 24 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿತ್ತು. ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿದೆ.
- ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಎಂಬ ಖ್ಯಾತಿ ಇದಕ್ಕೆ ಸಿಕ್ಕಿದೆ. ಏಕೆಂದರೆ ರಿಲೀಸ್ ಹಾಗೂ ರೀ-ರಿಲೀಸ್ ಸೇರಿ (1985ರವರೆಗೆ ಮಾತ್ರ) ಈ ಸಿನಿಮಾಗೆ ಈವರೆಗೆ ಥಿಯೇಟರ್ನಲ್ಲಿ 25 ಕೋಟಿ ಟಿಕೆಟ್ ಮಾರಾಟ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:59 am, Mon, 9 June 25








