‘ಥಗ್ ಲೈಫ್’ ಬಾಕ್ಸ್ ಆಫೀಸ್ನಲ್ಲಿ ಸೋಲು, ಒಟಿಟಿ ಬಿಡುಗಡೆಯೂ ಇಕ್ಕಟ್ಟಿನಲ್ಲಿ
Kamal Haasan: ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಚಿತ್ರಮಂದಿರದಲ್ಲಿ ಅಟ್ಟರ್ ಫ್ಲಾಪ್ ಎನಿಸಿಕೊಂಡಿದೆ. ಸಿನಿಮಾ ನೋಡಿದ ಯಾವೊಬ್ಬರೂ ಸಹ ಒಂದೊಳ್ಳೆ ಮಾತನ್ನು ಸಿನಿಮಾ ಬಗ್ಗೆ ಆಡಿಲ್ಲ. ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ ಮಖಾಡೆ ಮಲಗಿರುವ ‘ಥಗ್ ಲೈಫ್’ ಸಿನಿಮಾದ ಒಟಿಟಿ ಬಿಡುಗಡೆ ಭವಿಷ್ಯವೂ ಸಂಕಷ್ಟದಲ್ಲಿದೆ. ಸಿನಿಮಾದ ಡಿಜಿಟಲ್ ಹಕ್ಕು ಖರೀದಿ ಮಾಡಿರುವ ಒಟಿಟಿ, ಒಪ್ಪಂದದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಸಿನಿಮಾ ವಿವಾದದಿಂದ ಸುದ್ದಿಯಾಯ್ತೆ ವಿನಃ ಚಿತ್ರಮಂದಿರಗಳಲ್ಲಿ ಸದ್ದು ಮಾಡಲಿಲ್ಲ. ಸಿನಿಮಾ ಬಿಡುಗಡೆ ಆದ ಮೊದಲ ದಿನದಿಂದಲೂ ಸಿನಿಮಾ ನೋಡಿದ ಒಬ್ಬರೂ ಸಹ ಒಳ್ಳೆಯ ಮಾತುಗಳನ್ನು ಹೆಳಿಲ್ಲ. ಮೊದಲ ಶೋ ಪ್ರದರ್ಶನದ ಬಳಿಕವೇ ಇದೊಂದು ಕೆಟ್ಟ ಸಿನಿಮಾ ಎಂದು ಬ್ರ್ಯಾಂಡ್ ಆಯಿತು ‘ಥಗ್ ಲೈಫ್’. ಬಾಕ್ಸ್ ಆಫೀಸ್ ಕಲೆಕ್ಷನ್ ಅಂತೂ ನಿರ್ಮಾಪಕರಿಗೆ ತೀರಾ ನಿರಾಸೆ ಮೂಡಿಸಿದೆ. ಚಿತ್ರಮಂದಿರಗಳಲ್ಲಿ ಅಟ್ಟರ್ ಫ್ಲಾಪ್ ಆದ ಸಿನಿಮಾಕ್ಕೆ ಈಗ ಒಟಿಟಿಯಲ್ಲಿಯೂ ಸಮಸ್ಯೆ ಎದುರಾಗಿದೆ.
‘ಥಗ್ ಲೈಫ್’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಕ್ಕೆ ಮುಂಚೆಯೇ ನೆಟ್ಫ್ಲಿಕ್ಸ್ಗೆ ಮಾರಾಟವಾಗಿತ್ತು. ಆದರೆ ಈಗ ಸಿನಿಮಾದ ಒಟಿಟಿ ಬಿಡುಗಡೆಗೆ ಸಮಸ್ಯೆ ಎದುರಾಗಿದೆ. ಸಿನಿಮಾದ ಬಿಡುಗಡೆ ಆಧಾರದ ಮೇಲೆ ಒಟಿಟಿ ಜೊತೆಗೆ ‘ಥಗ್ ಲೈಫ್’ ಸಿನಿಮಾ ಒಪ್ಪಂದ ಮಾಡಿಕೊಂಡಿತ್ತಂತೆ. ಅಂದರೆ ನಾಲ್ಕು ವಾರಕ್ಕೆ ಬಿಡುಗಡೆ ಮಾಡಿದರೆ ಭಾರಿ ದೊಡ್ಡ ಮೊತ್ತ, ಎಂಟು ವಾರಕ್ಕಾದರೆ ತುಸು ಕಡಿಮೆ ಹೀಗೆ.
ಈ ಮೊದಲು ‘ಥಗ್ ಲೈಫ್’ ಸಿನಿಮಾ ಎಂಟು ವಾರಕ್ಕೆ ನೆಟ್ಫ್ಲಿಕ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿರುವ ಕಾರಣ ಇದೀಗ ಸಿನಿಮಾ ಅನ್ನು ನಾಲ್ಕೇ ವಾರಕ್ಕೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಮಾಡಿ ಒಟಿಟಿಯಿಂದ ಹೆಚ್ಚಿನ ಹಣವನ್ನು ಪಡೆಯುವ ಪ್ರಯತ್ನದಲ್ಲಿ ಸಿನಿಮಾದ ನಿರ್ಮಾಪಕರು ಇದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ‘ಥಗ್ ಲೈಫ್’ ಸಿನಿಮಾ ವಿತರಣೆ ಮಾಡಿದ್ದ ವಿತರಕರು ಹಣ ವಾಪಸ್ ಮರಳಿಸುವಂತೆ ಮನವಿ ಮಾಡಿರುವುದು.
ಇದನ್ನೂ ಓದಿ:‘ಥಗ್ ಲೈಫ್’ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್ಗೆ ಹಿನ್ನಡೆ
ಆದರೆ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಹೀನಾಯ ಸೋಲು ಕಂಡಿರುವುದು ಗಮನಿಸಿರುವ ನೆಟ್ಫ್ಲಿಕ್ಸ್, ಸಿನಿಮಾಕ್ಕೆ ದೊಡ್ಡ ಮೊತ್ತ ನೀಡಲು ನಿರಾಕರಿಸಿರುವುದು ಮಾತ್ರವೇ ಅಲ್ಲದೆ. ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದಿಂದಲೂ ಹಿಂದೆ ಸರಿಯಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಕೆಲ ಮೂಲಗಳ ಪ್ರಕಾರ, ‘ಥಗ್ ಲೈಫ್’ ಸಿನಿಮಾ ನೆಟ್ಫ್ಲಿಕ್ಸ್ ಜೊತೆಗೆ 100 ಕೋಟಿ ರೂಪಾಯಿಯ ಒಪ್ಪಂದ ಮಾಡಿಕೊಂಡಿತ್ತಂತೆ. ಈಗ ನಾಲ್ಕೇ ವಾರಕ್ಕೆ ನೆಟ್ಫ್ಲಿಕ್ಸ್ಗೆ ಸಿನಿಮಾ ಬಿಡುಗಡೆ ಮಾಡಿ ಇನ್ನೂ ದೊಡ್ಡ ಮೊತ್ತವನ್ನು ನೆಟ್ಫ್ಲಿಕ್ಸ್ನಿಂದ ಪಡೆಯುವ ಯೋಚನೆಯಲ್ಲಿದೆ ಚಿತ್ರತಂಡ.
‘ಥಗ್ ಲೈಫ್’ ಸಿನಿಮಾನಲ್ಲಿ ಕಮಲ್ ಹಾಸನ್, ಸಿಂಬು, ತ್ರಿಷಾ, ಅಭಿರಾಮಿ ಅವರುಗಳು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಮಣಿರತ್ನಂ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾದ ಪ್ರಚಾರ ಸಮಯದಲ್ಲಿ ಕಮಲ್ ಹಾಸನ್ ಕನ್ನಡ ಭಾಷೆಯ ಉಗಮದ ಬಗ್ಗೆ ಆಡಿರುವ ಮಾತುಗಳು ವಿವಾದವಾಗಿ ಪರಿಣಮಿಸಿದ ಪರಿಣಾಮ, ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಆಗಲಿಲ್ಲ. ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿದರೆ, ಥಗ್ ಲೈಫ್ ಇಲ್ಲಿ ಬಿಡುಗಡೆ ಆಗದೇ ಇದ್ದಿದ್ದು ಒಳಿತೇ ಆಯಿತು ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Tue, 10 June 25