ನವದೆಹಲಿ: ಸಂಸತ್ನಲ್ಲಿ ಇಂದು (ಫೆ.1) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) 5ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣ ಬಜೆಟ್ (Union Budget 2023) ಮಂಡನೆಯಾಗಲಿದೆ. ಬಜೆಟ್ ಮಂಡನೆ ಸಮಯ, ಎಲ್ಲಿ ವೀಕ್ಷಿಸಬಹುದು, ಜನರ ನಿರೀಕ್ಷೆಗಳೇನು ಹಾಗೂ ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇಂದು (ಫೆ. 1) 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಿಗ್ಗೆ 11 ಗಂಟೆಗೆ ಸಂಸತ್ನಲ್ಲಿ ಬಜೆಟ್ ಮಂಡನೆ ಆರಂಭಿಸಲಿದ್ದಾರೆ. ಈ ಹಿಂದೆ 2022ರಲ್ಲಿ ಅವರು ಸುಮಾರು 1.5 ಗಂಟೆ ಕಾಲ ಬಜೆಟ್ ಮಂಡನೆ ಮಾಡಿದ್ದರು. 2021ರಲ್ಲಿ 2 ಗಂಟೆ 40 ನಿಮಿಷಗಳ ಕಾಲ ಅವರು ಬಜೆಟ್ ಮಂಡನೆ ಮಾಡಿದ್ದು, ದೇಶದ ಇತಿಹಾಸದಲ್ಲಿಯೇ ಸುದೀರ್ಘ ಬಜೆಟ್ ಎಂದು ಪರಿಗಣಿಸಲ್ಪಟ್ಟಿದೆ.
ಲೋಕಸಭಾ ಟಿವಿ, ರಾಜ್ಯಸಭಾಟಿವಿ, ದೂರದರ್ಶನ (ಡಿಡಿ ನ್ಯೂಸ್) ಹಾಗೂ ಇತರ ಸುದ್ದಿ ವಾಹಿನಿಗಳಲ್ಲಿ ಬಜೆಟ್ ಮಂಡನೆ ಸಂಸದ್ ಟಿವಿ ಮತ್ತು ಸಂಸತ್ನ ಟ್ವಿಟರ್ ಖಾತೆಗಳಲ್ಲಿಯೂ ಬಜೆಟ್ ಮಂಡನೆಯ ನೇರ ಪ್ರಸಾರ ದೊರೆಯಲಿದೆ. ದೂರದರ್ಶನ ಮತ್ತು ಲೋಕಸಭೆಯ ಅಧಿಕೃತ ಯೂಟ್ಯೂಬ್ ಚಾನೆಲ್ಗಳಲ್ಲೂ ಬಜೆಟ್ ನೇರ ಪ್ರಸಾರ ಲಭ್ಯವಾಗಲಿದೆ.
ಸಂಸತ್ನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭಗೊಳ್ಳಲಿದ್ದು ಏಪ್ರಿಲ್ 6ರ ವರೆಗೆ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರ ವರೆಗೆ ಬಜೆಟ್ ಅಧಿವೇಶನಕ್ಕೆ ಬಿಡುವು ಇರಲಿದೆ. ಈ ಅವಧಿಯಲ್ಲಿ ಸಂಸದೀಯ ಸ್ಥಾಯಿ ಸಮಿತಿಗಳು ಅನುದಾನದ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಿವೆ. ವಿವಿಧ ಸಚಿವಾಲಯಗಳು ಮತ್ತು ಅವುಗಳ ಇಲಾಖೆಗಳಿಗೆ ಸಂಬಂಧಿಸಿದ ವರದಿಗಳನ್ನು ಕೂಡ ಸಿದ್ಧಪಡಿಸಲಿವೆ. ಜನವರಿ 31ರಂದು ಹಣಕಾಸು ಸಚಿವರು ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಈ ವರ್ಷ ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆ ಚುನಾವಣಾ ರಾಜ್ಯಗಳಿಗೆ ಹಲವು ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಹೆಚ್ಚಿನ ನಿರೀಕ್ಷೆ ಇದ್ದು, ಜನತೆ ಕೇಂದ್ರದ ಪೂರ್ಣ ಪ್ರಮಾಣದ ಬಜೆಟ್ ಮೇಲೆ ನಿರೀಕ್ಷೆ ಹೊಂದಿದ್ದಾರೆ. ಎಂದಿನಂತೆ ಮಧ್ಯಮ ವರ್ಗದ ಜನತೆ ತೆರಿಗೆ ವಿನಾಯಿತಿಗೆ ಕಾಯುತ್ತಿದ್ದಾರೆ.
ಬಜೆಟ್ ಸಂಬಂಧಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:46 am, Wed, 1 February 23