ನವದೆಹಲಿ, ಫೆಬ್ರವರಿ 1: ಸುಮಾರು 40 ಸಾವಿರ ಬೋಗಿಗಳನ್ನು ವಂದೇ ಭಾರತ್ ರೈಲಿನ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಘೋಷಣೆ ಮಾಡಿದರು. ಕೇಂದ್ರ ಮಧ್ಯಂತರ ಬಜೆಟ್ (Union Budget 2024) ಮಂಡನೆ ಮಾಡಿದ ಅವರು, ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲ ವೃದ್ಧಿಸುವುದಕ್ಕಾಗಿ ಸಾಮಾನ್ಯ ಕೋಚ್ಗಳನ್ನು ವಂದೇ ಭಾರತ್ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಹೊಸ ಹಣಕಾಸು ವರ್ಷಕ್ಕೆ ರೈಲ್ವೆ ಇಲಾಖೆಗೆ 2.55 ಲಕ್ಷ ಕೋಟಿ ಅನುದಾನ ಘೋಷಣೆ ಮಾಡಲಾಗಿದೆ.
ರೈಲ್ವೆ ಇಲಾಖೆಗೆ ಇಂಧನ, ಖನಿಜ, ಸಿಮೆಂಟ್ ಕಾರಿಡಾರ್, ಬಂದರು ಸಂಪರ್ಕ ಕಾರಿಡಾರ್ ಮತ್ತು ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್ ಅನ್ನು ಹಣಕಾಸು ಸಚಿವರು ಘೋಷಣೆ ಮಾಡಿದ್ದಾರೆ. ಪಿಎಂ ಗತಿಶಕ್ತಿ ಯೋಜನೆಯಡಿ ಈ ಕಾರಿಡಾರ್ಗಳು ಸಾಕಾರಗೊಳ್ಳಲಿದ್ದು, ಬಹು ವಿಧದ ಸಂಪರ್ಕಕ್ಕೆ ನೆರವಾಗಲಿದೆ. ಈ ಕಾರಿಡಾರ್ಗಳು ವೆಚ್ಚದಲ್ಲಿ ಗಮನಾರ್ಹ ಕಡಿತ ಮಾಡಲು ನೆರವಾಗುವುದರ ಜತೆಗೆ ದಕ್ಷತೆ ಸುಧಾರಣೆಗೆ ನೆರವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಪ್ರಯಾಣಿಕರ ಸುರಕ್ಷತೆ, ರೈಲುಗಳ ಸಂಚಾರದ ವೇಗ ವೃದ್ಧಿಗೆ ಕೂಡ ಹೊಸ ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಕಳೆದ ವರ್ಷ 5,200 ಕಿಲೋಮೀಟರ್ನಷ್ಟು ಹೊಸ ಹಳಿಗಳ ನಿರ್ಮಾಣ ಮಾಡಲಾಗಿದೆ. ಈಗ, ಪ್ರತಿ ದಿನ 15 ಕಿಲೋಮೀಟರ್ನಷ್ಟು ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. 2.4 ಲಕ್ಷ ಕೋಟಿ ಅನುದಾನದಲ್ಲಿ ಶೇ 77ರಷ್ಟು ಬಳಸಿಕೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಇನ್ನೂ 2 ಕೋಟಿ ಮನೆ: ನಿರ್ಮಲಾ ಸೀತಾರಾಮನ್ ಘೋಷಣೆ
ಅಪಘಾತದ ವೇಳೆ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದ ಕವಚ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳೂ ಉತ್ಸಾಹ ಪ್ರದರ್ಶಿಸಿವೆ. ಕವಚ ತಂತ್ರಜ್ಞಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತರ ಅಮೆರಿಕ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಕೂಡ ಅವಕಾಶಗಳು ಸಿಗುತ್ತಿವೆ ಎಂದು ಸಚಿವರು ಹೇಳಿದ್ದಾರೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Thu, 1 February 24