ನವದೆಹಲಿ, ಜನವರಿ 16: ಕೇಂದ್ರ ಸರ್ಕಾರ ವೇತನ ಆಯೋಗ ವ್ಯವಸ್ಥೆಗೆ ತಿಲಾಂಜಲಿ ಹಾಡಲಿದೆ. ವೇತನ ಪರಿಷ್ಕರಣೆಗೆ ಹೊಸ ವ್ಯವಸ್ಥೆ ರೂಪಿಸಲಿದೆ ಎಂದು ದಟ್ಟವಾಗಿ ಹಬ್ಬಿದ್ದ ಸುದ್ದಿಗೆ ತೆರೆ ಬಿದ್ದಿದೆ. 8ನೇ ವೇತನ ಆಯೋಗ ರಚನೆಗೆ ಕೇಂದ್ರ ಸಂಪುಟ ಇಂದು ಗುರುವಾರ ಅಸ್ತು ನೀಡಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಡಾ. ಎ ವೈಷ್ಣವ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರಿ ಉದ್ಯೋಗಿಗಳ ವಿವಿಧ ಸಂಘಟನೆಗಳು ಮಾಡುತ್ತಾ ಬಂದಿದ್ದ ಒತ್ತಾಯಗಳಿಗೆ ಸರ್ಕಾರ ಬಗ್ಗಿದೆ.
ಪ್ರಸಕ್ತ ಚಾಲ್ತಿಯಲ್ಲಿರುವ 7ನೇ ವೇತನ ಆಯೋಗದ ಶಿಫಾರಸುಗಳು 2025ರ ಡಿಸೆಂಬರ್ 31ರವರೆಗೂ ಇರುತ್ತದೆ. ಪ್ರತೀ ವೇತನ ಆಯೋಗದ ಅವಧಿ 10 ವರ್ಷಗಳವರೆಗೆ ಇರುತ್ತದೆ. ಇನ್ನೊಂದು ವರ್ಷದೊಳಗೆ 8ನೆ ವೇತನ ಆಯೋಗ ರಚನೆಯಾಗಿ ಅದರ ಶಿಫಾರಸುಗಳು ಸಿದ್ಧವಿರಬೇಕು. ಒಂದೆರಡು ವರ್ಷ ಹಿಂದೆಯೇ ಸರ್ಕಾರ ವೇತನ ಆಯೋಗ ರಚನೆ ಮಾಡಬೇಕಿತ್ತು ಎಂಬ ವಾದವಿದೆ. ಆದರೆ, ಸರ್ಕಾರವು ವೇತನ ಆಯೋಗದ ಅವಧಿ ಮಿತಿಗೆ ಒಳಪಡುವ ಅಗತ್ಯ ಇಲ್ಲ ಎಂದು ಹೇಳುತ್ತಲೇ ಬಂದಿತ್ತು. ಇದೀಗ ಆಯೋಗ ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಗಮನಾರ್ಹ ಸಂಗತಿ ಎನಿಸಿದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ, ಇಸ್ರೋದಿಂದ ಸ್ಪೇಸ್ ಡಾಕಿಂಗ್ ಪ್ರಯೋಗ ಯಶಸ್ವಿ
ಬಜೆಟ್ಗೆ ಮುನ್ನ ಈ ಬೆಳವಣಿಗೆ ನಡೆದಿದೆ. ಆದರೆ, ಯಾವಾಗ ಈ ಆಯೋಗ ರಚನೆ ಆಗುತ್ತದೆ ಎಂಬುದು ನಿರ್ಧಾರವಾಗಿಲ್ಲ. ಹೊಸ ಆಯೋಗಕ್ಕೆ ವರದಿ ಸಿದ್ಧಪಡಿಸಲು ಎಷ್ಟು ಕಾಲಾವಕಾಶ ಇರುತ್ತದೆ, 2026ರ ಜನವರಿಯಿಂದಲೇ ಹೊಸ ಆಯೋಗದ ಶಿಫಾರಸುಗಳು ಜಾರಿಯಾಗುತ್ತದಾ, ಅಥವಾ 2026ರ ಅಂತ್ಯದವರೆಗೂ 7ನೇ ವೇತನ ಆಯೋಗದ ಶಿಫಾರಸುಗಳೇ ಚಾಲನೆಯಲ್ಲಿರುತ್ತವಾ, ಇವೇ ಮುಂತಾದ ಅನುಮಾನಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.
ಎಂಟನೇ ವೇತನ ಆಯೋಗ ಸ್ಥಾಪನೆಯಾದರೆ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಗಮನಾರ್ಹ ಹೆಚ್ಚಳವಾಗಬಹುದು. ವೇತನ ನಿರ್ಧಾರದ ಪ್ರಮುಖ ಅಂಶವಾದ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಹೆಚ್ಚಿಸಬಹುದು. 7ನೇ ವೇತನ ಆಯೋಗದಲ್ಲಿ ಫಿಟ್ಮೆಂಟ್ ಫ್ಯಾಕ್ಟರ್ 2.57 ಇದೆ. ಇದನ್ನು 2.86ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಇದೇನಾದರೂ ಒಪ್ಪಿಗೆ ಪಡೆದಲ್ಲಿ ಸರ್ಕಾರಿ ನೌಕರರ ಕನಿಷ್ಠ ಸಂಬಳದಲ್ಲಿ ಬರೋಬ್ಬರಿ 186 ಪ್ರತಿಶತದಷ್ಟು ಏರಿಕೆ ಆಗಬಹುದು.
ಇದನ್ನೂ ಓದಿ: ಭಾರತದ ಆರ್ಥಿಕತೆ ಮುಂದಿನ ವರ್ಷದೊಳಗೆ 4ನೇ ಸ್ಥಾನಕ್ಕೇರಲಿದೆ: ಪಿಎಚ್ಡಿಸಿಸಿಐ ನಿರೀಕ್ಷೆ
ಸದ್ಯ ಕನಿಷ್ಠ ಸಂಬಳ 18,000 ರೂ ಇದೆ. 2.86ರ ಫಿಟ್ಮೆಂಟ್ ಫ್ಯಾಕ್ಟರ್ನಿಂದ ಕನಿಷ್ಠ ಸಂಬಳವು 51,480 ರೂ ಆಗುತ್ತದೆ. ಕನಿಷ್ಠ ಪಿಂಚಣಿಯೂ ಕೂಡ 9,000 ರೂನಿಂದ 25,740 ರೂಗೆ ಹೆಚ್ಚಬಹುದು. ಇದೇ 8ನೇ ವೇತನ ಆಯೋಗದ ಶಿಫಾರಸುಗಳು ವಿವಿಧ ರಾಜ್ಯ ಸರ್ಕಾರಗಳು ತಮ್ಮ ನೌಕರರ ವೇತನ ಪರಿಷ್ಕರಣೆಗೆ ಬಳಸಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ