ನವದೆಹಲಿ, ಜನವರಿ 16: ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ತೆರಿಗೆ ಹೊರೆ ಇಳಿಸುವ ಸಾಧ್ಯತೆ ಇದೆ. ರಾಯ್ಟರ್ಸ್ ಸುದ್ದಿಸಂಸ್ಥೆಯ ವರದಿ ಪ್ರಕಾರ, ಫೆಬ್ರುವರಿಯ ಬಜೆಟ್ನಲ್ಲಿ 15 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ಪ್ರಮಾಣದಲ್ಲಿ ಇಳಿಕೆ ಆಗಬಹುದು ಎನ್ನಲಾಗಿದೆ. ಇಬ್ಬರು ಸರ್ಕಾರಿ ಮೂಲಗಳಿಂದ ಈ ಮಾಹಿತಿ ತನಗೆ ಸಿಕ್ಕಿರುವುದಾಗಿ ಈ ವರದಿಯಲ್ಲಿ ಹೇಳಲಾಗಿದೆ. ಆದರೆ, ಎಷ್ಟು ತೆರಿಗೆ ಕಡಿತ ಮಾಡಲಾಗುತ್ತದೆ ಎಂಬುದರ ವಿವರ ಇಲ್ಲ.
ಸದ್ಯ ಎರಡು ಇನ್ಕಮ್ ಟ್ಯಾಕ್ಸ್ ಸಿಸ್ಟಂಗಳಿವೆ. ಹಳೆಯ ತೆರಿಗೆ ಪದ್ಧತಿ ಮತ್ತು 2020ರಲ್ಲಿ ಜಾರಿಗೆ ತರಲಾದ ಹೊಸ ತೆರಿಗೆ ಪದ್ಧತಿ. ಹಳೆಯ ಸಿಸ್ಟಂನಲ್ಲಿ ಸಾಕಷ್ಟು ಟ್ಯಾಕ್ಸ್ ಎಕ್ಸೆಂಪ್ಷನ್ಗಳಿವೆ. ಹೀಗಾಗಿ, ಹೆಚ್ಚಿನ ಆದಾಯ ತೆರಿಗೆ ಪಾವತಿದಾರರು ಇನ್ನೂ ಕೂಡ ಓಲ್ಡ್ ಟ್ಯಾಕ್ಸ್ ಸಿಸ್ಟಂ ಅನ್ನೇ ಬಳಸುತ್ತಿದ್ದಾರೆ. ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ ತೆರಿಗೆ ದರ ಕಡಿಮೆ ಇದ್ದರೂ ಟ್ಯಾಕ್ಸ್ ಎಕ್ಸೆಂಪ್ಷನ್ಗಳೂ ಬಹಳ ಕಡಿಮೆ ಇದೆ.
ಇದನ್ನೂ ಓದಿ: ಹಿಂಡನ್ಬರ್ಗ್ ರಿಸರ್ಚ್ ಬಂದ್; ಅದಾನಿ ಸಾಮ್ರಾಜ್ಯ ಅಲುಗಾಡಿಸಿದ್ದ ಅಮೆರಿಕದ ಶಾರ್ಟ್ಸೆಲ್ಲರ್ ಸಂಸ್ಥೆ ಮುಚ್ಚಿದ್ದು ಯಾಕೆ?
ಮೂಲಗಳ ಪ್ರಕಾರ, ಸರ್ಕಾರವು ಹೊಸ ಟ್ಯಾಕ್ಸ್ ಸಿಸ್ಟಂ ಅನ್ನು ಇನ್ನಷ್ಟು ಆಕರ್ಷಕವಾಗಿಸಿ, ತೆರಿಗೆ ಪಾವತಿದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಇರಾದೆ ಹೊಂದಿದೆ. ಹೀಗಾಗಿ, ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳನ್ನು ಇನ್ನಷ್ಟು ಕಡಿಮೆ ಮಾಡಬಹುದು ಎನ್ನಲಾಗಿದೆ.
ಸದ್ಯ ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಎರಡೂವರೆ ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. 2.5ರಿಂದ 5 ಲಕ್ಷ ರೂ ಆದಾಯಕ್ಕೆ ಶೇ. 5 ತೆರಿಗೆ; 5ರಿಂದ 10 ಲಕ್ಷ ರೂ ಆದಾಯಕ್ಕೆ ಶೇ 20 ತೆರಿಗೆ ಇದೆ. ಹತ್ತು ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ತೆರಿಗೆ ಇದೆ. ಎರಡರಿಂದ ಮೂರು ಲಕ್ಷ ರೂ ಆದಾಯಕ್ಕೆ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇರುವುದು ಹಳೆಯ ಟ್ಯಾಕ್ಸ್ ರೆಜಿಮೆಯ ಪ್ರಮುಖ ಆಕರ್ಷಣೆ.
ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಆರಂಭಿಕ ಮೂರು ಲಕ್ಷ ರೂ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. 3ರಿಂದ 7 ಲಕ್ಷ ರೂ ಆದಾಯಕ್ಕೆ ಶೇ. 5 ತೆರಿಗೆ ಇದೆ; 7ರಿಂದ 10 ಲಕ್ಷ ರೂಗೆ ಶೇ. 10; 10ರಿಂದ 12 ಲಕ್ಷ ರೂಗೆ ಶೇ. 15; 12 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ತೆರಿಗೆ ಇದೆ.
ಇದನ್ನೂ ಓದಿ: 1,000 ಕಿಮೀ ಮೈಲಿಗಲ್ಲು; ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲ ಭಾರತದ್ದು
ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಹೆಚ್ಚಿನ ಟ್ಯಾಕ್ಸ್ ಡಿಡಕ್ಷನ್ ಇಲ್ಲ. ಆದರೆ, ಕಡಿಮೆ ತೆರಿಗೆ ಇದೆ. ಹಾಗೆಯೇ, 7 ಲಕ್ಷ ರೂ ಒಳಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ಇರುತ್ತದೆ. ಅಂದರೆ ವಾರ್ಷಿಕ ಏಳು ಲಕ್ಷ ರೂ ಆದಾಯ ಇದ್ದರೆ ಯಾವುದೇ ತೆರಿಗೆ ಪಾವತಿಸುವ ಅವಶ್ಯಕತೆ ಇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ