ಯುಪಿಐ ಭಾರತದ ಪ್ರಮುಖ ಡಿಜಿಟಲ್ ಪೇಮೆಂಟ್ ಸಿಸ್ಟಂ (UPI- unified payment interface) ಎನಿಸಿದೆ. ಭಾರತದಲ್ಲಿ ಅತಿಹೆಚ್ಚು ಹಣದ ವಹಿವಾಟು ಆಗುವುದು ಯುಪಿಐ ಮೂಲಕವೇ. ಯುಪಿಐ ರೂಪಿಸಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (NPCL) ಆಗಾಗ್ಗೆ ಹೊಸ ಫೀಚರ್ಗಳನ್ನು ಅನಾವರಣಗೊಳಿಸುತ್ತದೆ. ಇಂಥ ಕೆಲ ವಿಶೇಷ ವ್ಯವಸ್ಥೆ ಯುಪಿಐ ಲೈಟ್. ಸಣ್ಣ ವಹಿವಾಟುಗಳನ್ನು ನಡೆಸಲು ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ. ಇದು ಯುಪಿಐ ಪೇಮೆಂಟ್ ಪ್ಲಾಟ್ಫಾರ್ಮ್ನಲ್ಲಿ ಇರುವ ವ್ಯಾಲಟ್ ರೀತಿಯಲ್ಲಿ ಯುಪಿಐ ಲೈಟ್ ಕಾರ್ಯನಿರ್ವಹಿಸುತ್ತದೆ.
ಯುಪಿಐ ಎಂದರೆ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್. ಎರಡು ಬ್ಯಾಂಕ್ ಖಾತೆಗಳ ಮಧ್ಯೆ ರಿಯಲ್ಟೈಮ್ನಲ್ಲಿ ಹಣದ ವರ್ಗಾವಣೆ ಮಾಡಬಹುದು ಈ ಸಿಸ್ಟಂನಿಂದ. ಪ್ರತಿಯೊಂದು ಬ್ಯಾಂಕ್ ಖಾತೆಗೂ ಪ್ರತ್ಯೇಕ ಯುಪಿಐ ಐಡಿ ನೀಡಲಾಗುತ್ತಿದ್ದು, ಈ ಐಡಿ ಮೂಲಕ ಹಣದ ವರ್ಗಾವಣೆ ಮಾಡಲಾಗುತ್ತದೆ.
ಇನ್ನು, ಯುಪಿಐ ಲೈಟ್ ವ್ಯಾಲಟ್ ಆ್ಯಪ್ಗಳ ರೀತಿಯಲ್ಲಿ ಕೆಲಸ ಮಾಡುತ್ತದೆ. ಪೇಟಿಎಂ, ಫೋನ್ ಪೇನಲ್ಲಿರುವ ವ್ಯಾಲಟ್ಗಳಲ್ಲಿ ಹಣ ತುಂಬಿಸಿದರೆ ಹಣ ವಹಿವಾಟು ನಡೆಸುವಾಗ ಬ್ಯಾಂಕ್ ಖಾತೆಯನ್ನು ಮುಟ್ಟುವ ಅವಶ್ಯಕತೆ ಇರುವುದಿಲ್ಲ. ವ್ಯಾಲಟ್ನಲ್ಲಿರುವ ಹಣವನ್ನು ನೇರವಾಗಿ ಬಳಸಬಹುದು. ಪ್ರತ್ಯೇಕವಾಗಿ ಪಿನ್ ನಮೂದಿಸುವ ಅಗತ್ಯ ಇರುವುದಿಲ್ಲ. ಯುಪಿಐ ಲೈಟ್ ಬಹುತೇಕ ಇದೇ ರೀತಿಯಲ್ಲಿ ಕಾರ್ಯವಹಿಸುತ್ತದೆ.
ಇದನ್ನೂ ಓದಿ: ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್ಗೆ ನಾಮಿನಿ ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಯುಪಿಐ ವ್ಯಾಲಟ್ಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಎಷ್ಟು ಬೇಕಾದರೂ ಹಣ ತುಂಬಿಸಬಹುದು. ಆದರೆ, ಯುಪಿಐ ಲೈಟ್ನಲ್ಲಿ 4,000 ರೂಗಿಂತ ಹೆಚ್ಚು ಇರುವಂತಿಲ್ಲ. 200 ರೂಗಿಂತ ಹೆಚ್ಚಿನ ಮೊತ್ತದ ವಹಿವಾಟನ್ನು ಲೈಟ್ ಮೂಲಕ ಮಾಡಲು ಆಗುವುದಿಲ್ಲ.
ಯುಪಿಐ ಮೂಲಕ ಒಂದು ಬ್ಯಾಂಕ್ ಖಾತೆಯಿಂದ ನೀವು ದಿನಕ್ಕೆ 2 ಲಕ್ಷ ರೂವರೆಗೆ ಮಾತ್ರವೇ ಹಣ ರವಾನೆ ಮಾಡಬಹುದು. 24 ಗಂಟೆಯಲ್ಲಿ ಬ್ಯಾಂಕ್ ಖಾತೆ ಬಳಸಿ 20 ಯುಪಿಐ ಟ್ರಾನ್ಸಾಕ್ಷನ್ ಮಾತ್ರವೇ ನಡೆಸಬಹುದು.
ಯುಪಿಐ ವ್ಯಾಲಟ್ನಲ್ಲಿ ವಹಿವಾಟು ಮಿತಿ ಇಲ್ಲ. ನಿಮ್ಮ ವ್ಯಾಲಟ್ನಲ್ಲಿ ಹಣ ಇರುವವರೆಗೂ ಎಷ್ಟು ಬೇಕಾದರೂ ಟ್ರಾನ್ಸಾಕ್ಷನ್ ನಡೆಸಬಹುದು. ಯುಪಿಐ ಲೈಟ್ ಆದರೆ ದಿನಕ್ಕೆ 4,000 ರೂವರೆಗೂ ಟ್ರಾನ್ಸಾಕ್ಷನ್ ಲಿಮಿಟ್ ಇರುತ್ತದಾದರೂ ಆ ಹಣ ಖಾಲಿ ಆಗುವವರೆಗೂ ಎಷ್ಟು ಬೇಕಾದರೂ ವಹಿವಾಟು ನಡೆಸಬಹುದು.
ಸಣ್ಣ ಸಣ್ಣ ಮೊತ್ತದ ಪೇಮೆಂಟ್ಗೆ ಯುಪಿಐ ಲೈಟ್ ಹೇಳಿ ಮಾಡಿಸಿದ್ದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ