ಸೈಬರ್ ಅಪರಾಧಿಗಳು ಜನರನ್ನು ವಂಚಿಸಲು ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಅಮಾಯಕರಿಗೆ ಆಮಿಷವೊಡ್ಡುವ ಮೂಲಕ ಅವರು ಸುಲಭವಾಗಿ ವಂಚನೆ (cyber crime) ಮಾಡುತ್ತಿದ್ದಾರೆ . ವಂಚಕರು ಎಷ್ಟು ಬುದ್ಧಿವಂತರಾಗಿದ್ದಾರೆಂದರೆ ಅವರು ಸರ್ಕಾರದ ಯೋಜನೆಗಳ ಹೆಸರಲ್ಲೂ ಜನರನ್ನು ವಂಚಿಸುತ್ತಾರೆ. ಇಂತಹ ವಂಚನೆಯ ಪ್ರಕರಣವೊಂದು ದೆಹಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದುಷ್ಕರ್ಮಿಗಳು ಡೆಲ್ಲಿ ಅಭಿವೃದ್ಧಿ ಪ್ರಾಧಿಕಾರದ (DDA- delhi development authority) ನಕಲಿ ವೆಬ್‌ಸೈಟ್ ಸೃಷ್ಟಿಸಿ ಫ್ಲಾಟ್ ಮಾರಾಟದ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡಿದ್ದಾರೆ.
ಈ ಬಗ್ಗೆ ಉತ್ತರಪ್ರದೇಶದ ಘಾಜಿಯಾಬಾದ್ ನಿವಾಸಿ ಸುನೀಲ್ ಕುಮಾರ್ ತೋಮರ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಗೂಗಲ್‌ನಲ್ಲಿ ಡಿಡಿಎ ಫ್ಲಾಟ್ ಎಂದು ಇವರು ಹುಡುಕಿದಾಗ ಲಿಸ್ಟ್ನಲ್ಲಿ ಈ ನಕಲಿ ಡಿಡಿಎ ವೆಬ್‌ಸೈಟ್ ಬಂದಿತ್ತು. ವೆಬ್‌ಸೈಟ್‌ನಲ್ಲಿ ಯೂಸರ್ ನೇಮ್ ಪಾಸ್ವರ್ಡ್ ರಚಿಸಿ ಅಕೌಂಟ್ ತೆರೆದು, ತನ್ನ ಎಲ್ಲಾ ಮಾಹಿತಿಯನ್ನು ಅಪ್‌ಲೋಡ್ ಮಾಡಿ, ಬಳಿಕ ಸುನೀಲ್ ಕುಮಾರ್ ಫ್ಲಾಟ್ ಬುಕಿಂಗ್‌ಗೆ ಅರ್ಜಿ ಕೂಡ ಸಲ್ಲಿಸಿರುತ್ತಾರೆ.
ವೆಬ್‌ಸೈಟ್‌ನಲ್ಲಿ ಫ್ಲಾಟ್ ಬುಕಿಂಗ್‌ಗೆ ಕೊನೆಯ ದಿನಾಂಕವನ್ನು ನಮೂದಿಸಲಾಗಿರುತ್ತದೆ. ಅರ್ಜಿ ಪ್ರಕ್ರಿಯೆ ಮುಗಿದ ನಂತರ ಫ್ಲಾಟ್ ಬುಕ್ ಮಾಡಲು 75,000 ರೂ. ಪಾವತಿ ಮಾಡಲು ವೆಬ್‌ಸೈಟ್‌ನಲ್ಲಿಯೇ ಕ್ಯೂಆರ್ ಕೋಡ್ ಅನ್ನು ಒದಗಿಸಲಾಗಿರುತ್ತದೆ. ಸುನೀಲ್ ಕುಮಾರ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ 75 ಸಾವಿರ ರೂ ಪಾವತಿಸುತ್ತಾರೆ.
ನಂತರ ವಿವಿಧ ದಿನಗಳಲ್ಲಿ 25,000 ರೂ. ಇತ್ಯಾದಿ ಮೊತ್ತ ಪಾವತಿಸಿ, ಒಟ್ಟು 5.50 ಲಕ್ಷ ರೂ ಹಣವನ್ನು ಕಟ್ಟಿರುತ್ತಾರೆ. ಕೊನೆಗೆ ಅನುಮಾನಗೊಂಡು ಡಿಡಿ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದಾಗ ವಂಚನೆಗೊಳಗಾಗಿರುವುದು ತಿಳಿದು ಬಂದಿದೆ. ಇದು ಸುನೀಲ್ ಕುಮಾರ್ ತೋಮರ್ ಅವರು ಎಫ್ಐಆರ್ನಲ್ಲಿ ನೀಡಿರುವ ವಿವರವಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಎಚ್ಪಿಯಿಂದ ಗೂಗಲ್ ಕ್ರೋಮ್ಬುಕ್ಗಳ ತಯಾರಿಕೆ; ಬಹಳ ಕಡಿಮೆಬೆಲೆಗೆ ಸಿಗಲಿವೆ ಲ್ಯಾಪ್ಟಾಪ್
ಜನರು ವಂಚನೆಗೊಳಗಾಗುವುದನ್ನು ತಡೆಯಲು ದೆಹಲಿ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ಕೆಲವು ವಂಚಕರು ನಕಲಿ URL (www.DDAflat.org.in/index.php) ಬಳಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಡಿಡಿಎ ಹೇಳಿದೆ. ಜನರು ಅಧಿಕೃತ ವೆಬ್ಸೈಟ್ಗಳಾದ www.dda.org.in ಮತ್ತು www.dda.gov.in ನಿಂದ ಮಾತ್ರ ಮಾಹಿತಿಯನ್ನು ಪಡೆಯಬೇಕು ಎಂದು ದೆಹಲಿ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ