ಯುಪಿಐ ಲೈಟ್ ಮಿತಿ, ಶಕ್ತಿ ಮತ್ತಷ್ಟು ಹೆಚ್ಚಳ; ವ್ಯಾಲಟ್​ನಲ್ಲಿ 5,000 ರೂ ಇರಿಸಲು ಅವಕಾಶ

|

Updated on: Dec 06, 2024 | 3:51 PM

UPI Lite limit: ಯುಪಿಐ ಲೈಟ್​ನಲ್ಲಿ ಹಣದ ಮಿತಿಗಳನ್ನು ಏರಿಸಲಾಗಿದೆ. ಪ್ರತೀ ಟ್ರಾನ್ಸಾಕ್ಷನ್​ನಲ್ಲಿ 500 ರೂ ಇದ್ದ ಮಿತಿಯನ್ನು 1,000 ರೂಗೆ ಹೆಚ್ಚಿಸಲಾಗಿದೆ. ಯುಪಿಐ ಲೈಟ್​ನ ವ್ಯಾಲಟ್​ನ ಮಿತಿಯನ್ನು 2,000 ರೂನಿಂದ 5,000 ರೂಗೆ ಏರಿಸಲಾಗಿದೆ. ಇತ್ತೀಚೆಗೆ, ಯುಪಿಐ 123ಪೇ ಫೀಚರ್​ನಲ್ಲಿ ಹಣ ಪಾವತಿಗೆ ಇದ್ದ ಮಿತಿಯನ್ನು 5,000 ರೂನಿಂದ 10,000 ರೂಗೆ ಏರಿಸಲಾಗಿತ್ತು.

ಯುಪಿಐ ಲೈಟ್ ಮಿತಿ, ಶಕ್ತಿ ಮತ್ತಷ್ಟು ಹೆಚ್ಚಳ; ವ್ಯಾಲಟ್​ನಲ್ಲಿ 5,000 ರೂ ಇರಿಸಲು ಅವಕಾಶ
ಯುಪಿಐ
Follow us on

ನವದೆಹಲಿ, ಡಿಸೆಂಬರ್ 6: ಡಿಜಿಟಲ್ ಹಣ ಪಾವತಿ ಕಾರ್ಯವನ್ನು ಸುಗಮಗೊಳಿಸಲು, ಬ್ಯಾಂಕ್ ಸರ್ವರ್​ಗಳ ಮೇಲಿನ ಒತ್ತಡ ತಗ್ಗಿಸಲು ಆರ್​ಬಿಐ ಯುಪಿಐ ಲೈಟ್​ನ ಮಿತಿಗಳನ್ನು ಹೆಚ್ಚಿಸಿದೆ. ಯುಪಿಐ ಲೈಟ್​ನಲ್ಲಿ ಒಂದು ಟ್ರಾನ್ಸಾಕ್ಷನ್​ನಲ್ಲಿನ ಮಿತಿಯನ್ನು 500 ರೂನಿಂದ 1,000 ರೂಗೆ ಏರಿಸಲಾಗಿದೆ. ಹಾಗೆಯೇ, ಯುಪಿಐ ಲೈಟ್​ನ ವ್ಯಾಲಟ್​ನಲ್ಲಿ ಯಾವುದೇ ಹಂತದಲ್ಲಿ ಇರಿಸಬಹುದಾದ ಹಣದ ಮಿತಿಯನ್ನು 2,000 ರೂನಿಂದ 5,000 ರೂಗೆ ಹೆಚ್ಚಿಸಲಾಗಿದೆ. ಆರ್​ಬಿಐ ನಿನ್ನೆ ಗುರುವಾರ ಈ ನಿರ್ಧಾರವನ್ನು ತಿಳಿಸಿದೆ.

ಈ ಮೊದಲು ಯುಪಿಐ ಲೈಟ್​ನಲ್ಲಿ ನೀವು ಟ್ರಾನ್ಸಾಕ್ಷನ್ ಮಾಡಬೇಕಿದ್ದರೆ 500 ರೂ ಒಳಗಿನ ಮೊತ್ತ ಮಾತ್ರ ಸಾಧ್ಯ ಇತ್ತು. ಈಗ ನೀವು 1,000 ರೂವರೆಗಿನ ಮೊತ್ತದ ಹಣ ಪಾವತಿ ಮಾಡಬಹುದು. ಯುಪಿಐ ಲೈಟ್ ಫೀಚರ್ ಆರಂಭಿಸಿದಾಗ ಪ್ರತಿ ಟ್ರಾನ್ಸಾಕ್ಷನ್​ಗೆ 100 ರೂ ಮಿತಿ ಇತ್ತು. 1,000 ರೂ ವ್ಯಾಲಟ್ ಮಿತಿ ಇತ್ತು. ನಂತರ ಹಂತ ಹಂತವಾಗಿ ಮಿತಿಗಳನ್ನು ಹೆಚ್ಚಿಸುತ್ತಾ ಬರಲಾಗಿದೆ.

ಇದನ್ನೂ ಓದಿ: ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೂ ಯುಪಿಐ ಕ್ರೆಡಿಟ್ ಲೈನ್ ಅವಕಾಶ ವಿಸ್ತರಣೆ; ಎಸ್​ಎಫ್​ಬಿಗಳಿಗೆ ಒಳ್ಳೆಯ ಲಾಭದ ನಿರೀಕ್ಷೆ

ಫೀಚರ್ ಫೋನ್​ಗಳಲ್ಲಿ ಯುಪಿಐ ಪಾವತಿಗೆ ಅವಕಾಶ ನೀಡುವ ಯುಪಿಐ 123 ಪೇನಲ್ಲಿ ಪ್ರತೀ ವಹಿವಾಟು ಮಿತಿಯನ್ನು 5,000 ರೂನಿಂದ 10,000 ರೂಗೆ ಏರಿಸಲಾಗಿದೆ.

ಯುಪಿಐ ಲೈಟ್ ಫೀಚರ್ ಬಹಳ ಉಪಯುಕ್ತವೆನಿಸಿದೆ. ಆಫ್​ಲೈನ್​ನಲ್ಲಿ ಹಣ ಪಾವತಿಗೆ ಇದು ಅವಕಾಶ ನೀಡುತ್ತದೆ. ಫೋನ್ ಪೇನಲ್ಲಿರುವ ವ್ಯಾಲಟ್ ರೀತಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಆದರೆ, ಯುಪಿಐ ಲೈಟ್ ಇಂಟರ್ ಆಪರಬಲ್ ಫೀಚರ್ ಹೊಂದಿರುತ್ತದೆ. ಅಂದರೆ, ನೀವು ಪೇಟಿಎಂ, ಫೋನ್ ಪೇ, ಗೂಗಲ್ ಪೇ ಇತ್ಯಾದಿ ಯಾವುದೇ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಯುಪಿಐ ಲೈಟ್ ಮೂಲಕ ಹಣ ಪಾವತಿಸಬಹುದು. ಈ ವಿಚಾರದಲ್ಲಿ ಇದು ವ್ಯಾಲಟ್​ಗಿಂತ ತುಸು ಭಿನ್ನವಾಗಿರುತ್ತದೆ. ವ್ಯಾಲಟ್ ಆದರೆ, ಅದೇ ಸಂಸ್ಥೆಯ ಕ್ಯುಆರ್ ಕೋಡ್ ಇದ್ದರೆ ಮಾತ್ರ ಬಳಕೆ ಸಾಧ್ಯ.

ಇದನ್ನೂ ಓದಿ: ಹಣಕಾಸು ವಂಚಕರ ಬೇಟೆಗೆ ಮ್ಯೂಲ್ ಹಂಟರ್ ಸಜ್ಜು; ಬೆಂಗಳೂರಿನ ಆರ್​ಬಿಐ ಇನ್ನೋವೇಶನ್ ತಂಡ ರೂಪಿಸಿದ ಪ್ರಬಲ ಎಐ ಮಾಡಲ್

ಯುಪಿಐ ಲೈಟ್​ನಲ್ಲಿ ನೀವು ಪಿನ್ ಹಾಕುವ ಅಗತ್ಯ ಇರುವುದಿಲ್ಲ. ಆ ಮಟ್ಟಿಗೆ ಇದರಿಂದ ಹಣದ ಪಾವತಿ ವೇಗವಾಗಿ ಆಗುತ್ತದೆ. ಚಿಲ್ಲರೆ ಅಂಗಡಿಗಳಲ್ಲಿ ಹಣ ಪಾವತಿಸುವಾಗ ಕಡಿಮೆ ಮೊತ್ತದ ವಹಿವಾಟುಗಳೇ ಅತ್ಯಧಿಕ ಇರುತ್ತದೆ. ಹೀಗಾಗಿ, ಯುಪಿಐ ಲೈಟ್​ನಲ್ಲಿ ಹಣದ ಮಿತಿ ಹೆಚ್ಚಿಸಿರುವುದು ಬಹಳ ಅನುಕೂಲವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ