ಯುಪಿಐ ಆ್ಯಪ್​ನಲ್ಲಿ ಪದೇಪದೇ ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡುವಿರಾ? ಮಿತಿಮೀರುವಂತಿಲ್ಲ; ಆ. 1ರಿಂದ ಹೊಸ ನಿಯಮ

UPI rules changes from 2025 August: ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಯುಪಿಐನಲ್ಲಿ ಆಗಸ್ಟ್ 1ರಿಂದ ಒಂದಷ್ಟು ನಿಯಮ ಬದಲಾವಣೆ ತರುತ್ತಿದೆ. ಯುಪಿಐ ಬಳಕೆದಾರರು ಬ್ಯಾಂಕ್ ಬ್ಯಾಲನ್ಸ್ ಅನ್ನು ಮಿತಿಗಿಂತ ಹೆಚ್ಚು ಬಾರಿ ಬಳಸಲು ಆಗುವುದಿಲ್ಲ. ಮೊಬೈಲ್ ನಂಬರ್​ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್​ಗಳ ವಿವರವನ್ನು ಪರಿಶೀಲಿಸಲು ನಿರ್ಬಂಧ ಇದೆ.

ಯುಪಿಐ ಆ್ಯಪ್​ನಲ್ಲಿ ಪದೇಪದೇ ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡುವಿರಾ? ಮಿತಿಮೀರುವಂತಿಲ್ಲ; ಆ. 1ರಿಂದ ಹೊಸ ನಿಯಮ
ಫೋನ್​ಪೇ

Updated on: Jul 27, 2025 | 6:57 PM

ನವದೆಹಲಿ, ಜುಲೈ 27: ಯುಪಿಐ ಪೇಮೆಂಟ್ ಸಿಸ್ಟಂನಲ್ಲಿ (UPI) ಆಗಸ್ಟ್ 1ರಿಂದ ಒಂದಷ್ಟು ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಬ್ಯಾಲನ್ಸ್ ಪರಿಶೀಲನೆ, ಆಟೊಪೇಯಂತಹ ಫೀಚರ್​ಗಳಿಂದ ಹಿಡಿದು ಎಪಿಐ ಬಳಕೆ ಸಂಬಂಧ ಪರಿಷ್ಕೃತ ಮಾರ್ಗಸೂಚಿಯವರೆಗೆ ಕ್ರಮ ಬದಲಾವಣೆ ಮಾಡಲಾಗುತ್ತಿದೆ. ಯುಪಿಐ ಸೇವೆಗಳನ್ನು ಹೆಚ್ಚು ಸಮರ್ಪಕವಾಗಿಸಲು ಮತ್ತು ಸುಸ್ಥಿರಗೊಳಿಸಲು ಈ ಬದಲಾವಣೆ ಆಗುತ್ತಿದೆ.

ಬ್ಯಾಲನ್ಸ್ ಪರಿಶೀಲನೆಗೆ ಮಿತಿ

ಗೂಗಲ್ ಪೇ, ಪೇಟಿಎಂ, ಫೋನ್​ಪೇ ಇತ್ಯಾದಿ ಯುಪಿಐ ಬಳಕೆದಾರರು ಗಮನಿಸಬೇಕಾದ ಬೆಳವಣಿಗೆ ಇದು. ನೀವು ಒಂದು ಯುಪಿಐ ಆ್ಯಪ್​ನಲ್ಲಿ ಒಂದು ದಿನದಲ್ಲಿ 50 ಬಾರಿ ಮಾತ್ರ ಯಾವುದೇ ಬ್ಯಾಂಕ್ ಅಕೌಂಟ್​ನ ಬ್ಯಾಲನ್ಸ್ ಪರಿಶೀಲಿಸಬಹುದು. ಅದಕ್ಕಿಂತ ಹೆಚ್ಚು ಬಾರಿ ಬ್ಯಾಲನ್ಸ್ ಚೆಕ್ ಮಾಡಲು ಆಗುವುದಿಲ್ಲ.

ಇದನ್ನೂ ಓದಿ: ಆಗಸ್ಟ್​ನಲ್ಲಿ ಗಣೇಶ ಹಬ್ಬ, ಸ್ವಾತಂತ್ರ್ಯ ದಿನಾಚರಣೆ; 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

ಮೊಬೈಲ್ ನಂಬರ್​ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್​​ಗಳ ಮಾಹಿತಿ

ನಿಮ್ಮ ಮೊಬೈಲ್ ನಂಬರ್​ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್​​ಗಳ ಬಗ್ಗೆ ಒಂದು ದಿನದಲ್ಲಿ 25 ಬಾರಿ ಮಾತ್ರ ಮಾಹಿತಿ ಪಡೆಯಬಹುದು.

ಆಟೊಡೆಬಿಟ್​ಗೆ ನಿರ್ಬಂಧ

ಒಟಿಟಿ ಪ್ಲಾಟ್​ಫಾರ್ಮ್​ಗಳು, ಮ್ಯುಚುವಲ್ ಫಂಡ್ ಎಸ್​ಐಪಿ ಇತ್ಯಾದಿಗೆ ನಿಯಮಿತವಾಗಿ ಹಣ ಪಾವತಿಸುತ್ತೇವೆ. ತನ್ನಂತಾನೇ ಇವು ಕಡಿತಗೊಳ್ಳಲು ಅಟೊಡೆಬಿಟ್ ಆಯ್ಕೆ ಇದೆ. ಕಡಿಮೆ ಟ್ರಾಫಿಕ್ ಇರುವ ಬೆಳಗಿನ 10 ಗಂಟೆಯೊಳಗಿನ ಅವಧಿ, ಮಧ್ಯಾಹ್ನ 1 ಗಂಟೆಯಿಂದ 5 ಗಂಟೆಯವರೆಗಿನ ಅವಧಿ, ಹಾಗೂ ರಾತ್ರಿ 9:30ರ ನಂತರದ ಅವಧಿಯಲ್ಲಿ ಆಟೊಡೆಬಿಟ್ ಆಗುವಂತೆ ನಿರ್ಬಂಧಿಸಲಾಗಿದೆ.

90 ಸೆಕೆಂಡ್ ಗ್ಯಾಪ್

ನೀವು ಮಾಡಿದ ಟ್​ರಾನ್ಸಾಕ್ಷನ್ ಇನ್ನೂ ಬಾಕಿ ಇದ್ದು, ಅದರ ಸ್ಟೇಟಸ್ ಪರಿಶೀಲಿಸಲು ನಿರ್ಬಂಧ ಹಾಕಲಾಗುತ್ತಿದೆ. ಮೂರು ಬಾರಿ ಮಾತ್ರ ಸ್ಟೇಟಸ್ ಪರಿಶೀಲಿಸಬಹುದು. ಪ್ರತೀ ಪರಿಶೀಲನೆ ನಡೆಯುವೆ ಕನಿಷ್ಠ 90 ಸೆಕೆಂಡ್ ಗ್ಯಾಪ್ ಇರಬೇಕು.

ಇದನ್ನೂ ಓದಿ: ಪ್ಯಾನ್ ಮತ್ತು ಆಧಾರ್​ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್​ಲೈನ್​ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ

ಈ ಯುಪಿಐ ನಿಯಮ ಬದಲಾವಣೆ ಯಾಕೆ?

ಯುಪಿಐ ಬಳಕೆ ಈಗ ಬಹಳಷ್ಟು ಆಗುತ್ತಿದೆ. ಒಂದು ತಿಂಗಳಲ್ಲಿ 1,600 ಕೋಟಿಯಷ್ಟು ಟ್ರಾನ್ಸಾಕ್ಷನ್​ಗಳು ಆಗುತ್ತವೆ. ಹೀಗಾಗಿ, ಯುಪಿಐ ನೆಟ್ವರ್ಕ್ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಇದನ್ನು ತಪ್ಪಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಈ ಕ್ರಮ ತೆಗೆದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Sun, 27 July 25