
ನವದೆಹಲಿ, ಜನವರಿ 4: ಭಾರತದಲ್ಲಿ ಕಳೆದ ವರ್ಷ (2025) ಯುಪಿಐ ಟ್ರಾನ್ಸಾಕ್ಷನ್ (UPI transaction) ಸಂಖ್ಯೆಯಲ್ಲಿ ಹೊಸ ದಾಖಲೆಯೇ ನಿರ್ಮಾಣವಾಗಿದೆ. ಡಿಸೆಂಬರ್ ತಿಂಗಳಲ್ಲಿ 2,160 ಕೋಟಿ ಸಂಖ್ಯೆಯಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿವೆ. ನವೆಂಬರ್ ತಿಂಗಳಲ್ಲಿ 2,047 ಕೋಟಿ ವಹಿವಾಟುಗಳಾಗಿದ್ದವು. ಇದರೊಂದಿಗೆ, ಯುಪಿಐ ಪೇಮೆಂಟ್ ಬಳಕೆ ದಿನೇ ದಿನೇ ಹೆಚ್ಚುತ್ತಲೇ ಇದೆ.
ಡಿಸೆಂಬರ್ನಲ್ಲಿ ಯುಪಿಐ ಟ್ರಾನ್ಸಾಕ್ಷನ್ ಸಂಖ್ಯೆ (transaction volume) 2,160 ಕೋಟಿ ಟ್ರಾನ್ಸಾಕ್ಷನ್ ಆಗಿದ್ದರೆ, ಟ್ರಾನ್ಸಾಕ್ಷನ್ ಮೌಲ್ಯ (transaction value) 28 ಲಕ್ಷ ಕೋಟಿ ರೂ ಆಗಿದೆ. ನವೆಂಬರ್ನಲ್ಲಿ 26.3 ಲಕ್ಷ ಕೋಟಿ ರೂ, ಅಕ್ಟೋಬರ್ನಲ್ಲಿ 27.3 ಲಕ್ಷ ಕೋಟಿ ರೂನಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿತ್ತು.
ಇದನ್ನೂ ಓದಿ: ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು
ಡಿಸೆಂಬರ್ನಲ್ಲಿ ಒಂದು ದಿನಕ್ಕೆ ಸರಾಸರಿಯಾಗಿ 69.8 ಕೋಟಿ ಸಂಖ್ಯೆಯಷ್ಟು ಯುಪಿಐ ಪೇಮೆಂಟ್ಗಳಾದಂತಾಗಿದೆ. ಒಂದು ಟ್ರಾನ್ಸಾಕ್ಷನ್ನ ಮೌಲ್ಯ 1,293 ರೂನಷ್ಟಿದೆ.
ವರ್ಷದ ಹಿಂದಕ್ಕೆ ಹೋಲಿಸಿದರೆ ಡಿಸೆಂಬರ್ನಲ್ಲಿ ಯುಪಿಐ ವಹಿವಾಟು ಸಂಖ್ಯೆ ಶೇ. 29.3ರಷ್ಟು ಏರಿದೆ. ವಹಿವಾಟು ಮೌಲ್ಯ 20.3 ಪ್ರತಿಶತದಷ್ಟು ಹೆಚ್ಚಳ ಆಗಿದೆ. ಆದರೆ, ಇತರ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ನಲ್ಲಿ ವಹಿವಾಟು ಸಂಖ್ಯೆ ಮತ್ತು ಮೌಲ್ಯದಲ್ಲಿ ಹೆಚ್ಚಳ ಆಗಿರುವುದು ತುಸು ಕಡಿಮೆ.
ಒಟ್ಟಾರೆ ಇಡೀ ವರ್ಷ ಗಣನೆಗೆ ತೆಗೆದುಕೊಂಡರೆ 22,830 ಕೋಟಿ ಯುಪಿಐ ವಹಿವಾಟುಗಳಾಗಿವೆ. 2024ರಲ್ಲಿ 17,220 ಕೋಟಿ ವಹಿವಾಟುಗಳಾಗಿದ್ದವು. 2025ರಲ್ಲಿ ಯುಪಿಐ ವಹಿವಾಟು ಮೌಲ್ಯ 299.7 ಲಕ್ಷ ಕೋಟಿ ರೂ ಇದೆ. 2024ರಲ್ಲಿ ಅದು 246.8 ಲಕ್ಷ ಕೋಟಿ ರೂನಷ್ಟಿತ್ತು.
ಇದನ್ನೂ ಓದಿ: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದು?
ಸಣ್ಣ ಮೌಲ್ಯದ ವಹಿವಾಟುಗಳಿಗೆ ಯುಪಿಐ ಅನ್ನು ಅತಿಹೆಚ್ಚು ಬಳಸಲಾಗುತ್ತಿದೆ. 2025ರ ಮೊದಲಾರ್ಧದಲ್ಲಿ ಭಾರತದ ಡಿಜಿಟಲ್ ಪೇಮೆಂಟ್ ಸಂಖ್ಯೆಯಲ್ಲಿ ಶೇ. 84.8ರಷ್ಟು ಯುಪಿಐನದ್ದಾಗಿದೆ. ಆದರೆ, ಒಟ್ಟಾರೆ ಟ್ರಾನ್ಸಾಕ್ಷನ್ ಮೌಲ್ಯದಲ್ಲಿ ಯುಪಿಐ ಪಾಲು ಶೇ. 9 ಮಾತ್ರ.
ದೊಡ್ಡ ಮೊತ್ತದ ಟ್ರಾನ್ಸಾಕ್ಷನ್ಗಳಿಗೆ ಆರ್ಟಿಜಿಎಸ್ ಅನ್ನು ಹೆಚ್ಚಾಗಿ ಬಳಸಲಾಗಿದೆ. ನೆಫ್ಟ್ ಮತ್ತು ಐಎಂಪಿಎಸ್ ಕೂಡ ಟ್ರಾನ್ಸಾಕ್ಷನ್ ಮೌಲ್ಯದಲ್ಲಿ ಯುಪಿಐ ಅನ್ನು ಹಿಂದಿಕ್ಕಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ