
ನವದೆಹಲಿ, ಅಕ್ಟೋಬರ್ 30: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ (US Federal Reserve) ತನ್ನ ಬಡ್ಡಿದರವನ್ನು ಸತತ ಎರಡನೇ ಬಾರಿ ಇಳಿಸಿದೆ. ಬಡ್ಡಿದರ 25 ಮೂಲಾಂಕಗಳಷ್ಟು ಇಳಿದಿದೆ. ಇದೀಗ ಅಲ್ಲಿ ಬೆಂಚ್ಮಾರ್ಕ್ ಇಂಟರೆಸ್ಟ್ ರೇಟ್ 3.75%-4.00% ಇದೆ. ಅಮೆರಿಕದ ಆರ್ಥಿಕತೆಯ ಹಿತ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬಡ್ಡಿ ದರ ಮತ್ತಷ್ಟು ಇಳಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ಫೆಡರಲ್ ರಿಸರ್ವ್ ಛೇರ್ಮನ್ ಆದ ಪೋವೆಲ್ ಹೇಳಿದ್ದಾರೆ.
ಬಡ್ಡಿದರವನ್ನು ಈತಿ ವರ್ಷ ಇಳಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಫೆಡರಲ್ ರಿಸರ್ವ್ ಈಗ ಸತತ ಎರಡು ಬಾರಿ ದರ ಕಡಿಮೆಗೊಳಿಸಿರುವುದು ಗಮನಾರ್ಹ. ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರಕ್ಕೆ ಬಂದಾಗಿನಿಂದ ಬಡ್ಡಿ ದರ ಇಳಿಸುವ ವಿಚಾರದಲ್ಲಿ ಫೆಡರಲ್ ರಿಸರ್ವ್ ಜೊತೆ ನಿರಂತರ ತಿಕ್ಕಾಟ ನಡೆಸಿದ್ದರು. ಇದೀಗ ಟ್ರಂಪ್ ಒತ್ತಡಕ್ಕೆ ಪೊವೆಲ್ ಮಣಿದಂತೆ ಮೇಲ್ನೋಟಕ್ಕೆ ತೋರುತ್ತಿದೆ.
ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿ ಹುಬ್ಬೇರಿಸಿದ ಡೊನಾಲ್ಡ್ ಟ್ರಂಪ್; ಚೀನಾ ಜೊತೆ ಅಮೆರಿಕ ಸೂಪರ್ ಡೀಲ್
ಫೆಡರಲ್ ರಿಸರ್ವ್ನಿಂದ ಸತತ ಎರಡನೇ ಬಾರಿ ಬಡ್ಡಿದರ ಇಳಿಸುವ ನಿರ್ಧಾರದಿಂದ ಜಾಗತಿಕ ಮಾರುಕಟ್ಟೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಇಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಷ್ಯಾದ ಮಾರುಕಟ್ಟೆಯೂ ತುಸು ಕಳೆಗುಂದಿದೆ.
ಅಮೆರಿಕದಲ್ಲಿ ಬಡ್ಡಿದರವನ್ನು ಇಳಿಸಬಹುದು ಎನ್ನುವ ಸುಳಿವು ಮೊದಲೇ ಇತ್ತು. ಕಾಕತಾಳೀಯವೋ ಅಥವಾ ಇದೇ ಕಾರಣಕ್ಕೋ ವಿದೇಶೀ ಹೂಡಿಕೆದಾರರು (ಎಫ್ಐಐ) ಭಾರತದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹೂಡಿಕೆ ಹೆಚ್ಚಿಸಿದ್ದಾರೆ. ಷೇರುಪೇಟೆ ಒಂದಷ್ಟು ಚೇತರಿಸಿಕೊಳ್ಳಲು ಇದೂ ಒಂದು ಕಾರಣವಾಗಿತ್ತು.
ಇದನ್ನೂ ಓದಿ: ಚೀನಾ ಅಧ್ಯಕ್ಷ ಷಿ ಭೇಟಿಗೂ ಮುನ್ನ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಸೂಚಿಸಿದ್ದ ಟ್ರಂಪ್
ಇವತ್ತು ನಿಫ್ಟಿ ಸೂಚ್ಯಂಕ ಬೆಳಗಿನ ಅವಧಿಯಲ್ಲಿ ಕೆಂಪು ಬಣ್ಣಕ್ಕೆ ತಿರುಗಿತ್ತು. ಅಮೆರಿಕದ ಬಡ್ಡಿದರ ಇಳಿಕೆಗೆ ಸ್ಪಂದಿಸದೆ, ಭಾರತದ ಮಾರುಕಟ್ಟೆ ಸಹಜವಾಗಿ ವರ್ತಿಸುತ್ತಿರುವಂತೆ ಕಾಣುತ್ತಿದೆ. ಸದ್ಯ ನಿಫ್ಟಿ50 ಸೂಚ್ಯಂಕವು 25,900 ಅಂಕಗಳ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ. ಅಮೆರಿಕದ ಬಡ್ಡಿದರ ಇಳಿಕೆಯಿಂದ ಮತ್ತಷ್ಟು ಎಫ್ಐಐಗಳು ಆಗಮಿಸಿ ನಿಫ್ಟಿಯನ್ನು 26,100 ಅಂಕಗಳ ಮಟ್ಟಕ್ಕಿಂತ ಮೇಲೆ ಒಯ್ಯಲಿ ಎನ್ನುವ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ