ಬೆಂಗಳೂರು: ಅಮೆರಿಕದ ಹಣಕಾಸು ತಂತ್ರಜ್ಞಾನ ಸಂಸ್ಥೆ ಎನ್ವೆಸ್ಟ್ನೆಟ್ (Envestnet) ತನ್ನ ಭಾರತೀಯ ಕಾರ್ಯಾಚರಣೆಗಳನ್ನು ಟಿಸಿಎಸ್ಗೆ ಹೊರಗುತ್ತಿಗೆಗೆ (Outsourcing) ಕೊಟ್ಟು ಹೊರಬಿದ್ದಿದೆ. ಬೆಂಗಳೂರಿನಲ್ಲಿ ಇದ್ದ ತನ್ನ ಕಚೇರಿಯನ್ನು ಎನ್ವೆಸ್ಟ್ನೆಟ್ ಮುಚ್ಚಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಪರಿಹಾರ ಕೊಟ್ಟು ಕೆಲಸದಿಂದ ಬಿಡಿಸಿದೆ. ಬೆಂಗಳೂರಿನ ಅದರ ಕಚೇರಿಯು ಗ್ಲೋಬಲ್ ಕೇಪಬಿಲಿಟಿ ಸೆಂಟರ್ (GCC- Global Capability Center) ಆಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಅದನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಂಸ್ಥೆ ನಿಭಾಯಿಸುತ್ತದೆ.
ಇತ್ತೀಚೆಗೆ ವಿವಿಧ ಜಾಗತಿಕ ಕಂಪನಿಗಳು ಭಾರತದಲ್ಲಿನ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಗಳ ನಿರ್ವಹಣೆಯನ್ನು ನಿಲ್ಲಿಸಿ ಭಾರತೀಯ ಕಂಪನಿಗಳಿಗೆ ಔಟ್ಸೋರ್ಸ್ ಮಾಡುವ ಟ್ರೆಂಡ್ ಇದೆ. ಈ ಸಾಲಿಗೆ ಎನ್ವೆಸ್ಟ್ನೆಟ್ ಸೇರಿದೆ. ಇಂಥ ಜಿಸಿಸಿ ಕೇಂದ್ರಗಳ ನಿರ್ವಹಣಾ ವೆಚ್ಚ ಅಧಿಕ ಇರುವುದಿರಂದ ಇದಾಗುತ್ತಿದೆ. ಅನೇಕ ಕಂಪನಿಗಳು ಇಂಥ ಕೇಂದ್ರಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿವೆ.
ಇದನ್ನೂ ಓದಿ: SBI Profit: ಎಸ್ಬಿಐ ಸಖತ್ ಲಾಭ; ಷೇರುದಾರರಿಗೆ ಡಿವಿಡೆಂಡ್ ಸುಗ್ಗಿ; ಐಟಿಸಿ, ಗೇಲ್ ಲಾಭ ಎಷ್ಟಿದೆ ನೋಡಿ?
ಜಾಗತಿಕ ಜಿಸಿಸಿ ಕೇಂದ್ರಗಳಲ್ಲಿ ಹೆಚ್ಚಿನವು ಭಾರತದಲ್ಲಿವೆ. 1,500 ಜಿಸಿಸಿಗಳು ಭಾರತದಲ್ಲಿವೆ. ವಿಶ್ವದ ಶೇ. 45ರಷ್ಟು ಗ್ಲೋಬಲ್ ಕೇಪಬಿಲಿಟಿ ಸೆಂಟರ್ಗಳು ಇಲ್ಲಿದ್ದು, ಭಾರತದ ಐಟಿ ರಫ್ತಿಗೆ ಪ್ರಮುಖ ಕೊಡುಗೆ ನೀಡುತ್ತಿವೆ. ಒಂದು ಅಂದಾಜು ಪ್ರಕಾರ ಭಾರತದಿಂದ ಹೊರದೇಶಗಳಿಗೆ ರಫ್ತಾಗುವ 194 ಬಿಲಿಯನ್ ಡಾಲರ್ ಮೊತ್ತದ ಐಟಿ ಸರ್ವಿಸ್ ಮತ್ತು ಪ್ರಾಡಕ್ಟ್ಗಳ ಪೈಕಿ ಶೇ. 40ರಷ್ಟು ಈ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಗಳಂದಲೇ ಆಗುತ್ತವೆ ಎಂಬುದು ಗಮನಾರ್ಹ.
ಇನ್ನು, ಎನ್ವೆಸ್ಟ್ನೆಟ್ ಸಂಸ್ಥೆ 2022ರ ಅಕ್ಟೋಬರ್ ತಿಂಗಳಲ್ಲೇ ಟಿಸಿಎಸ್ ಜೊತೆ ಔಟ್ಸೋರ್ಸಿಂಗ್ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. 10 ವರ್ಷ ಕಾಲ ಈ ಒಪ್ಪಂದದ ಅವಧಿ ಇರುವುದು ತಿಳಿದುಬಂದಿದೆ. ಎನ್ವೆಸ್ಟ್ನೆಟ್ ಡಾಟಾ ಮತ್ತು ಅನಾಲಿಟಿಕ್ಸ್ನ ವ್ಯವಹಾರದ ಬ್ಯಾಕ್ ಆಫೀಸ್ ಕಾರ್ಯಗಳು, ಎಂಜಿನಿಯರಿಂಗ್ ಕಾರ್ಯಗಳನ್ನು ಟಿಸಿಎಸ್ಗೆ ಹೊರಗುತ್ತಿಗೆಯಾಗಿ ನೀಡಿದ್ದಾಗಿ ರೆಗ್ಯುಲೇಟರಿ ಅಥಾರಿಟಿಗೆ ಸಲ್ಲಿಸಿದ ಫೈಲಿಂಗ್ನಲ್ಲಿ ಎನ್ವೆಸ್ಟ್ನೆಟ್ ಕಂಪನಿ ತಿಳಿಸಿದೆ.
ಇದನ್ನೂ ಓದಿ: Super Rich: ಭಾರತದಲ್ಲಿ ನೂರಕ್ಕೊಬ್ಬ ಶ್ರೀಮಂತರ ಗುಂಪಿಗೆ ಸೇರಬೇಕಾ? ನಿಮಗೆಷ್ಟು ಕೋಟಿ ಹಣವಿರಬೇಕು? ಇಲ್ಲಿದೆ ಡೀಟೇಲ್ಸ್
ಎನ್ವೆಸ್ಟ್ನೆಟ್ ಕಂಪನಿಯ ಕಚೇರಿ ಸ್ಥಳ ಬೆಂಗಳೂರಿನ ಸರ್ಜಾರಪುರ ಮಾರತ್ತಹಳ್ಳಿ ರಸ್ತೆಯ ಕಾಡುಬೀಸನಹಳ್ಳಿ ಸಮೀಪದ ಪ್ರೆಸ್ಟೀಜ್ ಟೆಕ್ನಾಲಜಿ ಪಾರ್ಕ್ನಲ್ಲಿದೆ. ಲೀಸ್ಗೆ ಪಡೆದಿರುವ ಈ ಜಾಗವನ್ನು ಏನು ಮಾಡುವುದೆಂದು ಎನ್ವೆಸ್ಟ್ನೆಟ್ ಇನ್ನೂ ನಿರ್ಧರಿಸಿಲ್ಲ. ಸಬ್ಲೀಸ್ಗೆ ಕೊಡುವುದೋ ಅಥವಾ ಬೇರೆ ಯಾವುದಾಕ್ಕಾದರೂ ಈ ಸ್ಥಳವನ್ನು ಬಳಸುವುದೋ ಇವೇ ಮುಂತಾದ ಆಯ್ಕೆಗಳನ್ನು ಕಂಪನಿ ಪರಾಮರ್ಶಿಸುತ್ತಿದೆ.