Super Rich: ಭಾರತದಲ್ಲಿ ನೂರಕ್ಕೊಬ್ಬ ಶ್ರೀಮಂತರ ಗುಂಪಿಗೆ ಸೇರಬೇಕಾ? ನಿಮಗೆಷ್ಟು ಕೋಟಿ ಹಣವಿರಬೇಕು? ಇಲ್ಲಿದೆ ಡೀಟೇಲ್ಸ್
Net-worth to Become Super Rich in India: ಶೇ. 1ರಷ್ಟು ಶ್ರೀಮಂತರನ್ನು ಸೂಪರ್ ರಿಚ್ ಎನ್ನುತ್ತಾರೆ. ಭಾರತದಲ್ಲಿ ಸೂಪರ್ ರಿಚ್ ಎನಿಸಿಕೊಳ್ಳಲು ನೀವು 1,75,000 ಡಾಲರ್ ಮೌಲ್ಯದ ಆಸ್ತಿವಂತರಾಗಿರಬೇಕು. ಅಂದರೆ, 1.44 ಕೋಟಿ ರೂ ಆಸ್ತಿವಂತರಾಗಿದ್ದರೆ ಭಾರತದಲ್ಲಿ ನೀವು ಶೇ. 1ರ ಸೂಪರ್ ರಿಚ್ ಗುಂಪಿಗೆ ಸೇರಿಬಿಡುತ್ತೀರಿ.
ವಿಶ್ವದ ಅತಿದೊಡ್ಡ ಶ್ರೀಮಂತರ ಪಟ್ಟಿಯಲ್ಲಿ (Rich List) ಭಾರತೀಯರ ಹೆಸರನ್ನು ಕೇಳಿರುತ್ತೀರಿ. ಅತಿದೊಡ್ಡ ಜಿಡಿಪಿ ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ಇದೆ. ಅತಿ ಹೆಚ್ಚು ಕೋಟ್ಯಧಿಪತಿಗಳಿರುವ ದೇಶಗಳ ಸಾಲಿನಲ್ಲೂ ಭಾರತ ಇದೆ. ಹಣವಂತರಾಗಲು ಯಾರಿಗೆ ಇರುವುದಿಲ್ಲ ಮನಸು. ಜೀವನಕ್ಕೆ ಅಗತ್ಯ ಇರುವಷ್ಟು ಹಣ ಇದ್ದರೆ ಸಾಕು ಎನಿಸಬಹುದು. ಆದರೆ, ಶ್ರೀಮಂತ ಎನಿಸಲು, ಕೋಟಿಗೊಬ್ಬ ಎನಿಸಲು ಎಲ್ಲರಿಗೂ ಅಸೆಗಳುಂಟು. ಕೋಟಿಗೊಬ್ಬ ಅಲ್ಲದಿದ್ದರೂ ಕಡೇ ಪಕ್ಷ ನೂರಕ್ಕೊಬ್ಬನಾದರೂ ಆಗುವ ಆಸೆ ಇರುವುದಿಲ್ಲವೇ? ಶೇ. 1ರಷ್ಟು ಶ್ರೀಮಂತರನ್ನು ಸೂಪರ್ ರಿಚ್ ಎನ್ನುತ್ತಾರೆ. ಭಾರತದಲ್ಲಿ ಸೂಪರ್ ರಿಚ್ ಎನಿಸಿಕೊಳ್ಳಲು ನೀವು 1,75,000 ಡಾಲರ್ ಮೌಲ್ಯದ ಆಸ್ತಿವಂತರಾಗಿರಬೇಕು. ಅಂದರೆ, 1.44 ಕೋಟಿ ರೂ ಆಸ್ತಿವಂತರಾಗಿದ್ದರೆ ಭಾರತದಲ್ಲಿ ನೀವು ಶೇ. 1ರ ಸೂಪರ್ ರಿಚ್ ಗುಂಪಿಗೆ ಸೇರಿಬಿಡುತ್ತೀರಿ.
ನೈಟ್ ಫ್ರ್ಯಾಂಕ್ (Knight Frank) ಎಂಬ ರಿಯಲ್ ಎಸ್ಟೇಟ್ ಮ್ಯಾನೇಜ್ಮೆಂಟ್ ಕಂಪನಿ ವಿಶ್ವಾದ್ಯಂತ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದೆ. ಒಂದೊಂದು ದೇಶದಲ್ಲೂ ಸೂಪರ್ ರಿಚ್ ಶ್ರೀಮಂತಿಕೆಯಲ್ಲಿ ವ್ಯತ್ಯಾಸ ಇದೆ. ಶ್ರೀಮಂತರ ಖಣಜವೇ ಆಗಿ ಹೋಗಿರುವ ಮೊನಾಕೋ ದೇಶದಲ್ಲಿ ನೀವು ಶೇ. 1ರ ಗುಂಪಿಗೆ ಸೇರಬೇಕಾದರೆ 12.5 ಮಿಲಿಯನ್ ಡಾಲರ್ ಶ್ರೀಮಂತನಾಗಿರಬೇಕು. ಅಂದರೆ, 100 ಕೋಟಿ ರೂನಷ್ಟು ರಿಚ್ ಆಗಿರಬೇಕು.
ಭಾರತದಲ್ಲಿ ಸೂಪರ್ ರಿಚ್ ಎನಿಸಲು ಕೇವಲ1.44 ಕೋಟಿ ರೂ ಸಾಕಾಗುತ್ತದಾದರೂ ಅಲ್ಟ್ರಾ ರಿಚ್ ಜನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಹೌದು. ಶ್ರೀಮಂತರ ಪಟ್ಟಿಯಲ್ಲೇ ಅಜಗಜಾಂತರ ಇದೆ. 250 ಕೋಟಿ ರೂ ಸಂಪತ್ತಿನ ಒಡೆಯರಾಗಿರುವ ವ್ಯಕ್ತಿಗಳ ಸಂಖ್ಯೆ ಮುಂದಿನ ಐದು ವರ್ಷದಲ್ಲಿ ಶೇ. 58.4ರಷ್ಟು ಹೆಚ್ಚಾಗಬಹುದು ಎಂಬ ಅಂದಾಜು ಇದೆ. 2022ರಲ್ಲಿ 12,069 ಮಂದಿ 250ಕೋಟಿಗೂ ಹೆಚ್ಚು ಮೊತ್ತದ ಶ್ರೀಮಂತರಾಗಿದ್ದಾರೆ. 2027ರಲ್ಲಿ ಇವರ ಸಂಖ್ಯೆ 19,119ಕ್ಕೆ ಏರಲಿದೆ. ಇನ್ನು, ಬಿಲಿಯನೇರ್ಗಳ ಸಂಖ್ಯೆ, ಅಂದರೆ ಕನಿಷ್ಠ 100 ಕೋಟಿ ರೂ ಆಸ್ತಿ ಹೊಂದಿರುವ ಕುಬೇರರ ಸಂಖ್ಯೆ 2027ಕ್ಕೆ 161ರಿಂದ 195ಕ್ಕೆ ಏರಬಹುದು ಎಂದು ನೈಟ್ ಫ್ರಾಂಕ್ ಅಭಿಪ್ರಾಯಪಟ್ಟಿದೆ.
ಕುತೂಹಲವೆಂದರೆ ಭಾರತದಲ್ಲಿ ಸಾಧಾರಣ ಶ್ರೀಮಂತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕೋವಿಡ್ ಸಂದರ್ಭದಲ್ಲೂ ಹೈ ನೆಟ್ವರ್ತ್ ಇಂಡಿವಿಜುವಲ್ (ಎಚ್ಎನ್ಐ) ಸಂಖ್ಯೆ 2022ರಲ್ಲಿ 7.97 ಲಕ್ಷ ಇತ್ತು. ಸಾಧಾರಣ ಶ್ರೀಮಂತ ಎಂದರೆ 10 ಮಿಲಿಯನ್ ಡಾಲರ್ (ಸುಮಾರು 8 ಕೋಟಿ ರೂ) ಆಸ್ತಿವಂತ. 7.97 ಲಕ್ಷ ಇರುವ ಇವರ ಸಂಖ್ಯೆ 2027ರಲ್ಲಿ 16.5 ಲಕ್ಷಕ್ಕೆ ಏರಲಿದೆ ಎಂದು ಹೇಳಲಾಗುತ್ತಿದೆ.
ಯಾವ್ಯಾವ ದೇಶದಲ್ಲಿ ಸೂಪರ್ ರಿಚ್ ಆಗಲು ಎಷ್ಟು ಶ್ರೀಮಂತಿಕೆ ಬೇಕು? ಇಲ್ಲಿದೆ ಪಟ್ಟಿ:
- ಮೊನಾಕೋ: 12.5 ಮಿಲಿಯನ್ ಡಾಲರ್ (103 ಕೋಟಿ ರೂ)
- ಸ್ವಿಟ್ಜರ್ಲೆಂಡ್: 6.6 ಮಿಲಿಯನ್ ಡಾಲರ್ (50 ಕೋಟಿ ರೂ)
- ಸಿಂಗಾಪುರ್: 3.5 ಮಿಲಿಯನ್ ಡಾಲರ್ (29 ಕೋಟಿ ರೂ)
- ಹಾಂಕಾಂಗ್: 3.4 ಮಿಲಿಯನ್ ಡಾಲರ್ (28 ಕೋಟಿ ರೂ)
- ಭಾರತ: 0.175 ಮಿಲಿಯನ್ ಡಾಲರ್ (1.44 ಕೋಟಿ ರೂ)
ಇಲ್ಲಿ ಸಿಂಗಾಪುರ್ ಮತ್ತು ಹಾಂಕಾಂಗ್ ದೇಶಗಳು ಏಷ್ಯಾದ ಟಾಪ್-2 ಪಟ್ಟಿಯಲ್ಲಿವೆ. ಮೊನಾಕೋ ಮತ್ತು ಸ್ವಿಟ್ಜರ್ಲೆಂಡ್ ವಿಶ್ವದಲ್ಲೇ 2 ಕ್ರಮಾಂಕಗಳಲ್ಲಿವೆ.