America: ಕೇವಲ ಭಾರತೀಯರಿಗೆ ಅವಕಾಶ ಎಂದು ಜಾಹೀರಾತು; ಅಮೆರಿಕದ ಐಟಿ ಕಂಪನಿಗೆ ಬಿತ್ತು ದಂಡ; ತಾರತಮ್ಯತೆಗೆ ಜಾಗ ಇಲ್ಲ ಎಂದ ನ್ಯಾಯಾಲಯ

|

Updated on: May 24, 2023 | 1:04 PM

Infosoft Solutions to Pay Penalty: ಉದ್ಯೋಗ ನೇಮಕಾತಿಯಲ್ಲಿ ತಾರತಮ್ಯತೆ ಮಾಡುವಂತಹ ಜಾಹೀರಾತು ನೀಡಿದ ಹಾಗೂ ಭಾರತೀಯರಿಂದ ಮಾತ್ರವೇ ಕೆಲಸಕ್ಕಾಗಿ ಅರ್ಜಿಗಳನ್ನು ಕರೆದಿರುವ ಇನ್ಫೋಸಾಫ್ಟ್ ಸಲ್ಯೂಶನ್ಸ್ ಸಂಸ್ಥೆ ವಿರುದ್ಧ ನ್ಯಾಯಾಲಯವೊದು 25,500 ಡಾಲರ್ ಮೊತ್ತದಷ್ಟು ದಂಡ ವಿಧಿಸಿದೆ.

America: ಕೇವಲ ಭಾರತೀಯರಿಗೆ ಅವಕಾಶ ಎಂದು ಜಾಹೀರಾತು; ಅಮೆರಿಕದ ಐಟಿ ಕಂಪನಿಗೆ ಬಿತ್ತು ದಂಡ; ತಾರತಮ್ಯತೆಗೆ ಜಾಗ ಇಲ್ಲ ಎಂದ ನ್ಯಾಯಾಲಯ
ಉದ್ಯೋಗ ನೇಮಕಾತಿ
Follow us on

ನವದೆಹಲಿ: ಅಮೆರಿಕದಲ್ಲಿ ಈಗ ಸಾಮಾನ್ಯವಾಗಿ ತಾರತಮ್ಯ ಧೋರಣೆಗೆ ಅವಕಾಶ ಕಡಿಮೆ. ಅದರ ಸಮಾಜದಲ್ಲಿ ಈಗಲೂ ವರ್ಣಭೇದದ ಗಂಧ ಇದೆಯಾದರೂ ವಿವಿಧ ರೀತಿಯ ತಾರತಮ್ಯತೆಗಳ ವಿರುದ್ಧ ಅಲ್ಲಿ ಬಲವಾದ ಕಾನೂನುಗಳಿವೆ. ಇದಕ್ಕೆ ಸಾಕ್ಷಿ ನ್ಯೂಜೆರ್ಸಿ ರಾಜ್ಯದಲ್ಲಿರುವ ಒಂದು ಐಟಿ ಸಂಸ್ಥೆಗೆ ವಿಧಿಸಲಾಗಿರುವ ದಂಡ. ಉದ್ಯೋಗ ನೇಮಕಾತಿಯಲ್ಲಿ ತಾರತಮ್ಯತೆ ಮಾಡುವಂತಹ ಜಾಹೀರಾತು ನೀಡಿದ ಹಾಗೂ ಭಾರತೀಯರಿಂದ ಮಾತ್ರವೇ ಕೆಲಸಕ್ಕಾಗಿ ಅರ್ಜಿಗಳನ್ನು ಕರೆದಿರುವ ಇನ್ಫೋಸಾಫ್ಟ್ ಸಲ್ಯೂಶನ್ಸ್ ಸಂಸ್ಥೆ (Infosoft Solutions) ವಿರುದ್ಧ 25,500 ಡಾಲರ್ (ಸುಮಾರು 21 ಲಕ್ಷ ರುಪಾಯಿ) ಮೊತ್ತದಷ್ಟು ದಂಡ ವಿಧಿಸಿದೆ. 2021ರ ಜುಲೈನಿಂದ ಆಗಸ್ಟ್​ವರೆಗೆ ತಾರತಮ್ಯತೆ ಇರುವ 6 ಉದ್ಯೋಗ ಜಾಹೀರಾತುಗಳನ್ನು ನೀಡಿರುವ ಆರೋಪ ಇನ್ಫೋಸಾಫ್ಟ್ ಸಲ್ಯೂಶನ್ಸ್ ಮೇಲಿತ್ತು. ಅದು ಸಾಬೀತಾಗಿದ್ದು, ಅಮೆರಿಕದ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆ (INA- Immigration and Nationality Act) ನಿಯಮಗಳ ಉಲ್ಲಂಘನೆ ಆಗಿದೆ ಎಂದು ಪರಿಗಣಿಸಿ ದಂಡ ವಿಧಿಸಲು ಅಲ್ಲಿನ ನ್ಯಾಯಾಲಯವೊಂದು ನಿರ್ಧರಿಸಿತು.

2021ರ ಜುಲೈನಿಂದ ಆಗಸ್ಟ್ ಅವಧಿಯಲ್ಲಿ ಇನ್ಫೋಸಾಫ್ಟ್ ಸಂಸ್ಥೆ ತಾರತಮ್ಯತೆಯಿಂದ ಕೂಡಿದ 6 ಜಾಹೀರಾತುಗಳನ್ನು ಹೊರಡಿಸಿತ್ತು. ಅದರಲ್ಲಿನ ಒಂದು ಜಾಹೀರಾತಿನಲ್ಲಿ, ಅಭ್ಯರ್ಥಿಗಳು ಭಾರತದವರಾಗಿರಬೇಕು ಎಂದು ನೀಡಲಾಗಿತ್ತು. ಇತರ ಜಾಹೀರಾತುಗಳಲ್ಲಿ, ಅಮೆರಿಕದವರಲ್ಲದ ನಾಗರಿಕರು ವೀಸಾ ಪ್ರಾಯೋಜನೆ ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು, ಅಥವಾ ಉದ್ಯೋಗ ಆಧಾರಿತ ತಾತ್ಕಾಲಿಕ ವೀಸಾ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು ಇತ್ಯಾದಿ ಷರತ್ತುಗಳನ್ನು ಹಾಕಲಾಗಿತ್ತು.

ಇದನ್ನೂ ಓದಿBernard Arnault: ವಿಶ್ವ ನಂ. 1 ಶ್ರೀಮಂತ ಆರ್ನಾಲ್ಟ್ ಒಂದೇ ದಿನದಲ್ಲಿ 11 ಬಿಲಿಯನ್ ಡಾಲರ್ ಕಳೆದುಕೊಳ್ಳಲು ಏನು ಕಾರಣ?

ಇನ್ಫೋಸಾಫ್ಟ್ ಸಂಸ್ಥೆಯ ಈ ಜಾಹೀರಾತುಗಳ ಬಗ್ಗೆ ಅಮೆರಿಕದ ನ್ಯಾಯ ಇಲಾಖೆಯ ನಾಗರಿಕ ಹಕ್ಕು ವಿಭಾಗದಿಂದ ತನಿಖೆ ನಡೆಸಲಾಗಿತ್ತು. ವೀಸಾ ಸ್ಪಾನ್ಸರ್​ಶಿಪ್ ಇಲ್ಲದವರಿಗೆ ಉದ್ಯೋಗ ಇಲ್ಲ ಎನ್ನುವ ಮೂಲಕ ಅಮೆರಿಕದ ರಾಷ್ಟ್ರೀಯರು, ಅಮೆರಿಕದ ನಾಗರಿಕರು, ಅಮೆರಿಕದ ಕಾನೂನಾತ್ಮಕ ಖಾಯಂ ನಿವಾಸಿಗಳು, ವಲಸಿಗರು ಮೊದಲಾದವರಿಗೆ ಕೆಲಸದ ಹಕ್ಕು ನಿರಾಕರಿಸುವ ಕೆಲಸ ಆಗಿದೆ ಎಂಬುದು ತನಿಖೆಯಿಂದ ಗೊತ್ತಾಗಿತ್ತು.

‘ಒಂದು ನಿರ್ದಿಷ್ಟ ದೇಶದವರಿಂದ ಅಥವಾ ಟೆಂಪರರಿ ವೀಸಾ ಅಗತ್ಯ ಇರುವ ಅಭ್ಯರ್ಥಿಗಳಿಂದ ಮಾತ್ರ ಅರ್ಜಿ ಹಾಕುವಂತೆ ಸಂಸ್ಥೆಗಳು ಜಾಹೀರಾತು ನೀಡಿರುವುದು ಇತರ ಅರ್ಹ ಕೆಲಸಗಾರರಿಗೆ ಅವಕಾಶ ನಿರಾಕರಿಸಿದಂತಾಗುತ್ತದೆ’ ಎಂದು ಸಿವಿಲ್ ರೈಟ್ಸ್ ಡಿವಿಶನ್​ನ ಅಸಿಸ್ಟೆಂಟ್ ಅಟಾರ್ನಿ ಜನರಲ್ ಕ್ರಿಸ್ಟನ್ ಕ್ಲಾರ್ಕ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿTips: ನಿಮ್ಮ ವಯಸ್ಸಿನ್ನೂ 30 ದಾಟಿಲ್ಲವೇ? ಹಣ ಸಂಪಾದನೆ, ಹಣಭದ್ರತೆಗೆ ತಪ್ಪದೇ ಈ ಕ್ರಮ ಅನುಸರಿಸಿ

ದಂಡದ ಜೊತೆಗೆ ಐಎನ್​ಎ ಕಾನೂನು ತಿಳಿಯುವಂತೆ ಸೂಚನೆ

ಇನ್ಫೋಸಾಫ್ಟ್ ಸಲ್ಯೂಶನ್ಸ್ ಕಂಪನಿ ಪರವಾಗಿ ಕೆಫೋರ್ಸ್ ಟೆಕ್ ಎಂಬ ರೆಕ್ರುಟಿಂಗ್ ಸಂಸ್ಥೆ ಈ ಜಾಹೀರಾತುಗಳನ್ನು ನೀಡಿತ್ತು. ಈ ತಪ್ಪಿಗೆ ಇನ್ಫೋಸಾಫ್ಟ್ ಕಂಪನಿಯನ್ನೇ ಹೊಣೆಯಾಗಿಸಲಾಗಿದೆ. ಇನ್ಫೋಸಾಫ್ಟ್ ಸಲ್ಯೂಶನ್ಸ್ ಸಂಸ್ಥೆಗೆ 25,500 ಡಾಲರ್ ದಂಡ ಹಾಕುವುದರ ಜೊತೆಗೆ ಅದರ ರೆಕ್ರೂಟಿಂಗ್ ಸಂಸ್ಥೆಗಳಿಗೆ ಐಎನ್​ಎ ಕಾನೂನಿನ ಬಗ್ಗೆ ತಿಳಿಹೇಳುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಹಾಗೆಯೇ, ಅದರ ಉದ್ಯೋಗ ನೀತಿಯನ್ನು ಪರಿಷ್ಕರಿಸಿ, ಅಮೆರಿಕದ ನ್ಯಾಯ ಇಲಾಖೆಯ ಕಣ್ಗಾವಲಿಗೆ ಒಳಪಡಿಸಬೇಕೆಂದೂ ಸೂಚಿಸಲಾಗಿದೆ.

ಅಮೆರಿಕದ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆ ಪ್ರಕಾರ ನಾಗರಿಕತ್ವದ ಆಧಾರದ ಮೇಲೆ ಅಥವಾ ಮೂಲ ರಾಷ್ಟ್ರೀಯತೆಯ ಆಧಾರದ ಮೇಲೆ ನೇಮಕಾತಿ ಮಾಡುವುದು ಅಥವಾ ನೇಮಕಾತಿ ನಿರಾಕರಿಸುದು ಇತ್ಯಾದಿ ಭೇದ ಭಾವ ಮಾಡುವಂತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ