ವಾಷಿಂಗ್ಟನ್, ನವೆಂಬರ್ 1: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಲು ಸಹಾಯ ಮಾಡಿದ್ದಾರೆ ಎನ್ನಲಾದವರ ಮೇಲೆ ಅಮೆರಿಕ ಕ್ರಮ ಕೈಗೊಳ್ಳುತ್ತಿದೆ. ಇಂಥ ಸುಮಾರು 400 ಸಂಖ್ಯೆಯ ಸಮೀಪದಷ್ಟು ಸಂಸ್ಥೆಗಳು ಹಾಗೂ ವ್ಯಕ್ತಿಗಳ ಎರಡು ಪಟ್ಟಿಯನ್ನು ಅಮೆರಿಕ ಬಿಡುಗಡೆ ಮಾಡಿದೆ. ಅಮೆರಿಕದ ಗೃಹ ಇಲಾಖೆಯು 120ಕ್ಕೂ ಹೆಚ್ಚು ಜನರು ಮತ್ತು ಸಂಸ್ಥೆಗಳನ್ನು ನಿಷೇಧಿಸಿದೆ. ಇನ್ನು, ಹಣಕಾಸು ಇಲಾಖೆಯು 270ಕ್ಕೂ ಹೆಚ್ಚು ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಅಮೆರಿಕದ ವಾಣಿಜ್ಯ ಇಲಾಖೆಯು 40 ಸಂಸ್ಥೆಗಳನ್ನು ನಿಷೇಧಿಸಿದೆ.
ರಷ್ಯನ್ ವ್ಯಕ್ತಿಗಳು ಮತ್ತು ಸಂಸ್ಥೆಗಳ ಜೊತೆಗೆ ಚೀನಾ, ಭಾರತ, ಮಲೇಷ್ಯಾ, ಥಾಯ್ಲೆಂಡ್, ಟರ್ಕಿ, ಯುಎಇ ಮೊದಲಾದ ಕೆಲ ದೇಶಗಳ ಸಂಸ್ಥೆಗಳೂ ಅಮೆರಿಕದ ನಿಷೇಧಿತ ಪಟ್ಟಿಯಲ್ಲಿವೆ. ಉಕ್ರೇನ್ ವಿರುದ್ಧ ಯುದ್ಧಕ್ಕೆ ಬೇಕಾದ ಹಣಕಾಸು ವ್ಯವಸ್ಥೆ, ಸರಕು ಸರಬರಾಜು, ಯುದ್ಧ ಸಾಮಗ್ರಿಗಳ ಸರಬರಾಜು ಪಡೆಯಲು ರಷ್ಯಾಗೆ ಸಾಧ್ಯವಾಗದ ರೀತಿಯಲ್ಲಿ ಏನೇನು ಮಾಡಬಹುದು ಎಲ್ಲಾ ಮಾರ್ಗೋಪಾಯಗಳನ್ನು ಅನುಸರಿಸುವುದಾಗಿ ಅಮೆರಿಕ ಬಹಳ ಸ್ಪಷ್ಟವಾಗಿ ಹೇಳುತ್ತಿದೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗುತ್ತಿರುವ ವಿವಿಧ ಕ್ರಮಗಳಲ್ಲಿ ಈ ನಿಷೇಧವೂ ಒಂದು.
ಇದನ್ನೂ ಓದಿ: ಪ್ರಧಾನಿಗಳ ಮುಖ್ಯ ಆರ್ಥಿಕ ಸಲಹೆಗಾರ ಹಾಗೂ ಧೀಮಂತ ಆರ್ಥಿಕ ತಜ್ಞ ವಿವೇಕ್ ದೇಬರಾಯ್ ವಿಧಿವಶ
ಈಗ ನಿಷೇಧಿಸಲಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ರಷ್ಯಾದ ಮಿಲಿಟರಿಗೆ ಅಗತ್ಯವಾದ ವಸ್ತುಗಳ ಸರಬರಾಜು ನೆಟ್ವರ್ಕ್ನಲ್ಲಿ ಶಾಮೀಲಾದವರೇ ಆಗಿದ್ದಾರೆ.
ಅಸೆಂಡ್ ಏವಿಯೇಶನ್ ಇಂಡಿಯಾ ಸಂಸ್ಥೆ 2023ರ ಮಾರ್ಚ್ನಿಂದ 2024ರ ಮಾರ್ಚ್ವರೆಗಿನ ಅವಧಿಯಲ್ಲಿ ರಷ್ಯಾ ಮೂಲದ ಕಂಪನಿಗಳಿಗೆ 700 ಪಾರ್ಸಲ್ ಕಳುಹಿಸಿದೆ. ಅಮೆರಿಕ ನಿರ್ಮಿತ ಏರ್ಕ್ರಾಫ್ಟ್ ಕಾಂಪೊನೆಂಟ್ ಇತ್ಯಾದಿ ಸುಮಾರು 2 ಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ಈ ಕಂಪನಿಯು ರಷ್ಯಾಗೆ ಸರಬರಾಜು ಮಾಡಿತ್ತೆನ್ನಲಾಗಿದೆ.
ಮಾಸ್ಕ್ ಟ್ರಾನ್ಸ್ ಎನ್ನುವ ಮತ್ತೊಂದು ಭಾರತೀಯ ಕಂಪನಿ ಕೂಡ 2023ರ ಜೂನ್ನಿಂದ 2024ರ ಏಪ್ರಿಲ್ವರೆಗೆ ವೈಮಾನಿಕ ಬಿಡಿಭಾಗಗಳು ಸೇರಿದಂತೆ 3 ಲಕ್ಷ ಡಾಲರ್ ಮೌಲ್ಯದ ಸಿಎಚ್ಪಿಎಲ್ ವಸ್ತುಗಳನ್ನು ರಷ್ಯನ್ ಮೂಲದ ಎಸ್7 ಎಂಜಿನಿಯರಿಂಗ್ ಎನ್ನುವ ಸಂಸ್ಥೆಗೆ ಸರಬರಾಜು ಮಾಡಿದೆಯಂತೆ.
ಇದನ್ನೂ ಓದಿ: ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಬೆಲೆ ಸತತ ನಾಲ್ಕನೇ ಬಾರಿ ಏರಿಕೆ; ಬೆಂಗಳೂರಿನಲ್ಲಿ 61 ರೂ ಹೆಚ್ಚಳ
ಸಿಎಚ್ಪಿಎಲ್ ವಸ್ತು ಎಂದರೆ ಬಹಳ ಅಗತ್ಯ ಇರುವ ಸಾಮಾನ್ಯ ವಸ್ತುಗಳು. ಮಿಲಿಟರಿ ಉಪಕರಣ ಮತ್ತು ಶಸ್ತ್ರಾಸ್ತ್ರಗಳ ಅಸೆಂಬ್ಲಿಂಗ್ಗೆ ಅಗತ್ಯವಾಗಿರುವ ಬಿಡಿಭಾಗಗಳಿವು.
ಭಾರತ ಮೂಲದ ಟಿಎಸ್ಎಂಡಿ ಗ್ಲೋಬಲ್ ಪ್ರೈ ಎನ್ನುವ ಸಂಸ್ಥೆ 2023ರ ಜುಲೈನಿಂದ 2024ರ ಮಾರ್ಚ್ವರೆಗೆ ರಷ್ಯನ್ ಕಂಪನಿಗಳಿಗೆ 4,30,000 ಡಾಲರ್ ಮೌಲ್ಯದ ಸಿಎಚ್ಪಿಎಲ್ ವಸ್ತುಗಳನ್ನು ಪೂರೈಕೆ ಮಾಡಿದ ಆರೋಪ ಎದುರಿಸುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಐಸಿ, ಸಿಪಿಯು ಹಾಗೂ ಇತರ ಫಿಕ್ಸೆಡ್ ಕೆಪಾಸಿಟರ್ಗಳಂತಹ ಪ್ರಮುಖ ವಸ್ತುಗಳು ಸೇರಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ