ಭಾರತದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ 5 ವರ್ಷ ಪ್ರಸಾರ ಹಕ್ಕು ವಯಾಕಾಮ್18 ಪಾಲು
Viacom18 Media Rights of BCCI: 2023ರ ಸೆಪ್ಟೆಂಬರ್-ಅಕ್ಟೋಬರ್ನಿಂದ ಹಿಡಿದು 2028ರವರೆಗೆ ಭಾರತ ಕ್ರಿಕೆಟ್ ತಂಡ ತವರಿನಲ್ಲಿ ಆಡುವ 88 ಪಂದ್ಯಗಳ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕನ್ನು ವಯಾಕಾಮ್18 ಸಂಸ್ಥೆ ಖರೀದಿಸಿದೆ. ಬಿಸಿಸಿಐ 5,963 ಕೋಟಿ ರೂಗೆ ಈ ಮೀಡಿಯಾ ರೈಟ್ಸ್ ಅನ್ನು ವಯಾಕಾಮ್18ಗೆ ಮಾರಾಟ ಮಾಡಿದೆ. ವಯಾಕಾಮ್18 ಸಂಸ್ಥೆ ಒಂದು ಪಂದ್ಯದ ಪ್ರಸಾರದ ಹಕ್ಕಿಗೆ 67.8 ಕೋಟಿ ರೂ ನೀಡಿದಂತಾಗಿದೆ.
ನವದೆಹಲಿ, ಆಗಸ್ಟ್ 31: ರಿಲಾಯನ್ಸ್ ಸಮೂಹಕ್ಕೆ ಸೇರಿದ ವಯಾಕಾಮ್18 ಸಂಸ್ಥೆ (Viacom18) 5,963 ಕೋಟಿ ರೂ ಮೊತ್ತದ ಕ್ರಿಕೆಟ್ ಪಂದ್ಯಗಳ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ. ಐದು ವರ್ಷದವರೆಗೆ ಭಾರತ ಕ್ರಿಕೆಟ್ ತಂಡದ ಹೋಮ್ ಮ್ಯಾಚ್ಗಳ ಪ್ರಸಾರದ ಹಕ್ಕು ಇದು. ಟಿವಿ ಮತ್ತು ಡಿಜಿಟಲ್ ಎರಡೂ ಹಕ್ಕುಗಳು ವಯಾಕಾಮ್18ಗೆ ಸಿಕ್ಕಿದೆ. ಕ್ರಿಕೆಟ್ ಪಂದ್ಯಗಳ ಡಿಜಿಟಲ್ ಪ್ರಸಾರದ ಹಕ್ಕನ್ನು 3,103 ಕೋಟಿ ರೂಗೆ ಖರೀದಿಸಿದೆ. ಹಾಗೆಯೇ, ಟಿವಿ ಪ್ರಸಾರದ ಹಕ್ಕಿಗೆ 2,862 ಕೋಟಿ ರೂ ಹಣ ತೆತ್ತಿದೆ. ಟಿವಿ ಮತ್ತು ಡಿಜಿಟಲ್ನಲ್ಲಿ ಒಂದು ಪಂದ್ಯದ ಪ್ರಸಾರದ ಹಕ್ಕಿಗೆ ವಯಾಕಾಮ್ ಕ್ರಮವಾಗಿ 32.52 ಕೋಟಿ ರೂ ಮತ್ತು 35.23 ಕೋಟಿ ರೂ ಪಾವತಿಸುವಂತಾಗುತ್ತದೆ. ಅಂದರೆ ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ಸೇರಿ ಒಂದು ಪಂದ್ಯಕ್ಕೆ ಪ್ರಸಾರ ಹಕ್ಕಿಗೆ ಬೆಲೆ 67.8 ಕೋಟಿ ರೂ ಆಗುತ್ತದೆ.
ಬಿಸಿಸಿಐ ಕಾರ್ಯದರ್ಶಿ ಎಕ್ಸ್ (X- Twitter) ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಮುಂದಿನ 5 ವರ್ಷ ಕಾಲ ಟಿವಿ ಮತ್ತು ಡಿಜಿಟಲ್ ಎರಡಕ್ಕೆ ಬಿಸಿಸಿಐನ ಮಾಧ್ಯಮ ಹಕ್ಕನ್ನು ಗೆದ್ದ ವಯಾಕಾಮ್18ಗೆ ಅಭಿನಂದನೆಗಳು. ಈ ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ಭಾರತೀಯ ಕ್ರಿಕೆಟ್ ಜನಪ್ರಿಯತೆ ಹೆಚ್ಚಲಿದೆ. ನಾವೆಲ್ಲರೂ ಸೇರಿ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಈಡೇರಿಸುವ ಕೆಲಸ ಮುಂದುವರಿಸೋಣ’ ಎಂದು ಜಯ್ ಷಾ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಂಜು ಟು ಯುವರಾಜ್; ಯೋ- ಯೋ ಟೆಸ್ಟ್ನಲ್ಲಿ ಫೇಲ್ ಆದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಿವರು
ಹಾಗೆಯೇ, ಇಲ್ಲಿಯವರೆಗೆ ಭಾರತ ಕ್ರಿಕೆಟ್ ತಂಡದ ಪಂದ್ಯಗಳ ಪ್ರಸಾರ ಹಕ್ಕು ಪಡೆದಿದ್ದ ಡಿಸ್ನಿ ಹಾಟ್ಸ್ಟಾರ್ ಸಂಸ್ಥೆಗೂ ಜಯ್ ಶಾ ಕೃತಜ್ಞತೆ ಸಲ್ಲಿಸಿದ್ದಾರೆ.
Congratulations @viacom18 🤝 for winning the @BCCI Media Rights for both linear and digital for the next 5 years. India Cricket will continue to grow in both spaces as after @IPL, and @wplt20, we extend the partnership @BCCI Media Rights as well. Together we will continue to…
— Jay Shah (@JayShah) August 31, 2023
Also a big thank you to @starindia @DisneyPlusHS for your support over the years. You played a key role in making India Cricket reach its fans across the globe. 2/2
— Jay Shah (@JayShah) August 31, 2023
ಬಿಸಿಸಿಐ ಮತ್ತು ವಯಾಕಾಮ್18 ಮಧ್ಯೆ ಆಗಿರುವ ಒಪ್ಪಂದ 2028ರ ಮಾರ್ಚ್ವರೆಗೂ ಇರುತ್ತದೆ. ಸೆಪ್ಟೆಂಬರ್ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಓಡಿಐ ಸರಣಿ ಮೂಲಕ ಈ ಒಪ್ಪಂದ ಆರಂಭವಾಗಲಿದೆ. ಈ ವೇಳೆ ಭಾರತದಲ್ಲಿ 88 ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕನ್ನು ವಯಾಕಾಮ್18 ಪಡೆದುಕೊಂಡಿದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ, ಯಾವ್ಯಾವುದಕ್ಕೆ ಲಿಂಕ್ ಆಗಿದೆ? ತಿಳಿಯುವ ಸುಲಭ ವಿಧಾನ ಇಲ್ಲಿದೆ
ವಯಾಕಾಮ್18 ಸಂಸ್ಥೆ ಐಪಿಎಲ್ ಕ್ರಿಕೆಟ್ ಲೀಗ್ನ ಡಿಜಿಟಲ್ ಹಕ್ಕುಗಳನ್ನು ಈಗಾಗಲೇ ಪಡೆದುಕೊಂಡಿದೆ. ಇನ್ನು, ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯ ಪಂದ್ಯಗಳ ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳನ್ನೂ ಪಡೆದಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ