
ನವದೆಹಲಿ, ಜೂನ್ 6: ವಿಜಯ್ ಮಲ್ಯ ಹೆಸರು ಕೇಳದ ಭಾರತೀಯರು ಕಡಿಮೆಯೇ. ಬಹಳ ಮಜವೆನಿಸುತ್ತಿದ್ದ ವ್ಯಕ್ತಿತ್ವ. ಬ್ಯಾಂಕುಗಳಿಗೆ ಪಂಗನಾಮ ಹಾಕಿ ದೇಶಬಿಟ್ಟು ಪರಾರಿಯಾದ ಎನ್ನುವ ಕಳ್ಳನ ಹಣೆಪಟ್ಟಿ ಹೊತ್ತು ಈಗಲೂ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಆಗಾಗ್ಗೆ ಹಬ್ಬ ಹರಿದಿನಗಳಲ್ಲಿ ಶುಭಕಾಮನೆಗಳನ್ನು ತಿಳಿಸಿ ಎಕ್ಸ್ನಲ್ಲಿ ಒನ್ಲೈನರ್ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಆರ್ಸಿಬಿ ಐಪಿಎಲ್ ಗೆದ್ದ ಮೇಲೆ ಬಹಳಷ್ಟು ಮಾಧ್ಯಮಗಳು ವಿಜಯ್ ಮಲ್ಯ ಅವರನ್ನು ನೆನಪಿಸಿಕೊಂಡಿವೆ. ಇದೇ ಹೊತ್ತಲ್ಲಿ ಎಲ್ಲರಿಗೂ ಶಾಕ್ ಆಗುವಂತೆ ಸ್ವತಃ ವಿಜಯ್ ಮಲ್ಯ (Vijay Mallya) ಅವರು ಪಾಡ್ಕ್ಯಾಸ್ಟ್ವೊಂದರಲ್ಲಿ ಸಂದರ್ಶನ ನೀಡಿ ತಮ್ಮ ಹೊಟ್ಟೆಯೊಳಗಿನ ಸಂಕಟವನ್ನೆಲ್ಲಾ ತೋಡಿಕೊಂಡಿದ್ದಾರೆ.
ರಾಜ್ ಶಮಾನಿ ಎನ್ನುವ ಖ್ಯಾತ ಯೂಟ್ಯೂಬರ್ ಜೊತೆ ವಿಜಯ್ ಮಲ್ಯ ಮಾತನಾಡಿದ್ದಾರೆ. ಈ ಸಂದರ್ಶನ ಬರೋಬ್ಬರಿ ನಾಲ್ಕು ಗಂಟೆಯಷ್ಟು ಸುದೀರ್ಘ ಅವಧಿ ಇದೆ. 2016ರಲ್ಲಿ ಅವರು ದೇಶ ಬಿಟ್ಟು ಹೋದ ಬಳಿಕ ಭಾರತೀಯ ಮಾಧ್ಯಮಗಳಲ್ಲಿ ಮಾತನಾಡಿದ್ದು ಇದೇ ಮೊದಲು. ಈ ಇಂಟರ್ವ್ಯೂನಲ್ಲಿ ಅವರು ಸರ್ಕಾರ, ಮಾಧ್ಯಮ, ಅಧಿಕಾರಿಗಳು, ಬ್ಯಾಂಕುಗಳು, ರಾಜಕಾರಣಿಗಳು ಎಲ್ಲರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ವೈಯಕ್ತಿಕ ಜೀವನ ಹೇಗಿತ್ತೂ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಕಷ್ಟಕಾಲದಲ್ಲಿ ತಮ್ಮ ಜೊತೆ ನಿಲ್ಲುವ ನಿಜ ಸ್ನೇಹಿತರು ಯಾರೆಂದು ತಿಳಿಯಿತು ಎನ್ನುವ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.
ವಿಜಯ್ ಮಲ್ಯ ಈ ಪಾಡ್ಕ್ಯಾಸ್ಟ್ನಲ್ಲಿ ಏನು ಮಾತನಾಡಿದರು ಎನ್ನುವುದಕ್ಕಿಂತ ಮುಂಚೆ, ಅವರು ದೇಶ ಬಿಟ್ಟು ಹೋಗಲು ಏನು ಕಾರಣ ಎನ್ನುವ ಒಂದು ಸಣ್ಣ ಪರಿಚಯ ಇಲ್ಲಿದೆ.
ಇದನ್ನೂ ಓದಿ: ವಿಶ್ವದ ಟಾಪ್-4ಗೆ ಪೈಪೋಟಿ ನೀಡಬಲ್ಲ ಭಾರತದ್ದೇ ದೊಡ್ಡ ಕಂಪನಿಗಳ ನಿರ್ಮಾಣಕ್ಕೆ ಸರ್ಕಾರ ಯತ್ನ
ವಿಜಯ್ ಮಲ್ಯ ಯುನೈಟೆಡ್ ಬ್ರಿವರೀಸ್ ಸಂಸ್ಥೆ ಮೂಲಕ ಮದ್ಯಲೋಕದ ದೊರೆ ಎನಿಸಿದ ಉದ್ಯಮಿ. ಆರ್ಸಿಬಿ ತಂಡದ ಮಾಲೀಕರಾದವರು. ಫಾರ್ಮುಲಾ ಒನ್ ರೇಸಿಂಗ್ ತಂಡವೊಂದರ ಮಾಲೀಕರಾದ ಮೊದಲ ಭಾರತೀಯನೂ ಅವರು. ಇಂತಿಪ್ಪ ಇವರು ಕಿಂಗ್ಫಿಶರ್ ಏರ್ಲೈನ್ಸ್ ಎನ್ನುವ ವಿಮಾನ ಕಂಪನಿಯನ್ನು ಸ್ಥಾಪಿಸಿದ್ದರು. ಇದು ನಷ್ಟಕ್ಕೆ ತಿರುಗಿತು. 2012ರಲ್ಲಿ ಕಾರ್ಯಾಚರಣೆ ನಿಲ್ಲಿಸಿತು. ಬ್ಯಾಂಕುಗಳು ಸಾಲ ವಸೂಲಾತಿಗೆ ಮುಂದಾದವು. ಸಿಬಿಐ, ಇಡಿಯಿಂದ ತನಿಖೆ ಆರಂಭಗೊಂಡಿತು. ವಿವಿಧ ಕೇಸ್ಗಳು ದಾಖಲಾದವು. 2016ರ ಮಾರ್ಚ್ ತಿಂಗಳಲ್ಲಿ ವಿಜಯ್ ಮಲ್ಯ ಭಾರತ ಬಿಟ್ಟು ಹೊರಗೆ ಹೋದರು. ಮಲ್ಯ ಬ್ಯಾಂಕುಗಳ ಹಣ ನುಂಗಿ ಪಲಾಯನಗೊಂಡ ಎನ್ನುವಂತಹ ಸುದ್ದಿಗಳು ಕೇಳಿಬರುತ್ತಲೇ ಇವೆ.
ಪಾಡ್ಕ್ಯಾಸ್ಟ್ನಲ್ಲಿ ವಿಜಯ್ ಮಲ್ಯ ಈ ವಿಚಾರದ ಬಗ್ಗೆ ಬಹಳ ನೋವಿನಿಂದ ಪ್ರತಿಕ್ರಿಯೆ ನೀಡಿದರು. ಮಾಧ್ಯಮಗಳು ಮನಬಂದಂತೆ ನನ್ನ ವಿರುದ್ಧ ಮಾತನಾಡಿವೆ. ಇಷ್ಟಬಂದಂತೆ ಕಥೆಗಳನ್ನು ಹೇಳಿವೆ. ಬ್ಯಾಂಕುಗಳು ಅಪ್ರಾಮಾಣಿಕವಾಗಿ ನಡೆದುಕೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿಂಗ್ ಫಿಶರ್ ಏರ್ಲೈನ್ಸ್ ಮುಚ್ಚಿದ್ದು ಯಾಕೆ ಎಂದು ವಿಜಯ್ ಮಲ್ಯ ಕೆಲ ಕಾರಣಗಳನ್ನು ಬಿಚ್ಚಿಟ್ಟರು. 2008ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದಾಗಿ ಕಿಂಗ್ಫಿಶರ್ ಏರ್ಲೈನ್ಸ್ ಸಂಕಷ್ಟಕ್ಕೆ ಸಿಲುಕಿತ್ತು. ಬಹಳ ದೊಡ್ಡ ಏರ್ಲೈನ್ಸ್ ಆಗಿದ್ದರಿಂದ ಅದನ್ನು ಆ ಸ್ಥಿತಿಯಲ್ಲಿ ತನಗೆ ನಡೆಸಲು ಆಗುತ್ತಿರಲಿಲ್ಲ. ಆಗ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿಯವರನ್ನು ಭೇಟಿಯಾಗಿ ಮಾತನಾಡಿದೆ. ವಿಮಾನಗಳ ಹಾರಾಟ ಮತ್ತು ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುತ್ತೇನೆ ಎಂದೆ. ಅದಕ್ಕೆ ಮುಖರ್ಜಿ ಒಪ್ಪಲಿಲ್ಲ ಎಂದು ವಿಜಯ್ ಮಲ್ಯ ವಿವರಿಸಿದರು.
ಇದನ್ನೂ ಓದಿ: ಸರ್ಕಾರಕ್ಕೆ ಅದಾನಿ ಗ್ರೂಪ್ನಿಂದ ಸಖತ್ ಟ್ಯಾಕ್ಸ್ ಕಲೆಕ್ಷನ್; ಇಡೀ ಬೆಂಗಳೂರು ಮೆಟ್ರೋ ನಿರ್ಮಾಣಕ್ಕಾಗುವಷ್ಟು ಹಣ ಅದು
‘ಈ ಸಂದರ್ಭದಲ್ಲಿ ವಿಮಾನ ಕಾರ್ಯಾಚರಣೆ ಕಡಿಮೆ ಮಾಡುವುದು ಸರಿಯಲ್ಲ. ಬ್ಯಾಂಕುಗಳು ನಿಮ್ಮ ಬೆಂಬಲಕ್ಕಿರುತ್ತವೆ, ನೀವು ಮುಂದುವರಿಸಿ ಎಂದರು’ ಎಂದು ಮಲ್ಯ ಹೇಳಿದರು.
ಅದಾದ ಬಳಿಕ 2013ರಲ್ಲಿ ಕಿಂಗ್ಫಿಶರ್ ಏರ್ಲೈನ್ಸ್ಗೆ ಮುಂದುವರಿಸಲು ಆಗದೇ ಬಂದ್ ಆಯಿತು. ಅಲ್ಲಿಂದ ಮಲ್ಯ ಹಣೆಬರಹ ಬದಲಾಗಿ ಹೋಗಿತ್ತು.
ತಾನು ಎಷ್ಟು ಸಾಲ ಪಡೆದಿದ್ದೇನೆ, ಎಷ್ಟು ಬಾಕಿ ಇದೆ ಎಂದು ಬ್ಯಾಂಕುಗಳು ಹೇಳುತ್ತಲೇ ಇರಲಿಲ್ಲ. ನಾಲ್ಕು ಸಾವಿರ ಕೋಟಿ ರೂ ಚಿಲ್ಲರೆಯಷ್ಟು ಸಾಲ ಇತ್ತು. ಬಡ್ಡಿ ಎಲ್ಲಾ ಸೇರಿ 6,200 ಕೋಟಿ ರೂ ಸಾಲ ಇತ್ತು. ಆದರೆ, 14,131 ಕೋಟಿ ರೂ ಮೌಲ್ಯದ ನನ್ನ ಆಸ್ತಿಪಾಸ್ತಿಗಳನ್ನು ಜಫ್ತಿ ಮಾಡಿದ್ದಾರೆ. ನಾನು ಕೊಡಬೇಕಾದ ಹಣಕ್ಕಿಂತ ಎರಡು ಪಟ್ಟು ಹಣವನ್ನು ಅವರು ವಸೂಲಿ ಮಾಡಿದ್ಧಾರೆ.
ಭಾರತದಲ್ಲಿ ಮಾಧ್ಯಮಗಳಲ್ಲಿ ಬರುವ ನಿರೂಪಣೆಯೇ ಜನರ ಅಭಿಪ್ರಾಯವನ್ನು ರೂಪಿಸುತ್ತದೆ. ಮಾಧ್ಯಮಗಳು ನನ್ನನ್ನು ಕಳ್ಳ, ದೇಶಭ್ರಷ್ಟ ಎಂದು ಕರೆಯುತ್ತವೆ. ದೇಶ ಬಿಟ್ಟು ಬಂದಿದ್ದೇನೆ, ದೇಶಭ್ರಷ್ಟ ಎಂದು ಬೇಕಾದರೆ ಅನ್ನಲಿ. ಆದರೆ ಕಳ್ಳ ಅಂತ ಯಾಕೆ ಅನ್ನೋದು. ನಾನೇನು ಕಳ್ಳತನ ಮಾಡಿದ್ದೇನೆ ಹೇಳಲಿ ಎಂದು ವಿಜಯ್ ಮಲ್ಯ ಸವಾಲು ಹಾಕಿದರು.
ಭಾರತದಲ್ಲಿ ಯಾರೇನೇ ಹೇಳಲಿ, ಯಾರೇ ಅಧಿಕಾರಕ್ಕೆ ಬರಲಿ ಅದು ಬದಲಾಗದು. ಅಲ್ಲಿ ಈಸ್ ಆಫ್ ಬ್ಯುಸಿನೆಸ್ ಇದೆ ಅನ್ನೋದೆಲ್ಲಾ ಸುಳ್ಳು. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಯಾರೇ ಬಂದರೂ ಅದೇ ಜಾಯಮಾನ ಎಂದು ವಿಜಯ್ ಮಲ್ಯ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿರಳ ಭೂಖನಿಜದೊಂದಿಗೆ ಚೀನಾ ಆಟ; ಇಡೀ ವಿಶ್ವಕ್ಕೆ ಸಂಕಟ; ಭಾರತದಿಂದ ಪರ್ಯಾಯ ಮಾರ್ಗ ಹುಡುಕಾಟ
ಕಷ್ಟಕಾಲದಲ್ಲಿ ಯಾರು ಜೊತೆಗಿರುತ್ತಾರೆ ಎನ್ನುವುದು ಗೊತ್ತಾಯಿತು. ಭಾರತದಲ್ಲಿ ಹಲವರು ನನ್ನ ಜೊತೆ ಗುರುತಿಸಿಕೊಳ್ಳಲು ಹೆದರುತ್ತಾರೆ. ಮಲ್ಯ ಜೊತೆ ಕಾಣಿಸಿಕೊಂಡರೆ ತಮ್ಮ ಮೇಲೆ ಕ್ರಮ ಜರುಗಿಸಬಹುದು ಎಂದು ಅವರು ಹೇಳುವುದುಂಟು. ಆದರೆ, ಕಿರಣ್ ಮಜುಮ್ದಾರ್ ಯಾವತ್ತೂ ನನ್ನೊಂದಿಗೆ ಸಂಪರ್ಕದಲ್ಲಿದ್ದವರು. ಆಕೆ ನನಗೆ ಸೋದರಿ ಇದ್ದಂತೆ ಎಂದು ಬಯೋಕಾನ್ ಮುಖ್ಯಸ್ಥೆ ಬಗ್ಗೆ ಮಲ್ಯ ಮಮಕಾರ ವ್ಯಕ್ತಪಡಿಸಿದರು.
ತಮ್ಮ ವಿರುದ್ಧದ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ಮತ್ತು ನ್ಯಾಯಯುತವಾಗಿ ವಿಚಾರಣೆ ನಡೆಯುವುದಾದರೆ ತಾನು ಭಾರತಕ್ಕೆ ಬರಲು ಸಿದ್ಧ ಎಂದು ಈ ರಾಜ್ ಶಮಾನಿಯ ಯೂಟ್ಯೂಬ್ ವಾಹಿನಿಗೆ ನೀಡಿದ ಪಾಡ್ಕ್ಯಾಸ್ಟ್ನಲ್ಲಿ ಮಲ್ಯ ಹೇಳಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:19 pm, Fri, 6 June 25