CRR: ಆರ್ಬಿಐ ಸಿಆರ್ಆರ್ ಕಡಿತದಿಂದ ಲಕ್ಷಾಂತರ ಕೋಟಿ ರೂ ಹಣದ ಹರಿವಿನ ನಿರೀಕ್ಷೆ; ಇದು ಹೇಗೆ ಸಾಧ್ಯ?
RBI reduces cash reserve ratio to 3pc: ಆರ್ಬಿಐ ಶೇ. 4 ಇದ್ದ ತನ್ನ ಸಿಆರ್ಆರ್ ಅನ್ನು ಶೇ. 3ಕ್ಕೆ ಇಳಿಸಿದೆ. ಅಂದರೆ, ಬರೋಬ್ಬರಿ 100 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಸಿಆರ್ಆರ್ ಇಳಿಕೆಯಿಂದ ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚುವರಿ ಎರಡೂವರೆ ಲಕ್ಷ ಕೋಟಿ ರೂ ಹಣದ ಹರಿವು ಹೆಚ್ಚಲಿದೆ. ರಿಪೋದರವನ್ನೂ 50 ಮೂಲಾಂಕಗಳಷ್ಟು ಇಳಿಸಲಾಗಿದೆ. ಇವೆರಡು ಸೇರಿ ಆರ್ಥಿಕತೆಗೆ ದೊಡ್ಡ ಪುಷ್ಟಿ ಕೊಡುವ ನಿರೀಕ್ಷೆ ಇದೆ.

ನವದೆಹಲಿ, ಜೂನ್ 6: ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಸಮಿತಿ (RBI MPC meeting) ಸಭೆಯಲ್ಲಿ ರಿಪೋ ದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡುವ ಬಹಳ ದೊಡ್ಡ ನಿರ್ಧಾರದ ಜೊತೆಗೆ ಮತ್ತೊಂದು ಮಹತ್ವದ ನಿರ್ಧಾರವೂ ಹೊರಬಂದಿದೆ. ಅದು ಸಿಆರ್ಆರ್ (CRR) ಅಥವಾ ಕ್ಯಾಷ್ ರಿಸರ್ವ್ ರೇಶಿಯೋದ ಇಳಿಕೆ. ಈ ಸಿಆರ್ಆರ್ ದರವನ್ನು 100 ಮೂಲಾಂಕಗಳಷ್ಟು ಇಳಿಸಲಾಗಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಶೇ. 4ರಷ್ಟಿರುವ ಸಿಆರ್ಆರ್ ಅನ್ನು ಶೇ 3ಕ್ಕೆ ಇಳಿಸಲಾಗಲಿದೆ.
2025ರ ಸೆಪ್ಟೆಂಬರ್ನಿಂದ ಆರಂಭವಾಗಿ ನಾಲ್ಕು ಹಂತಗಳಲ್ಲಿ ತಲಾ 25 ಮೂಲಾಂಕಗಳಂತೆ ಸಿಆರ್ಆರ್ ಅನ್ನು ಇಳಿಸಲಾಗುವುದು ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ. ಈ ಕ್ರಮದಿಂದ ಮುಂಬರುವ ದಿನಗಳಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ 2.50 ಲಕ್ಷ ಕೋಟಿ ರೂ ಲಿಕ್ವಿಡಿಟಿ ಸಿಗಲಿದೆ ಎಂದಿದ್ದಾರೆ. ಲಿಕ್ವಿಡಿಟಿ ಹೆಚ್ಚಲಿದೆ ಎಂದರೆ ಹಣದ ಹರಿವು ಹೆಚ್ಚಲಿದೆ. ಅಂದರೆ, ಬ್ಯಾಂಕುಗಳ ಬಳಿ ಇರುವ ಹಣ ಎರಡೂವರೆ ಲಕ್ಷ ಕೋಟಿ ರೂನಷ್ಟು ಹೆಚ್ಚಲಿದೆ. ಸಾಲ ಕೊಡಲು ಬ್ಯಾಂಕುಗಳ ಬಳಿ ಹೆಚ್ಚು ಹಣ ಇರಲಿದೆ.
ಇದನ್ನೂ ಓದಿ: 2025-26ರಲ್ಲಿ ಜಿಡಿಪಿ ಶೇ. 6.5, ಹಣದುಬ್ಬರ ಶೇ. 3.7: ಆರ್ಬಿಐ ಅಂದಾಜು
ಕ್ಯಾಷ್ ರಿಸರ್ವ್ ರೇಶಿಯೋ ಎಂದರೆ ಏನು?
ಸಿಆರ್ಆರ್ ಅಥವಾ ಕ್ಯಾಷ್ ರಿಸರ್ವ್ ರೇಶಿಯೋ ಎನ್ನುವುದು ಬ್ಯಾಂಕುಗಳು ತಮ್ಮಲ್ಲಿರುವ ಒಟ್ಟಾರೆ ಠೇವಣಿಯಲ್ಲಿ ನಿರ್ದಿಷ್ಟ ಭಾಗವನ್ನು ಆರ್ಬಿಐನಲ್ಲಿ ಇರಿಸಬೇಕು ಎನ್ನುವ ನಿಯಮ. ಉದಾಹರಣೆಗೆ, ಸಿಆರ್ಆರ್ ಶೇ. 4 ಎಂದಿದೆ ಎಂದು ಭಾವಿಸೋಣ. ಒಂದು ಬ್ಯಾಂಕ್ ತನ್ನ ಗ್ರಾಹಕರಿಂದ ಪಡೆದ ಠೇವಣಿಗಳ ಒಟ್ಟು ಮೊತ್ತ 1,000 ಕೋಟಿ ರೂ ಆಗುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕು ಶೇ. 4ರಷ್ಟು ಹಣವನ್ನು, ಅಂದರೆ, 40 ಕೋಟಿ ರೂನಷ್ಟು ಹಣವನ್ನು ಆರ್ಬಿಐನಲ್ಲಿ ಇರಿಸಬೇಕು. ಇದು ಸಿಆರ್ಆರ್.
ಸಿಆರ್ಆರ್ ಎನ್ನುವುದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣದ ಹರಿವಿನ ಮೇಲೆ ನಿಯಂತ್ರಣ ಸಾಧಿಸಲು ಆರ್ಬಿಐ ಬಳಿ ಇರುವ ಕೆಲ ಪ್ರಮುಖ ಮಾರ್ಗಗಳಲ್ಲಿ ಒಂದು. ರಿಪೋ ದರ, ಸಿಆರ್ಆರ್ ಇತ್ಯಾದಿಯನ್ನು ಹಣದುಬ್ಬರ ನಿಯಂತ್ರಣಕ್ಕೆ ಆರ್ಬಿಐ ಬಳಸುತ್ತದೆ.
ಸಿಆರ್ಆರ್ ಇಳಿಕೆಯಿಂದ ಹಣದ ಹರಿವು ಹೇಗೆ ಹೆಚ್ಚುತ್ತದೆ?
ಕ್ಯಾಷ್ ರಿಸರ್ವ್ ರೇಶಿಯೋವನ್ನು ಶೇ. 4ರಿಂದ ಶೇ. 3ಕ್ಕೆ ಇಳಿಸಲಾಗಿದೆ. ಸೆಪ್ಟೆಂಬರ್ 6, ಅಕ್ಟೋಬರ್ 4, ನವೆಂಬರ್ 1 ಮತ್ತು ನವೆಂಬರ್ 29ರಂದು ನಾಲ್ಕು ಬಾರಿ ತಲಾ 25 ಮೂಲಾಂಕಗಳಷ್ಟು ಸಿಆರ್ಆರ್ ಇಳಿಕೆ ಪ್ರಕ್ರಿಯೆ ನಡೆಯುತ್ತದೆ.
ಇದನ್ನೂ ಓದಿ: ಆರ್ಬಿಐ ರಿಪೋ ದರ 50 ಮೂಲಾಂಕಗಳಷ್ಟು ಕಡಿತ; ಬಡ್ಡಿದರ ಈಗ ಶೇ. 5.50ಕ್ಕೆ ಇಳಿಕೆ
ಇದರಿಂದ ಹಂತ ಹಂತವಾಗಿ ಬ್ಯಾಂಕುಗಳಿಗೆ ಹಣದ ಹರಿವು ಹೆಚ್ಚುತ್ತಾ ಹೋಗುತ್ತದೆ. ಆರ್ಬಿಐ ಬಳಿ ಹಣ ಇರಿಸಬೇಕಾದ ಪ್ರಮಾಣ ಕಡಿಮೆಗೊಳ್ಳುವುದರಿಂದ ಬ್ಯಾಂಕುಗಳ ಬಳಿ ಹೆಚ್ಚು ಹಣ ಇರುತ್ತದೆ. ಇದರಿಂದ ಮತ್ತಷ್ಟು ಸಾಲ ಕೊಡಲು ಬ್ಯಾಂಕುಗಳಿಗೆ ಸಾಧ್ಯವಾಗುತ್ತದೆ.
ಈ ರಿಪೋ ದರ ಇಳಿಸಲಾಗಿರುವುದರಿಂದ ಸಾಲಗಳಿಗೆ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ಸಿಆರ್ಆರ್ ಅನ್ನು ಇಳಿಸುವ ಆರ್ಬಿಐ ನಿರ್ಧಾರ ಸರಿಯಾದ ಸಂದರ್ಭದಲ್ಲೇ ಬಂದಿದೆ. ಸಾಲ ಹೆಚ್ಚಾದಾಗ ಜನರ ಖರ್ಚು ವೆಚ್ಚ ಅನುಭೋಗ ಹೆಚ್ಚುತ್ತದೆ. ಇದು ಆರ್ಥಿಕ ಬೆಳವಣಿಗೆಗೆ ಚುರುಕು ಮೂಡಿಸುತ್ತದೆ ಎನ್ನಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ