Starlink: ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ಗೆ ಸಿಕ್ತು ಭಾರತದ ಸೆಟಿಲೈಟ್ ಇಂಟರ್ನೆಟ್ ಸರ್ವಿಸ್ ಲೈಸೆನ್ಸ್
DoT licence to Starlink: ದೂರಸಂಪರ್ಕ ಇಲಾಖೆಯು ಇಲಾನ್ ಮಸ್ಕ್ ಮಾಲಕತ್ವದ ಸ್ಟಾರ್ಲಿಂಕ್ಗೆ ಭಾರತದಲ್ಲಿ ಸೆಟಿಲೈಟ್ ಇಂಟರ್ನೆಟ್ ಸೇವೆ ಆರಂಭಿಸಲು ಜಿಎಂಪಿಸಿಎಸ್ ಲೈಸೆನ್ಸ್ ನೀಡಿದೆ. ಜೊತೆಗೆ, ಟ್ರಯಲ್ ಸ್ಪೆಕ್ಟ್ರಂ ಅನ್ನೂ ನೀಡಲಾಗುತ್ತದೆ. ಈ ಟ್ರಯಲ್ನಲ್ಲಿ ಸ್ಟಾರ್ಲಿಂಕ್ ಎಲ್ಲಾ ನಿಯಮಗಳಿಗೆ ಸಂಬದ್ಧವಾಗಿದ್ದರೆ ಮಾತ್ರ ಕಮರ್ಷಿಯಲ್ ಆಪರೇಷನ್ಸ್ಗೆ ಅನುಮತಿ ಸಿಗಲಿದೆ.

ನವದೆಹಲಿ, ಜೂನ್ 6: ಕೇಂದ್ರ ದೂರಸಂಪರ್ಕ ಇಲಾಖೆಯು (DoT- Department of Telecommunications) ಸ್ಟಾರ್ಲಿಂಕ್ ಸಂಸ್ಥೆಗೆ ಭಾರತದಲ್ಲಿ ಸೇವೆ ನೀಡಲು ಲೈಸೆನ್ಸ್ ಒದಗಿಸಿದೆ. ಸೆಟಿಲೈಟ್ ಇಂಟರ್ನೆಟ್ ಸೇವೆ (SatCom Service) ಒದಗಿಸಲು ಜಿಎಂಪಿಸಿಎಸ್ ಲೈಸೆನ್ಸ್ ಪಡೆದ ಮೂರನೇ ಕಂಪನಿ ಇದಾಗಿದೆ. ಯೂಟೆಲ್ಸ್ಯಾಟ್ನ ಒನ್ವೆಬ್ (EutelSat’s OneWeb) ಮತ್ತು ರಿಲಾಯನ್ಸ್ ಜಿಯೋಗೆ (Reliance Jio) ಈ ಪರವಾನಿಗೆಯನ್ನು ನೀಡಲಾಗಿದೆ. ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ಗೆ ಈ ಲೈಸೆನ್ಸ್ ಸಿಕ್ಕಿರುವ ಹಿನ್ನೆಲೆಯಲ್ಲಿ ಬಹಳ ಶೀಘ್ರದಲ್ಲೇ ಕಮರ್ಷಿಯಲ್ ಆಪರೇಷನ್ಸ್ ಶುರುವಾಗಬಹುದು.
ದೂರ ಸಂವಹನ ಇಲಾಖೆಯು ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯೂನಿಕೇಶನ್ (ಜಿಎಂಪಿಸಿಎಸ್) ಪರವಾನಿಗೆಯನ್ನು (GMPCS license) ಸ್ಟಾರ್ಲಿಂಕ್ಗೆ ಕೊಟ್ಟಿದೆ. ಅಲ್ಲದೆ, ಟ್ರಯಲ್ ಸ್ಟೆಕ್ಟ್ರಂ (trial spectrum) ಅನ್ನೂ ಕೂಡ ನೀಡಲಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
ಟ್ರಯಲ್ ಸ್ಪೆಕ್ಟ್ರಂಗೆ ಸ್ಟಾರ್ಲಿಂಕ್ ಅರ್ಜಿ ಸಲ್ಲಿಸಬೇಕು. ಅದಾಗಿ ಮೂರ್ನಾಲ್ಕು ವಾರದಲ್ಲಿ ಸ್ಪೆಕ್ಟ್ರಂ ನೀಡಲಾಗುತ್ತದೆ. ಆ ನಂತರ, ಸರ್ಕಾರದ ಭದ್ರತಾ ಷರತ್ತುಗಳನ್ನೂ ಒಳಗೊಂಡಂತೆ ಎಲ್ಲಾ ನಿಯಮ ನಿಬಂಧನೆಗಳನ್ನು ಪಾಲಿಸಲಾಗುತ್ತಿದೆಯಾ ಎನ್ನುವುದನ್ನು ಸರ್ಕಾರ ಪರಿಶೀಲಿಸುತ್ತದೆ. ಸರ್ಕಾರಕ್ಕೆ ಇದು ತೃಪ್ತಿಕರ ಎನಿಸಿ ಹಸಿರು ನಿಶಾನೆ ತೋರಿದ ಬಳಿಕವಷ್ಟೇ ಸ್ಟಾರ್ಲಿಂಕ್ ಸಂಸ್ಥೆ ಸೆಟಿಲೈಟ್ ಇಂಟರ್ನೆಟ್ ಸೇವೆಯನ್ನು ಕಮರ್ಷಿಯಲ್ ಆಗಿ ಆರಂಭಿಸಲು ಅವಕಾಶ ಸಿಗುತ್ತದೆ.
ದೂರ ಸಂಪರ್ಕ ಇಲಾಖೆಯ ಅನುಮೋದನೆಯೇನೋ ಸಿಕ್ಕಿದೆ. ಆದರೆ, ಬಾಹ್ಯಾಕಾಶ ಕ್ಷೇತ್ರದ ನಿಯಂತ್ರಕ ಸಂಸ್ಥೆಯಾದ ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಶನ್ ಮತ್ತು ಆಥರೈಸೇಶನ್ ಸೆಂಟರ್ (ಎನ್ ಸ್ಪೇಸ್) ಕೂಡ ಅನುಮತಿಸಬೇಕಾಗುತ್ತದೆ. ಸ್ಟಾರ್ಲಿಂಕ್ ಸಂಸ್ಥೆ ಇದಕ್ಕಾಗಿ ಅರ್ಜಿ ಹಾಕಿ ದಾಖಲೆಗಳನ್ನೂ ಸಲ್ಲಿಸಿದೆ. ಇನ್ನೂ ಅನುಮೋದನೆ ಸಿಕ್ಕಿಲ್ಲ.
ಇಲಾನ್ ಮಸ್ಕ್ ಮಾಲಕತ್ವದ ಸ್ಟಾರ್ಲಿಂಕ್ ಸಂಸ್ಥೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಸೆಟಿಲೈಟ್ ಇಂಟರ್ನೆಟ್ ಸರ್ವಿಸ್ ನೀಡುತ್ತಿದೆ. ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲೂ ಅದು ಈ ಸೇವೆ ಆರಂಭಿಸಿದೆ. ಭಾರತದಲ್ಲೂ ಈ ಸರ್ವಿಸ್ ಒಂದೆರಡು ತಿಂಗಳಲ್ಲಿ ಶುರುವಾಗಬಹುದು.
ಇದನ್ನೂ ಓದಿ: ವಿಶ್ವದ ಟಾಪ್-4 ಗೆ ಪೈಪೋಟಿ ನೀಡಬಲ್ಲ ಭಾರತದ್ದೇ ದೊಡ್ಡ ಕಂಪನಿಗಳ ನಿರ್ಮಾಣಕ್ಕೆ ಸರ್ಕಾರ ಯತ್ನ
ತಿಂಗಳಿಗೆ 850 ರೂಗೆ ಸಿಗುತ್ತಾ ಸ್ಟಾರ್ಲಿಂಕ್ ಇಂಟರ್ನೆಟ್?
ಕಳೆದ ತಿಂಗಳು ಬಂದ ವರದಿಗಳ ಪ್ರಕಾರ ಸ್ಟಾರ್ಲಿಂಕ್ ಸಂಸ್ಥೆ ಭಾರತದಲ್ಲಿ ಬಹಳ ಕಡಿಮೆ ಬೆಲೆ ಇಂಟರ್ನೆಟ್ ಸರ್ವಿಸ್ ಆಫರ್ ಮಾಡಬಹುದು. ಅದರ ಪ್ಲಾನ್ಗಳು ತಿಂಗಳಿಗೆ 850 ರೂನಿಂದ ಆರಂಭವಾಗಬಹುದು. ಅಪರಿಮಿತ ಡಾಟಾ ಒದಗಿಸುವ ಮೂಲಕ ಇಂಟರ್ನೆಟ್ ಮಾರ್ಕೆಟ್ನಲ್ಲಿ ಹೆಜ್ಜೆ ಊರಲು ಸ್ಟಾರ್ಲಿಂಕ್ ಸಂಸ್ಥೆ ಯೋಜಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




