
ಭಾರತದಲ್ಲಿ ಪ್ರಕರಣಗಳನ್ನು ಎದುರಿಸುತ್ತಾ ದೇಶ ಬಿಟ್ಟು ಹೋಗಿರುವ ವ್ಯಕ್ತಿಗಳಲ್ಲಿ ವಿಜಯ್ ಮಲ್ಯ (Vijay Mallya) ಒಬ್ಬರು. ಚಾಣಾಕ್ಷ್ಯ ಉದ್ಯಮಿ, ಕ್ರೀಡಾ ಪ್ರೇಮಿ, ರಾಜಕೀಯದ ಅನುಭವಿ, ರಸಿಕ ಶಿಖಾಮಣಿ ಎಂದೆಲ್ಲಾ ವಿಧದಿಂದ ಗುರುತಿಸಲ್ಪಡುವ ವ್ಯಕ್ತಿತ್ವ ಅವರದ್ದು. ಕಿಂಗ್ಫಿಶರ್ ಏರ್ಲೈನ್ಸ್ ಬಂದ್ ಆದ ಬಳಿಕ ಮಲ್ಯಗೆ ಕೆಟ್ಟ ದೆಸೆ ಆರಂಭವಾಗಿತ್ತು. ಹಣಕಾಸು ಅವ್ಯವಹಾರ, ಸಾಲ ಮರುಪಾವತಿ ಮಾಡದೇ ಇರುವುದು ಸೇರಿದಂತೆ ಕೆಲ ಗುರುತರ ಆರೋಪಗಳು ಎದುರಾದವು. 2016ರಲ್ಲಿ ದೇಶ ಬಿಟ್ಟು ಹೋದವರು ಮತ್ತೆ ಬರಲಿಲ್ಲ. ಇದೀಗ ರಾಜ್ ಶಮಾನಿ ಎಂಬುವವರ ಯೂಟ್ಯೂಬ್ ಪಾಡ್ಕ್ಯಾಸ್ಟ್ನಲ್ಲಿ ಕಾಣಿಸಿಕೊಂಡು ತಮ್ಮ ದೃಷ್ಟಿಕೋನದಲ್ಲಿ ಪ್ರಕರಣಗಳನ್ನು ಬಿಚ್ಚಿಟ್ಟಿದ್ದಾರೆ. ತಾನು ಯಾವ ಕಳ್ಳತನ ಮಾಡಿಲ್ಲ, ಆದರೂ ಕಳ್ಳ ಎನ್ನುತ್ತಾರೆ ಎಂಬುದು ಅವರಿಗಿರುವ ಪ್ರಮುಖ ಆಕ್ಷೇಪ. ಸರ್ಕಾರ ಮತ್ತು ಮಾಧ್ಯಮಗಳು ತಮ್ಮನ್ನು ವಿನಾಕಾರಣ ಟಾರ್ಗೆಟ್ ಮಾಡಿವೆ ಎಂಬುದು ಅವರ ಆರೋಪ.
ವಿಜಯ್ ಮಲ್ಯ ಪ್ರಕಾರ ಅವರು ಬ್ಯಾಂಕುಗಳಿಂದ ಪಡೆದ ಸಾಲ 4,000 ಕೋಟಿ ರೂಗಿಂತ ತುಸು ಹೆಚ್ಚಿರಬಹುದು. ಅದಕ್ಕೆ ಬಡ್ಡಿ ಎಲ್ಲವೂ ಸೇರಿಸಿದರೆ 6,203 ಕೋಟಿ ರೂ ಆಗುತ್ತದೆ. ಆದರೆ, ಸರ್ಕಾರವು ತನ್ನ ಆಸ್ತಿಗಳನ್ನು ಜಫ್ತಿ ಮಾಡಿ 14,131.60 ಕೋಟಿ ರೂ ಗಿಟ್ಟಿಸಿದೆ. ತಾನು ಕೊಡಬೇಕಾದುದಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಹಣ ಪಡೆಯಲಾಗಿದ್ದರೂ ತನ್ನನ್ನು ಇನ್ನೂ ಕೂಡ ಕಳ್ಳ ಎನ್ನುತ್ತಿದ್ದಾರೆ ಎಂದು ಮಲ್ಯ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
ಭಾರತದಲ್ಲಿರುವ ವಿಜಯ್ ಮಲ್ಯ ಅವರ ಅನೇಕ ಆಸ್ತಿಗಳನ್ನು ಇಡಿ ಮತ್ತು ಸಿಬಿಐ, ಮತ್ತು ಬ್ಯಾಂಕುಗಳು ಮುಟ್ಟುಗೋಲು ಹಾಕಿಕೊಂಡಿವೆ. ಇಷ್ಟಾದರೂ ವಿಜಯ್ ಮಲ್ಯ ಬಳಿ ಇನ್ನೂ ಅಪಾರವಾದ ಆಸ್ತಿಪಾಸ್ತಿ ಇವೆ. ವಿಜಯ್ ಮಲ್ಯ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ವ್ಯವಹಾರಗಳನ್ನು ಹೊಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ