Wedding Insurance: ಮದುವೆಗೂ ಇನ್ಷೂರೆನ್ಸ್: ಏನು ಪ್ರಯೋಜನ? ಪ್ರೀಮಿಯಂ ಎಷ್ಟು? ಏನೇನೆಲ್ಲಾ ಕವರ್ ಆಗುತ್ತೆ? ವಿವರ ಇಲ್ಲಿದೆ

|

Updated on: Feb 17, 2023 | 7:04 PM

Insurance for wedding ceremony: ಒಂದು ವೇಳೆ ಮದುವೆ ಮುರಿದುಬಿಟ್ಟರೆ ಬಹಳಷ್ಟು ಹಣ ನೀರಿನಲ್ಲಿ ಹೋಮ ಮಾಡಿದಂತಾಗಿ ಹೋಗುತ್ತದೆ. ಇಂಥ ಅಚಾನಕ್ ಮತ್ತು ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ವೆಡ್ಡಿಂಗ್ ಇನ್ಷೂರೆನ್ಸ್ ಸೂಕ್ತವಾದುದು.

Wedding Insurance: ಮದುವೆಗೂ ಇನ್ಷೂರೆನ್ಸ್: ಏನು ಪ್ರಯೋಜನ? ಪ್ರೀಮಿಯಂ ಎಷ್ಟು? ಏನೇನೆಲ್ಲಾ ಕವರ್ ಆಗುತ್ತೆ? ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಈಗೀಗ ಇನ್ಷೂರೆನ್ಸ್ ಬಹಳ ಉಪಯುಕ್ತ ಎನಿಸುತ್ತಿವೆ. ಅದರಲ್ಲೂ ಕೋವಿಡ್ ಬಂದ ಬಳಿಕ ಜನರಿಗೆ ಇನ್ಷೂರೆನ್ಸ್ ಎಷ್ಟು ಅಗತ್ಯ ಎಂಬುದರ ಅರಿವು ಹೆಚ್ಚೆಚ್ಚು ಆಗತೊಡಗಿದೆ. ಜೀವ ವಿಮೆ, ಆರೋಗ್ಯ ವಿಮೆ, ವಾಹನ ವಿಮೆ, ಕಟ್ಟಡ ವಿಮೆ, ಬೆಂಕಿ ಅವಘಡದ ವಿಮೆ, ಪ್ರವಾಸ ವಿಮೆ ಇತ್ಯಾದಿ ಕೆಲ ರೀತಿಯ ವಿಮೆಗಳು ಲಭ್ಯ ಇವೆ. ಈಗ ಭಾರತದಲ್ಲಿ ವೆಡ್ಡಿಂಗ್ ಇನ್ಷೂರೆನ್ಸ್ ಕೂಡ ಚಾಲನೆಗೆ ಬಂದಿದೆ. ಕೆಲವೊಂದಿಷ್ಟು ಕಂಪನಿಗಳು ವಿವಾಹ ವಿಮೆಯನ್ನು (Wedding Insurance) ಆಫರ್ ಮಾಡುತ್ತಿವೆ.

ವಿವಾಹ ಯಾರದೇ ಜೀವನದಲ್ಲೂ ಜರುಗುವ ಅತ್ಯಂತ ಮಹತ್ವದ ಘಟನೆಗಳಲ್ಲಿ ಒಂದು. ಕೆಲವರು ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಮದುವೆ ಆಗುವುದುಂಟು. ಹೆಚ್ಚಿನ ಸಂದರ್ಭದಲ್ಲಿ ಜನರು ತಮ್ಮ ಶಕ್ತ್ಯಾನುಸಾರ ವೈಭವವಾಗಿ ಮದುವೆ ಸಮಾರಂಭ ಇಟ್ಟುಕೊಳ್ಳುತ್ತಾರೆ. ಬೆಂಗಳೂರಿನಂಥ ನಗರಗಳಲ್ಲಿ ಇಂಥ ಮದುವೆಗೆ ಕನಿಷ್ಠವೆಂದರೂ 10 ಲಕ್ಷ ರೂ ಆಗುತ್ತದೆ. ವೈಭವದ ಮದುವೆಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ. ಒಂದು ವೇಳೆ ಮದುವೆ ಮುರಿದುಬಿಟ್ಟರೆ ಬಹಳಷ್ಟು ಹಣ ನೀರಿನಲ್ಲಿ ಹೋಮ ಮಾಡಿದಂತಾಗಿ ಹೋಗುತ್ತದೆ. ಇಂಥ ಅಚಾನಕ್ ಮತ್ತು ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ವೆಡ್ಡಿಂಗ್ ಇನ್ಷೂರೆನ್ಸ್ ಸೂಕ್ತವಾದುದು. ಮದುವೆ ಮುರಿದುಬೀಳುತ್ತೆ ಅಂತ ಇನ್ಷೂರೆನ್ಸ್ ಮಾಡಿಸಬೇಕಾ ಎಂದು ಕೇಳಬಹುದು. ವಿವಾಹ ಸಮಾರಂಭದಲ್ಲಿ ನಡೆಯಬಹುದಾದ ಅನಿರೀಕ್ಷಿತ ಘಟನೆಗಳಿಂದ ಆಗುವ ಬಹುತೇಕ ಹಾನಿಯನ್ನು ವೆಡ್ಡಿಂಗ್ ಇನ್ಷೂರೆನ್ಸ್ ಭರ್ತಿ ಮಾಡಬಹುದು.

ವೆಡಿಂಗ್ ಇನ್ಷೂರೆನ್ಸ್​ನಿಂದ ಏನೇನು ಕವರೇಜ್?

ಮದುವೆ ಮುರಿದುಬಿದ್ದರೆ, ಮದುವೆ ಮುಂದಕ್ಕೆಹೋದರೆ ಉಂಟಾಗುವ ನಷ್ಟವನ್ನು ಇನ್ಷೂರೆನ್ಸ್ ಕವರ್ ಮಾಡುತ್ತದೆ. ಉದಾಹರಣೆಗೆ ಮದುವೆ ಹಾಲ್​ಗೆ ಹಣ ನೀಡಿದ್ದರೆ, ಡೆಕೋರೇಶನ್, ಊಟ, ಹೋಟೆಲ್, ಟ್ರಾವೆಲ್ ಏಜೆನ್ಸಿ, ಆರ್ಕಿಸ್ಟ್ರಾ, ಓಲಗ ಇತ್ಯಾದಿ ಯಾವುದೇ ಮದುವೆ ಸಂಬಂಧಿತ ಸೇವೆಗೆ ಹಣ ನೀಡಿದ್ದರೆ ಅದನ್ನು ವಿಮೆ ಮೂಲಕ ಕ್ಲೈಮ್ ಮಾಡಬಹುದು.

ಇದನ್ನೂ ಓದಿAadhaar Mitra: ಆಧಾರ್ ಬಗ್ಗೆ ಎಐ ಆಧಾರಿತ ಚಾಟ್​ಬಾಟ್ ಸಹಾಯ; ಏನಿದು ಆಧಾರ್ ಮಿತ್ರಾ?

ಮದುವೆಯ ಯಾವುದೇ ಕಾರ್ಯಕ್ರಮ ಮನೆಯಲ್ಲೇ ನಡೆಯಲಿ, ಚೌಲ್ಟ್ರಿಯಲ್ಲೇ ನಡೆಯಲಿ, ಆ ವೇಳೆ ದುಬಾರಿ ವಸ್ತುಗಳ ಕಳ್ಳತನವಾದರೆ, ಬೆಂಕಿಯಿಂದ ಆಸ್ತಿನಷ್ಟವಾದರೆ, ಸ್ಫೋಟ, ಭೂಕಂಪದಿಂದ ಆಘಾತವಾದರೆ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಯಾರಿಗಾದರೂ ಸಾವು ನೋವು ಆದರೂ ಅದನ್ನೂ ವಿಮೆ ಕವರ್ ಮಾಡುತ್ತದೆ.

ಇಂಥವಕ್ಕೆ ವಿಮೆ ಕವರೇಜ್ ಇರಲ್ಲ, ಗಮನಿಸಿ

ಕಾರ್ಯಕ್ರಮಕ್ಕೆ ಹಾನಿಯಾಗಬಲ್ಲಂತಹ ಅಸಹಜ ವ್ಯವಸ್ಥೆಯನ್ನು ಮಾಡಿದ್ದರೆ ವಿಮೆ ಕವರೇಜ್ ಇರಲ್ಲ. ಯುದ್ಧ, ಭಯೋತ್ಪಾದನೆ, ಕಿಡ್ನಾಪ್, ಆತ್ಮಹತ್ಯೆ, ವಾಯುಮಾಲಿನ್ಯ ಇತ್ಯಾದಿ ಕಾರಣಗಳಿಂದ ಹಾನಿಯಾಗಿದ್ದನ್ನು ಕ್ಲೈಮ್ ಮಾಡಲಾಗುವುದಿಲ್ಲ. ಹಾಗೆಯೇ, ನಿಗದಿತ ಅವಧಿಯಲ್ಲಿ ವಿವಾಹ ಕಾರ್ಯಕ್ರಮ ಪೂರ್ಣಗೊಳಿಸಲು ವಿಫಲವಾದರೂ ಕ್ಲೇಮ್ ಸಿಗುವುದಿಲ್ಲ.

ಇದನ್ನೂ ಓದಿPPI For Foreigners: ವಿದೇಶೀ ಪ್ರವಾಸಿಗರಿಗೆ ಭಾರತದಲ್ಲಿ ಪಿಪಿಐ ವ್ಯವಸ್ಥೆ: ಆರ್​ಬಿಐ ಆಲೋಚನೆ

ಪ್ರೀಮಿಯಂ ಎಷ್ಟು ಕಟ್ಟಬೇಕು?

ಸಾಮಾನ್ಯವಾಗಿ ಏಳು ದಿನಗಳವರೆಗೆ ಇನ್ಷೂರೆನ್ಸ್ ಕವರೇಜ್ ಕೊಡಲಾಗುತ್ತದೆ. ಒಟ್ಟು ಇನ್ಷೂರೆನ್ಸ್ ಮೊತ್ತದ ಶೇ. 0.2ರಿಂದ 0.4ರಷ್ಟು ಪ್ರೀಮಿಯಮ್ ಕಟ್ಟಬೇಕಾಗಬಹುದು. ಉದಾಹರಣೆಗೆ, 40 ಲಕ್ಷಕ್ಕೆ ನೀವು ಇನ್ಷೂರೆನ್ಸ್ ಮಾಡಿಸುವುದಾದರೆ ಸುಮಾರು 15 ಸಾವಿರ ರೂವರೆಗೆ ಪ್ರೀಮಿಯಮ್ ಪಾವತಿಸಬೇಕಾಗಬಹುದು.

ಭಾರತದಲ್ಲಿರುವ ಎಲ್ಲಾ ವಿಮಾ ಕಂಪನಿಗಳು ವೆಡಿಂಗ್ ಇನ್ಷೂರೆನ್ಸ್ ಫೀಚರ್ ಹೊಂದಿಲ್ಲ. ಎಲ್​ಐಸಿಯಲ್ಲಿ ಈ ಪಾಲಿಸಿ ಇಲ್ಲ. ಐಸಿಐಸಿಐ ಲೊಂಬಾರ್ಡ್, ಬಜಾಜ್ ಅಲಾಯನ್ಸ್, ಓರಿಯಂಟೆಲ್ ಇನ್ಷೂರೆನ್ಸ್, ಫ್ಯೂಚರ್ ಜನರಲಿ, ನ್ಯಾಷನಲ್ ಇನ್ಷೂರೆನ್ಸ್ ಕಂಪನಿಗಳಲ್ಲಿ ವಿವಾಹ ವಿಮಾ ಪಾಲಿಸಿಗಳು ಲಭ್ಯ ಇವೆ.

ವ್ಯವಹಾರ ಮತ್ತು ಪರ್ಸನಲ್ ಫೈನಾನ್ಸ್​ನ ಹೆಚ್ಚಿನ ಸುದ್ದಿಗಳು

Published On - 7:04 pm, Fri, 17 February 23